ಕರಾವಳಿಗೆ ಕಾಂಗ್ರೆಸ್ ಸರ್ಕಾರ ಅಂಗೈಯಲ್ಲಿ ಆಕಾಶ ತೋರಿಸಿದೆ: ಕಾಮತ್

ಕರಾವಳಿಗೆ ಕಾಂಗ್ರೆಸ್ ಸರ್ಕಾರ ಅಂಗೈಯಲ್ಲಿ ಆಕಾಶ ತೋರಿಸಿದೆ: ಕಾಮತ್


ಮಂಗಳೂರು: ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳಿಗೇ ಅನುದಾನದ ಕೊರತೆಯಿರುವ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರಾವಳಿಗೆ ಸಾವಿರಾರು ಕೋಟಿ ರೂ.ಗಳ ಯೋಜನೆಗಳನ್ನು ಘೋಷಿಸಿರುವುದು ‘ಅಂಗೈಯಲ್ಲಿ ಆಕಾಶ ತೋರಿಸಿದಂತೆ’ ಆಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದರು.

ನಗರದ ಅಟಲ್ ಸೇವಾ ಕೇಂದ್ರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪುಟ ಸಭೆಗೂ ಮುನ್ನ ಆರ್ಥಿಕ ಇಲಾಖೆ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲೇ ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ. ₹2 ಲಕ್ಷ ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳು ಬಾಕಿ ಇದ್ದು, ಪಿಡಬ್ಲ್ಯುಡಿ, ಜಲಸಂಪನ್ಮೂಲ, ಎಂಐ ಹಾಗೂ ಆರ್‌ಡಿಪಿಆರ್ ಇಲಾಖೆಗಳ ಗುತ್ತಿಗೆದಾರರಿಗೆ ₹36,136 ಕೋಟಿ ಬಾಕಿ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹೊಸ ಘೋಷಣೆಗಳನ್ನು ಮಾಡದಂತೆ ಆರ್ಥಿಕ ಇಲಾಖೆ ಸೂಚಿಸಿದ್ದರೂ ಕರಾವಳಿಗೆ ₹32 ಸಾವಿರ ಕೋಟಿಗೂ ಅಧಿಕ ಮೊತ್ತದ ಯೋಜನೆಗಳನ್ನು ಘೋಷಿಸಿರುವುದು ಪ್ರಚಾರಕ್ಕಾಗಿ ಮಾತ್ರ ಎಂದು ಅವರು ಟೀಕಿಸಿದರು.

ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಸೀ ಆಂಬುಲೆನ್ಸ್, ಡ್ರೆಜಿಂಗ್ ಮಿಷನ್ ಸೇರಿದಂತೆ ಮೀನುಗಾರಿಕಾ ಕ್ಷೇತ್ರದ ಯೋಜನೆಗಳು ಇನ್ನೂ ಅನುಷ್ಠಾನಗೊಂಡಿಲ್ಲ. ಅವು ಜಾರಿಯಾಗಿದ್ದರೆ. ದಾಖಲೆ ಸಹಿತ ಸರ್ಕಾರ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ರಾಜ್ಯದ ಸಾಲದ ಪ್ರಮಾಣ ₹8.25 ಲಕ್ಷ ಕೋಟಿಗೆ ತಲುಪಿದೆ ಎಂದು ಆರೋಪಿಸಿದ ಕಾಮತ್, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾಲದ ಹೊರೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಹೇಳಿದರು. ಸಾರಿಗೆ ನಿಗಮಗಳು ₹8 ಸಾವಿರ ಕೋಟಿ ನಷ್ಟದಲ್ಲಿವೆ ಎಂದು ಸಾರಿಗೆ ಸಚಿವರೇ ತಿಳಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಪರಿಣಾಮ ಅಭಿವೃದ್ಧಿಗೆ ಅನುದಾನ ಕೊರತೆಯಾಗಿದೆ ಎಂದು ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ಈ ಹಿಂದೆ ಹೇಳಿಕೆ ನೀಡಿದ್ದರು ಎಂದರು.

ಪಾಲಿಕೆಗೆ ಅನುದಾನವಿಲ್ಲ

ಮಂಗಳೂರು ಮಹಾನಗರ ಪಾಲಿಕೆಗೆ ಸಮರ್ಪಕ ಅನುದಾನ ನೀಡದೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಕಾಮತ್ ಆರೋಪಿಸಿದರು. ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ–2 ಅಡಿಯಲ್ಲಿ ₹200 ಕೋಟಿ ಘೋಷಿಸಿ ಗುದ್ದಲಿಪೂಜೆ ನಡೆಸಲಾಗಿತ್ತು. ನಗರಾಭಿವೃದ್ಧಿ ಸಚಿವರಾಗಿದ್ದ ಬೈರತಿ ಸುರೇಶ್ ಅವರು ₹25 ಕೋಟಿ ನೀಡುವುದಾಗಿ ಘೋಷಿಸಿದ್ದರೂ ಹಣ ಬಿಡುಗಡೆಯಾಗಿಲ್ಲ ಎಂದು ಹೇಳಿದರು.

ಪಾಲಿಕೆ ಚುನಾವಣೆ ನಡೆಯದೆ ಒಂದೂವರೆ ವರ್ಷ ಕಳೆದಿದ್ದು, ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಆಡಳಿತಾಧಿಕಾರಿ ಮೂಲಕ ಆಡಳಿತ ನಡೆಯುತ್ತಿದೆ. ಎಸ್‌ಎಫ್‌ಸಿ ಅನುದಾನ ಸ್ಥಗಿತಗೊಂಡಿರುವುದರಿಂದ ಪಾಲಿಕೆಯ ಹಣಕಾಸು ಸ್ಥಿತಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಸಿಬ್ಬಂದಿಯ ವೇತನಕ್ಕೂ ಪಾಲಿಕೆಯೇ ಹಣ ಹೊಂದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ನಿಂದ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆಗಾಗಿ ಪಡೆದಿದ್ದ ₹380.34 ಕೋಟಿ ಸಾಲವು ಅಸಲು ಮತ್ತು ಬಡ್ಡಿ ಸೇರಿ ₹1,375.17 ಕೋಟಿಗೆ ಏರಿಕೆಯಾಗಿದೆ ಎಂದು ಅವರು ಹೇಳಿದರು. ಸಾಲ ಮರುಪಾವತಿ ವಿಚಾರದಲ್ಲೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ನಗರದ 60 ವಾರ್ಡ್‌ಗಳಲ್ಲಿ ‘ಭಾರತ್ ಜೋಡೋ’ ಯೋಜನೆ ಅನುಷ್ಠಾನಕ್ಕೆ ಪ್ರತಿ ವಾರ್ಡ್‌ಗೆ ₹10 ಲಕ್ಷದಂತೆ ಸುಮಾರು ₹6 ಕೋಟಿಗೂ ಅಧಿಕ ಮೊತ್ತವನ್ನು ಪಾಲಿಕೆಯೇ ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ವೆನ್ಲಾಕ್‌ನಲ್ಲಿ ಬೆಡ್‌ಗಳ ಕೊರತೆ

ವೆನ್ಲಾಕ್ ಆಸ್ಪತ್ರೆಯಲ್ಲಿ ಐಸಿಯು ಮಾತ್ರವಲ್ಲದೆ ಸಾಮಾನ್ಯ ಬೆಡ್‌ಗಳಿಗೂ ಕೊರತೆ ಉಂಟಾಗಿದೆ ಎಂದು ಕಾಮತ್ ಆರೋಪಿಸಿದರು. ತಾವು ಶಾಸಕರಾಗಿ ಆಯ್ಕೆಯಾದಾಗ ಆಸ್ಪತ್ರೆಯಲ್ಲಿ 16 ಐಸಿಯು ಬೆಡ್‌ಗಳಿದ್ದವು. ಕೋವಿಡ್ ಅವಧಿಯಲ್ಲಿ ಬಿಜೆಪಿ ಸರ್ಕಾರದ ಸಹಕಾರದಿಂದ 115ಕ್ಕೂ ಅಧಿಕ ಐಸಿಯು ಹಾಗೂ 250ಕ್ಕೂ ಅಧಿಕ ಆಕ್ಸಿಜನ್ ಬೆಡ್‌ಗಳನ್ನು ಸಜ್ಜುಗೊಳಿಸಲಾಗಿತ್ತು. ಆದರೆ ಇದೀಗ ಸಾಮಾನ್ಯ ಬೆಡ್‌ಗಳಿಗೂ ಕೊರತೆ ಎದುರಾಗಿರುವುದು ಸರ್ಕಾರದ ಆರೋಗ್ಯ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪೂರ್ಣಿಮಾ, ರಮೇಶ್ ಹೆಗ್ಡೆ, ಭಾನುಮತಿ, ಪ್ರವೀಣ್ ಕುಮಾರ್, ದಿವಾಕರ್ ಲಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article