ಅತಿ ವೇಗದ ಚಾಲನೆ: ಹೈಟೆನ್ಶನ್ ವಿದ್ಯುತ್ ಕಂಬಕ್ಕೆ ಬಡಿದು ಕಾರು ಪಲ್ಟಿ
ಮಂಗಳೂರು: ಅತೀ ವೇಗದಲ್ಲಿ ಬಂದ ಕಾರೊಂದು ರಸ್ತೆ ಬದಿಯಲ್ಲಿದ್ದ ಹೈವೋಲ್ವೇಜ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು ಅದರ ಮೇಲೆಯೇ ಕಂಬ ಬಿದ್ದು ಕಾರು ಅಪ್ಪಚ್ಚಿಯಾದ ಘಟನೆ ನಗರದ ಮರೋಳಿಯಲ್ಲಿ ನಡೆದಿದೆ. ಅಪಘಾತದ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನೆಯಲ್ಲಿ ಪವಾಡ ರೀತಿಯಲ್ಲಿ ಕಾರಿನ ಡ್ರೈವರ್ ಹಾಗು ಸಹ ಪ್ರಯಾಣಿಕ ಎಸ್ಕೇಪ್ ಆಗಿದ್ದಾರೆ. ಸೆ.20ರ ರಾತ್ರಿ 10.30ರ ಸುಮಾರಿಗೆ ಘಟನೆ ನಡೆದಿದ್ದು ಪಡೀಲ್ ಕಡೆಯಿಂದ ನಂತೂರಿನತ್ತ ಅತಿ ವೇಗವಾಗಿ ಬಂದ ಕಾರು ಸೂರ್ಯ ವುಡ್ಸ್ ಎದುರಲ್ಲಿ ರಸ್ತೆಯಿಂದ ಹತ್ತು ಅಡಿ ದೂರವಿದ್ದ ಹೈಟೆನ್ಶನ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ವಿದ್ಯುತ್ ಕಂಬ ಮುರಿದು ನೇರವಾಗಿ ಕಾರಿನ ಮೇಲೆ ಬಿದ್ದಿದ್ದು ಕಾರು ಸಂಪೂರ್ಣ ಜಖಂ ಆಗಿದೆ. ಘಟನೆಯಲ್ಲಿ ಡ್ರೈವರ್ ಹಾಗು ಸಹ ಪ್ರಯಾಣಿಕ ಹೆಚ್ಚಿನ ಅಪಾಯಗಳಿಲ್ಲದೆ ಪಾರಾಗಿದ್ದು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಾಲಕನ ಅಜಾಗರೂಕತೆ ಮತ್ತು ಅತೀ ವೇಗವಾಗಿ ಕಾರನ್ನು ಚಲಾಯಿಸಿದ್ದರಿಂದ ಘಟನೆಯಾಗಿದ್ದು ಕಾರು ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೆಸ್ಕಾಂ ಕುಲಶೇಖರ ವಿಭಾಗದ ಇಂಜಿನಿಯರ್ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ.