‘ಐಟಿ- ಬಿಟಿ ಕ್ಷೇತ್ರಕ್ಕೆ ಪೂರಕವಾದ ಮೂಲಭೂತ ಸೌಕರ್ಯ ಕಲಿಸಲು ರಾಜ್ಯ ಸರಕಾರ ಬದ್ಧ’: ಎಲ್.ಕೆ.ಅತೀಕ್
ಮಂಗಳೂರಿನ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಬುಧವಾರ ‘ಮಂಗಳೂರು ಟೆಕ್ನೋವಾಂಝ-2026’ ಆರನೇ ಆವೃತ್ತಿಯ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯವಾಗಿ ಮೈಸೂರು, ಮಂಗಳೂರು, ಉಡುಪಿ, ಹುಬ್ಬಳ್ಳಿ- ಧಾರವಾಡ ಮತ್ತು ಬೆಳಗಾವಿ ಇವುಗಳಲ್ಲಿ ಮೂರು ಕ್ಲಸ್ಟರ್ಗಳು ಭರವಸೆಯನ್ನು ತೋರಿಸುತ್ತಿದ್ದು, ಹುಬ್ಬಳ್ಳಿ- ಧಾರವಾಡ ಉತ್ಪಾದನೆ, ರಕ್ಷಣೆ, ಏರೋಸ್ಪೇಸ್ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ. ಐಟಿ-ಬಿಟಿ ಕ್ಷೇತ್ರದ ಬಗ್ಗೆ ಮಂಗಳೂರು- ಉಡುಪಿ ಭಾಗ ಅತ್ಯಂತ ಪ್ರಸಕ್ತವಾಗಿದ್ದು, ಇಲ್ಲಿ ಸ್ಮಾರ್ಟ್, ಪರಿಸರ ಸ್ನೇಹಿ ಹಾಗೂ ಜಲಕ್ರೀಡೆಗಳಿಗಳಿಗೆ ಪೂರಕವಾದ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕಾಗಿದೆ. ಇಲ್ಲಿ ಸರ್ಫಿಂಗ್ ಪೂರಕವಾದ ಸಮುದ್ರ ಕಿನಾರೆಗಳಿದ್ದು, ಕಳೆದ ಮೂರ್ನಾಲ್ಕು ವರ್ಷಗಳಿಂದ ದೇಶದ ಸರ್ಫಿಂಗ್ ರಾಜಧಾನಿಯಾಗಿ ಮಂಗಳೂರು ರೂಪುಗೊಂಡಿದೆ. ವಿದೇಶಗಳಿಂದ ಜಲ ಕ್ರೀಡಾಸಕ್ತರು ಬಂದು ಮಂಗಳೂರಿನ ಹೋಂಸ್ಟೇಗಳಲ್ಲಿ ಉಳಿದ ಸರ್ಫಿಂಗ್ ಮಾಡುತ್ತಾರೆ. ಹಾಗಾಗಿ ನಾವು ಐಟಿ-ಬಿಟಿಯ ಜೊತೆಗೆ ಇತರ ಪ್ರವಾಸೋದ್ಯಮದ ಆಯಾಮಾಗಳನ್ನು ನೋಡಬೇಕಾಗಿದೆ ಎಂದವರು ಹೇಳಿದರು.
ಕರ್ನಾಟಕ ಕರಾವಳಿ ಹೂಡಿಕೆಗೆ ವಿಶ್ವದರ್ಜೆಯ ಅತ್ಯಂತ ಸ್ವಚ್ಛ, ಸುರಕ್ಷಿತ ಹಾಗೂ ಆಸಕ್ತಿದಾಯಕ ನಗರವಾಗಿದೆ. ಸುಂದರವಾದ ಕರಾವಳಿ ತೀರಗಳಿವೆ. ಪಶ್ಚಿಮ ಘಟ್ಟವಿದೆ. ಉತ್ತಮ ಜೀವನಕ್ಕೆ ಪೂರಕವಾದ ಎಲ್ಲವೂ ಇದೆ. ಈ ನಿಟ್ಟಿನಲ್ಲಿ ಹೂಡಿಕೆದಾರನ್ನು ಆಕರ್ಷಿಸುವ ಕೆಲಸವಾಗಬೇಕು. ಕಳೆದ ಮೂರು ವರ್ಷಗಳಿಂದೀಚೆಗೆ ಈ ನಿಟ್ಟಿನಲ್ಲಿ ಸ್ಥಳೀಯ ಉದ್ಯಮದ ಆಧಾರ ಸ್ತಂಭಗಳಾಗಿರುವ ರೋಹಿತ್ ಭಟ್, ಗೌರವ್ ಸೇರಿದಂತೆ ಹಲವು ಉದ್ಯಮಿಗಳಿಂದ ಇಲ್ಲಿ ಪೂರಕ ಪ್ರಕ್ರಿಯೆಗಳು ನಡೆದು ಐಟಿ ಕ್ಷೇತ್ರದಲ್ಲಿ ಗಮರ್ನಾಹ ಬೆಳವಣಿಗೆಗಳಾಗಿವೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಉದ್ಯಮ ಮತ್ತು ಶಿಕ್ಷಣ ಸಹಯೋಗವನ್ನು ಆಳವಾಗಿ ಬೆಳೆಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು)ನ ಪಠ್ಯಕ್ರಮದ ಬಗ್ಗೆ ಚರ್ಚೆ ನಡೆಯುತ್ತಿದೆ. ಆ ಪಠ್ಯ ಕ್ರಮವು ಹಳೆಯದಾಗಿದ್ದು, ಶಿಕ್ಷಣ ಪೂರೈಸಿ ಉದ್ಯಮಕ್ಕೆ ಸಿದ್ಧರಾದ ಪದವೀಧರರನ್ನು ಅಲ್ಲಿ ಉತ್ಪಾದಿಸಲಾಗುತ್ತಿರುವುದು ಕಂಡು ಬಂದಿಲ್ಲ ಎಂಬುದು ಹೆಚ್ಚಿನ ಸಮೀಕ್ಷೆಗಳಿಂದ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಉದ್ಯಮ ಸಿದ್ಧ ಪದವೀಧರನ್ನು ರೂಪಿಸಲು ಕೋರ್ಸ್ ಗಳ ಅಗತ್ಯವಿದ್ದು, ರಾಜ್ಯ ಸರಕಾರ ಎಐ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಮುಂದಾಗಿದೆ ಎಂದು ಎಲ್.ಕೆ. ಅತೀಕ್ ಹೇಳಿದರು.
ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೀನುಗಾರಿಕಾ ಕಾಲೇಜನ್ನು ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾನಿಲಯವಾಗಿ ಪರಿವರ್ತಿಸುವ ನಿರ್ಧಾರ ಕೈಗೊಂಡಿರುವುದು ಮಹತ್ವದ ಹೆಜ್ಜೆಯಾಗಿದೆ. ಇಂತಹ ಶಿಕ್ಷಣ ಸಂಸ್ಥೆಗಳು ಕೈಗಾರಿಕಾ ಬೆಳವಣಿಗೆಗೆ ಅಗತ್ಯವಾದ ಸಂಶೋಧನೆ ಮತ್ತು ಮಾನವ ಸಂಪನ್ಮೂಲವನ್ನು ಒದಗಿಸಬಲ್ಲವು ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸರಕಾರವು ಬೆಂಗಳೂರಿನಿಂದ ಹೊರಗೆ ಐಟಿ ಬಿಟಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕರಾವಳಿಯಲ್ಲಿ ಅಗತ್ಯ ಮೂಲಸೌಕರ್ಯವನ್ನು ಅತ್ಯಂತ ಜವಾಬ್ದಾರಿಯುತ, ಪರಿಸರ ಸ್ನೇಹಿ ಮತ್ತು ಸುಸ್ಥಿರವಾಗಿ ರಚಿಸಲು ಮುಂದಾಗಿದೆ. ಈಗಾಗಲೇ ಬೆಂಗಳೂರು ಸಂಚಾರ ದಟ್ಟಣೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇಲ್ಲಿನ ಸಾರ್ವಜನಿಕರು ಈಗಾಗಲೇ ಮಂಗಳೂರನ್ನು ಮತ್ತೊಂದು ಬೆಂಗಳೂರು ಮಾಡಬೇಡಿ ಎಂದು ನನ್ನನ್ನು ಎಚ್ಚರಿಸುತ್ತಿದ್ದಾರೆ. ಈಗಾಗಲೇ ರಾಜ್ಯಕ್ಕೆ ಸುಸ್ಥಿತರ ಡೇಟಾ ಸೆಂಟರ್ ನೀತಿಯನ್ನು ಘೋಷಿಸಲಾಗಿದೆ. ಕರಾವಳಿಯಲ್ಲಿ ನೀರು ಹೇರಳವಾಗಿರುವುದರಿಂದ ಡೇಟಾ ಸೆಂಟರ್ ನಿರ್ಮಾಣಕ್ಕೂ ಪ್ರಸಕ್ತವಾಗಿದೆ. ಇದಕ್ಕಾಗಿ ಕೇಬಲ್ ಲ್ಯಾಂಡಿಂಗ್ ಸ್ಟೇಷನ್ ಗಾಗಿ ಹೂಡಿಕೆದಾರರು, ಹೊಸ ಟೆಕ್ ಪಾರ್ಕ್ ಗಳನ್ನು ಎದುರು ನೋಡಲಾಗುತ್ತಿದೆ. ಭವಿಷ್ಯದ ಸಿಂಗಾಪುರ, ದುಬೈ ಆಗುವ ಎಲ್ಲಾ ರೀತಿಯ ಸಾಮರ್ಥ್ಯವನ್ನು ಕರಾವಳಿ ಹೊಂದಿದೆ ಎಂದರು.
ಉದ್ಘಾಟನಾ ಸಮಾರಂಭದ ವೇಳೆ ಅಸೆಂಚರ್ ಇಂಡಿಯಾದ ಹಿರಿಯ ದೇಶೀಯ ಆಡಳಿತ ನಿರ್ದೇಶಕ ಅಜಯ್ ವಿಜಿ ಹಾಗೂ ಟೆಕ್ ಮಹೀಂದ್ರಾದ ಮುಖ್ಯ ಅಧಿಕಾರಿ ರಿಚರ್ಡ್ ಲೋಬೋ ಅವರ ಜೊತೆ ಕೆಡಿಇಎಂನ ಸಿಇಒ ಸಂಜೀವ್ ಕುಮಾರ್ ಗುಪ್ತಾ ಸಂವಾದವನ್ನು ನಿರ್ವಹಿಸಿದರು.