ಮತದಾರರ ಪಟ್ಟಿಯಿಂದ ಯುವ ಮತದಾರರನ್ನು ದೂರವಿಡಲು ಷಡ್ಯಂತ್ರ: ಪಿ.ವಿ. ಮೋಹನ್ ಆರೋಪ

ಮತದಾರರ ಪಟ್ಟಿಯಿಂದ ಯುವ ಮತದಾರರನ್ನು ದೂರವಿಡಲು ಷಡ್ಯಂತ್ರ: ಪಿ.ವಿ. ಮೋಹನ್ ಆರೋಪ


ಮಂಗಳೂರು: ಯುವ ಪೀಳಿಗೆ (ಜೆನ್ ಝೀ) ತನ್ನ ವಿರುದ್ಧ ಇದೆ ಎಂಬುದನ್ನು ಅರಿತುಕೊಂಡಿರುವ ಕೇಂದ್ರ ಬಿಜೆಪಿ ಸರಕಾರವು ಚುನಾವಣಾ ಆಯೋಗವನ್ನು ಬಳಸಿ ಎಸ್‌ಐಆರ್‌ನಲ್ಲಿ ಹೊಸ ಮತದಾರರ ಸೇರ್ಪಡೆ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಿ ತಡೆಯೊಡ್ಡುವ ಕೆಲಸ ಮಾಡುತ್ತಿದೆ. ಚುನಾವಣಾ ಆಯೋಗ ಬಿಜೆಪಿ ಘಟಕದಂತೆ ಕಾರ್ಯಾಚರಿಸುತ್ತಿದೆ ಎಂದು ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ವಿ. ಮೋಹನ್ ಆರೋಪಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಮತದಾರರ ನೋಂದಣಿಗೆ ಬಳಸುವ ಫಾರಂ-6ನ್ನು ಅತಿಯಾಗಿ ಸಂಕೀರ್ಣಗೊಳಿಸಲಾಗಿದೆ. ಮುಂಬರುವ ಉತ್ತರ ಪ್ರದೇಶ ಚುನಾವಣೆ ಸೇರಿದಂತೆ ವಿವಿಧ ರಾಜ್ಯಗಳ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಯುವ ಮತದಾರರನ್ನು ಮತದಾನ ಪ್ರಕ್ರಿಯೆಯಿಂದ ದೂರವಿಡಲು ನಡೆಸಿದ ಷಡ್ಯಂತ್ರ ಇದಾಗಿದೆ ಎಂದು ಆರೋಪಿಸಿದರು. 

ಫಾರಂ-7 ಬಳಸಿ ಅರ್ಹರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವುದೂ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಆಕ್ಷೇಪಿಸಿದರು.

ದೇಶದ 30 ರಾಜ್ಯಗಳಲ್ಲಿ ಎಸ್‌ಐಆರ್ ಹೆಸರಿನಲ್ಲಿ ಸುಮಾರು 13 ಕೋಟಿ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಮಹಾ ಸಂಚು ನಡೆದಿದೆ. ಕರ್ನಾಟಕದಲ್ಲಿ ಒಟ್ಟು 5.54 ಕೋಟಿ ಮತದಾರರ ಪೈಕಿ ಕರಡು ಪಟ್ಟಿಯಲ್ಲಿ 1.08 ಕೋಟಿ ಮತದಾರರ ಹೆಸರನ್ನು ಕೈಬಿಡಲಾಗಿದೆ. ಅದರಲ್ಲಿ ಪರಿಶೀಲನೆ ನಡೆಸಿ ಮರಳಿ ಸೇರಿಸಿದ್ದು ಕೇವಲ 6 ಲಕ್ಷ. ಅದೇ ಕೇರಳದಲ್ಲಿ 24 ಲಕ್ಷ ಮತದಾರರ ಹೆಸರನ್ನು ತೆಗೆದುಹಾಕಲಾಗಿತ್ತು. ಆದರೆ ಅಲ್ಲಿನ ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ತೆರಳಿ ತಪಾಸಣೆ ನಡೆಸಿ ಬಹುತೇಕರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿದ್ದು, ಈಗ ಕೇವಲ 53,224 ಮತಗಳ ವ್ಯತ್ಯಾಸ ಮಾತ್ರ ಇದೆ. ಆದರೆ ಕರ್ನಾಟಕದಲ್ಲಿ ಮಾತ್ರ 1 ಕೋಟಿ ಮತದಾರರನ್ನು ಪಟ್ಟಿಗೆ ಸೇರಿಸದೆ ದೂರ ಇರಿಸಿದ ಕಾರಣವೇನು ಎಂದು ಪಿ.ವಿ. ಮೋಹನ್ ಪ್ರಶ್ನಿಸಿದರು.

ಬಿಜೆಪಿಯ ಚುನಾವಣೆ ನಿರ್ವಹಿಸುವ, ಬಿಜೆಪಿ ರಾಜ್ಯ ನಾಯಕರೊಬ್ಬರಿಗೆ ಸೇರಿದ ಖಾಸಗಿ ಸಲಹಾ ಸಂಸ್ಥೆಗೆ ಚುನಾವಣಾ ಆಯೋಗದ ಮತದಾರರ ಪಟ್ಟಿ ಮತ್ತು ದತ್ತಾಂಶವನ್ನು ನೇರವಾಗಿ ಪಡೆಯುವ ಅನುಮತಿ ನೀಡಲಾ ಗಿದೆ ಎಂದು ಗಂಭೀರ ಆರೋಪ ಮಾಡಿದ ಅವರು, ಈ ಕುರಿತು ತನಿಖಾ ವರದಿ ಮಾಡುವ ಅತ್ಯವಿದೆ ಎಂದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಿದರೆ ಮತ್ತೊಬ್ಬ ಅಧಿಕಾರಿಯನ್ನು ತಂದು ಕೂರಿಸುತ್ತಾರೆ. ಯಾರ ಒತ್ತಡದ ಮೇರೆಗೆ ಅಕ್ರಮಗಳು ನಡೆದಿವೆ ಎಂಬುದನ್ನು ಬಯಲಿಗೆಳೆದು ‘ಅಪ್ರೂವರ್’ ಆಗಿ ಸಾಕ್ಷ್ಯ ನುಡಿಯಬೇಕು. ಇಲ್ಲವಾದರೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಪಿ.ವಿ. ಮೋಹನ್ ಹೇಳಿದರು.

ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಮಮತಾ ಗಟ್ಟಿ, ಶುಭೋದಯ ಆಳ್ವ, ಅಪ್ಪಿ, ಯೋಗೀಶ್ ಕುಮಾರ್, ಶಾಂತಲಾ ಗಟ್ಟಿ, ಟಿ.ಕೆ. ಸುಧೀರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article