ಜ್ಞಾನೇಶ್ ಕುಮಾರ್  ಪಕ್ಷಪಾತ ಧೋರಣೆಗೆ ಖಂಡನೆ: ಸೆ.28 ರಂದು ಕಾಂಗ್ರೆಸ್ ಪ್ರತಿಭಟನೆ

ಜ್ಞಾನೇಶ್ ಕುಮಾರ್ ಪಕ್ಷಪಾತ ಧೋರಣೆಗೆ ಖಂಡನೆ: ಸೆ.28 ರಂದು ಕಾಂಗ್ರೆಸ್ ಪ್ರತಿಭಟನೆ


ಮಂಗಳೂರು: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಪಕ್ಷಪಾತ ಧೋರಣೆ ವಿರುದ್ಧ ಸೆ.28ರಂದು ಬೆಳಗ್ಗೆ 10.30ಕ್ಕೆ ನಗರದ ಪಂಪ್‌ವೆಲ್ ಜಂಕ್ಷನ್‌ನಿಂದ ಪಡೀಲ್ ಪ್ರಜಾಸೌಧ ತನಕ ಬೃಹತ್ ಮೆರವಣಿಗೆ ಹಾಗೂ ನಂತರ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಅಡಿಪಾಯವಾಗಿರುವ ಚುನಾವಣಾ ಆಯೋಗ ಪಕ್ಷಪಾತ ಧೋರಣೆ ತೋರುತ್ತಿದ್ದು, ಅದರ ವಿಶ್ವಾಸಾರ್ಹತೆ ಗಂಭೀರ ಪ್ರಶ್ನೆಗೆ ಒಳಗಾಗಿದೆ. ಹಾಗಾಗಿ ಮುಖ್ಯ ಚುನಾವಣಾ ಆಯುಕ್ತರು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಹಾಗೂ ಕೇಂದ್ರ ಸರಕಾರ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ನಿಗಮ ಮಂಡಳಿಗಳ ಅಧ್ಯಕ್ಷರು, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಾಗೂ ಪ್ರಜಾಪ್ರಭುತ್ವಪ್ರೇಮಿ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. 

ಚುನಾವಣಾ ಆಯುಕ್ತರಾದ ಡಾ.ಸುಖ್ಬೀರ್ ಸಿಂಗ್ ಸಂಧು ಮತ್ತು ಡಾ.ವಿವೇಕ್ ಅವರ 14 ಆಕ್ಷೇಪಣೆಗಳನ್ನು ಲೆಕ್ಕಿಸದೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಏಕಪಕ್ಷೀಯವಾಗಿ ಹಾಗೂ ಪಕ್ಷಪಾತದಿಂದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಒಂದು ವರ್ಷದ ಹಿಂದೆಯೇ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ದನಿ ಎತ್ತಿದ್ದರು. ಅವರ ‘ವೋಟ್ ಚೋರಿ’ (ಮತ ಕಳವು) ಆರೋಪಗಳು ಇಂದಿನ ಬೆಳವಣಿಗೆಗಳಿಂದ ನಿಜವೆಂದು ಸಾಬೀತಾಗುತ್ತಿವೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಮಹಾದೇವಪುರ ಕ್ಷೇತ್ರದಲ್ಲಿ ನಡೆದ ಅಕ್ರಮಗಳು ಇದಕ್ಕೆ ಸ್ಪಷ್ಟ ನಿದರ್ಶನ ಎಂದು ಅವರು ಹೇಳಿದರು. 

ತುಳುವಿಗೆ ಎರಡನೇ ಭಾಷೆಯ ಸ್ಥಾನಮಾನ ಸಿಗುವಲ್ಲಿ ಎಲ್ಲ ಪಕ್ಷದ ಕೊಡುಗೆಯೂ ಇದೆ. ಅದನ್ನು ಅನುಷ್ಠಾನ ಮಾಡಿದ ಕೀರ್ತಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ. ಇದು ತುಳುನಾಡಿನ ಜನರ ಅಸ್ಮಿತೆ ಮತ್ತು ಸ್ವಾಭಿಮಾನದ ಸಂಕೇತವಾಗಿದೆ. ಆದರೆ, ಮಾಜಿ ಸಂಸದ ಪ್ರತಾಪ್ಸಿಂಹ ‘ಇದರಿಂದ ಏನು ಲಾಭ?’ ಎನ್ನುವ ಮೂಲಕ ತುಳುನಾಡಿನ ಸಮಸ್ತ ಜನರ ಭಾವನೆಗೆ ಧಕ್ಕೆ ತಂದಿದ್ದಾರೆ. ಅವರು ತಕ್ಷಣವೇ ತುಳುನಾಡಿನ ಜನರ ಕ್ಷಮೆ ಯಾಚಿಸಬೇಕು. ಜಿಲ್ಲೆಯ ಬಿಜೆಪಿ ನಾಯಕರು ಅವರಿಗೆ ಬುದ್ಧಿಮಾತು ಹೇಳಬೇಕು ಎಂದರು. ಮಂಗಳೂರಿನಲ್ಲಿ ನಡೆದ ಐತಿಹಾಸಿಕ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರಕಾರ 16,000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಯೋಜನೆಗಳನ್ನು ಘೋಷಿಸಿದೆ. ಮಂಗಳೂರನ್ನು ಹೂಡಿಕೆದಾರರ ಕೇಂದ್ರವಾಗಿಸಲು ಇನ್ವೆಸ್ಟರ್ಸ್ ಮೀಟ್ ಹಾಗೂ ಆಸ್ಪತ್ರೆ, ರಸ್ತೆ, ಬಂದರುಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಆದರೆ ಬಿಜೆಪಿ ನಾಯಕರು ಕೇವಲ ರಾಜಕೀಯ ಲಾಭಕ್ಕಾಗಿ ಪ್ರತಿಬಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಉಚಿತ ಕೊಡುಗೆಗಳೆಂದು ಅಪಹಾಸ್ಯ ಮಾಡಿದ ಬಿಜೆಪಿ ನಾಯಕರು, ಅದೇ ಯೋಜನೆಗಳನ್ನು ಬೇರೆ ರಾಜ್ಯಗಳಲ್ಲಿ ಕಾಪಿ ಮಾಡಿ ಮೋದಿ ಗ್ಯಾರಂಟಿ ಹೆಸರಿನಲ್ಲಿ ಪ್ರಚಾರ ಮಾಡುತ್ತಾರೆ. ಆದರೆ ತಮ್ಮ ಆಡಳಿತವಿರುವ ರಾಜ್ಯಗಳಲ್ಲಿ ಅವುಗಳನ್ನು ಅನುಷ್ಟಾನಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು. 

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಮಮತಾ ಗಟ್ಟಿ, ಅಪ್ಪಿ, ಲ್ಯಾನ್ಸಿಲೋಟ್ ಪಿಂಟೊ, ಶಶಿಧರ ಹೆಗ್ಡೆ, ಅನಿಲ್ ಕುಮಾರ್, ಮೋಹನ್ ಕೋಟ್ಯಾನ್, ಅಬ್ದುಲ್ ಸಲೀಮ್, ಶುಭೋದಯ ಆಳ್ವ, ಸುಭಾಸ್ ಶೆಟ್ಟಿ, ಪುರುಷೋತ್ತಮ ಚಿತ್ರಾಪುರ, ಅಶೋಕ್ ಡಿ.ಕೆ. ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article