‘ಶೋಷಿತ ಸಮುದಾಯಗಳ ಸಮಗ್ರ ಸಬಲೀಕರಣ ಮಾಡುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯ’: ಬಿ.ಕೆ. ಹರಿಪ್ರಸಾದ್

‘ಶೋಷಿತ ಸಮುದಾಯಗಳ ಸಮಗ್ರ ಸಬಲೀಕರಣ ಮಾಡುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯ’: ಬಿ.ಕೆ. ಹರಿಪ್ರಸಾದ್


ಮಂಗಳೂರು: ರಾಜ್ಯ ಹಾಗೂ ದೇಶದಲ್ಲಿ ಹಿಂದುಳಿದ ವರ್ಗಗಳು, ದಲಿತರು ಮತ್ತು ಶೋಷಿತ ಸಮುದಾಯಗಳ ಸಮಗ್ರ ಸಬಲೀಕರಣ ಮಾಡುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವೇ ಹೊರತು, ಇದು ಯಾರದ್ದೋ ಪಿತ್ರಾರ್ಜಿತ ಆಸ್ತಿಯಲ್ಲ. ಬೆವರು ಸುರಿಸಿ ದುಡಿಯುವ ಜನಸಾಮಾನ್ಯರ ತೆರಿಗೆ ಹಣದಿಂದಲೇ ಬೆಂಗಳೂರು ಮತ್ತು ದೆಹಲಿಯ ಖಜಾನೆಗಳು ತುಂಬುತ್ತಿದ್ದು, ಅದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಗೂ ಸಮಾನವಾಗಿ ಹಂಚಿಕೆಯಾಗಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.

ನಗರದಲ್ಲಿ ಇಂದು ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಹಾಗೂ ಸಾರ್ವಜನಿಕ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾರಾಯಣ ಗುರು ಅಭಿವೃದ್ಧಿ ನಿಗಮದ ಮೂಲಕ ಹಿಂದುಳಿದ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ ಮತ್ತು ವಿದ್ಯಾರ್ಥಿವೇತನ ಒದಗಿಸಲು ಸರ್ಕಾರ ಬದ್ಧವಾಗಿರಬೇಕು. ಸರ್ಕಾರಗಳು ಕೇವಲ ಬಾಯಿಮಾತಿನಲ್ಲಿ ಹೇಳಿದರೆ ಸಾಲದು, ಅದಕ್ಕಾಗಿ ಅಗತ್ಯ ಹಣಕಾಸು ಮತ್ತು ಯೋಜನೆಗಳನ್ನು ಒದಗಿಸುವುದು ಸರ್ಕಾರದ ಪ್ರಾಥಮಿಕ ಕರ್ತವ್ಯ" ಎಂದರು.

"ಜನರು ಕಟ್ಟುವ ತೆರಿಗೆಯಿಂದಲೇ ಖಜಾನೆ ತುಂಬುತ್ತದೆ. ಆ ಹಣ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಸಮಾನವಾಗಿ ವಿನಿಯೋಗವಾಗಬೇಕು. ಸಮಾಜ ಸುಧಾರಣೆ ಆಗಬೇಕಾದರೆ ಸರ್ಕಾರಗಳು ಸಾಮಾಜಿಕ ನ್ಯಾಯದ ಸರಿಯಾದ ನೀತಿ-ನಿಯಮಗಳನ್ನು ರೂಪಿಸಿ ಜಾರಿಗೊಳಿಸಬೇಕು. ಇಲ್ಲವಾದರೆ ಅಂತಹ ಸರ್ಕಾರಗಳನ್ನು ಬದಲಾಯಿಸುವ ಸಂವಿಧಾನಬದ್ಧ ಶಕ್ತಿ ಪ್ರತಿಯೊಬ್ಬ ಮತದಾರನ ಕೈಯಲ್ಲಿದೆ" ಎಂದು ಅವರು ಹೇಳಿದರು.

ಹಿಂದುಳಿದ ವರ್ಗದ ಮಕ್ಕಳಿಗೆ ಸೂಕ್ತ ಆರ್ಥಿಕ ನೆರವು ಸಿಕ್ಕರೆ ಎಂತಹ ಅದ್ಭುತ ಸಾಧನೆ ಮಾಡಬಹುದು ಎಂಬುದಕ್ಕೆ ನೈಜ ಉದಾಹರಣೆಯನ್ನು ಅವರು ಇದೇ ಸಂದರ್ಭದಲ್ಲಿ ನೀಡಿದರು. ಉತ್ತರ ಕನ್ನಡ ಜಿಲ್ಲೆಯ ಬಸ್ ಕಂಡಕ್ಟರ್ ಮಗಳು, ತಂದೆಯ ಅಗಲಿಕೆಯ ನಂತರ ತಾಯಿ ಮನೆಕೆಲಸ ಮಾಡಿ ಸಾಕಿದ ಬಡ ಬಿಲ್ಲವ ಸಮುದಾಯದ ಹೆಣ್ಣುಮಗಳು ಐಐಟಿ ಪರೀಕ್ಷೆಯಲ್ಲಿ ಇಡೀ ಕರ್ನಾಟಕದಲ್ಲೇ ಏಕೈಕ ವಿದ್ಯಾರ್ಥಿನಿಯಾಗಿ 84ನೇ ರ‍್ಯಾಂಕ್ ಪಡೆದಿದ್ದಳು. ಆದರೆ ಶುಲ್ಕ ಕಟ್ಟಲು ಹಣವಿಲ್ಲದೆ ಕಣ್ಣೀರಿಡುತ್ತಾ ನನ್ನ ಬಳಿ ಬಂದಿದ್ದರು. ಆಗ ನಾವು ಉದ್ಯಮಿ ನವೀನ್‌ಚಂದ್ರ ಸುವರ್ಣ ಅವರ ವಿದ್ಯಾ ನಿಧಿಯ ಮೂಲಕ ರೂಪಾಯಿ 3.50 ಲಕ್ಷ ಶುಲ್ಕ ಹಾಗೂ 50,000 ಬಟ್ಟೆ-ಖರ್ಚಿಗೆ ನೆರವು ಕೊಡಿಸಿದೆವು. ಇಂದು ಅದೇ ಬಡ ಹುಡುಗಿ ಖರಗ್ಪುರ ಐಐಟಿಯಲ್ಲಿ ಉನ್ನತ ವ್ಯಾಸಂಗ ಮುಗಿಸಿ, ಪ್ರತಿ ತಿಂಗಳಿಗೆ 3.50 ಲಕ್ಷ ರೂಪಾಯಿ ಸಂಬಳ ಪಡೆಯುವ ಮಟ್ಟಕ್ಕೆ ಬೆಳೆದು ನಿಂತಿದ್ದಾಳೆ. ಬಡತನ ಪ್ರತಿಭೆಗೆ ಅಡ್ಡಿಯಾಗಬಾರದು, ನಮ್ಮ ಮಕ್ಕಳಿಗೆ ಅವಕಾಶ ಕಲ್ಪಿಸಿದರೆ ಅಸಾಧ್ಯವಾದುದನ್ನು ಸಾಧಿಸಿ ತೋರಿಸುತ್ತಾರೆ" ಎಂದು ಹೇಳಿದರು.

ಧಾರ್ಮಿಕ ಆಡಂಬರಗಳಿಗಿಂತ ಶೈಕ್ಷಣಿಕ ಜಾಗೃತಿಗೆ ಕರೆ ನೀಡಿದ ಅವರು, "ಕೋಟಿ-ಕೋಟಿ ರೂಪಾಯಿ ಖರ್ಚು ಮಾಡಿ ಬ್ರಹ್ಮಕಲಶ, ನೇಮೋತ್ಸವ ಮಾಡುತ್ತೇವೆ. ಆದರೆ ಶಾಲೆ ನಡೆಸಲು ಹಣವಿಲ್ಲದೆ ಬೆಂಗಳೂರಿಗೆ ಬಂದು ಅಂಗಲಾಚುವ ದುಸ್ಥಿತಿಯಿದೆ. ದೇಶದಲ್ಲಿ ಈಗಾಗಲೇ 33 ಕೋಟಿ ದೇವರುಗಳು, ಕೋಟ್ಯಂತರ ದೇವಸ್ಥಾನಗಳಿವೆ. ಸಾಕು, ಇನ್ಮುಂದೆ ನೀವು ದಾನ ಮಾಡುವುದಿದ್ದರೆ ದೇವಸ್ಥಾನಗಳಿಗಿಂತ ಹೆಚ್ಚಾಗಿ ಸರಸ್ವತಿ ಮಂದಿರಗಳಿಗೆ, ಶಿಶು ಮಂದಿರಗಳಿಗೆ, ಶಾಲಾ-ಕಾಲೇಜುಗಳಿಗೆ ದಾನ ನೀಡಿ. ನಮ್ಮ ಹೆಣ್ಣುಮಕ್ಕಳಿಗೆ ವಿದ್ಯೆಯ ಶಕ್ತಿ ನೀಡಿ" ಎಂದು ಕರೆ ನೀಡಿದರು.

ಐಎಎಸ್-ಕೆಎಎಸ್ ಅಧಿಕಾರಿಗಳಾಗಿ: 

"ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಎಸ್‌ಎಸ್‌ಎಲ್ಸಿ, ಪಿಯುಸಿ ಫಲಿತಾಂಶದಲ್ಲಿ ಸದಾ ನಂಬರ್ ಒನ್. ಹೆಣ್ಣುಮಕ್ಕಳೇ ಮುಂಚೂಣಿಯಲ್ಲಿರುತ್ತಾರೆ. ಆದರೆ ನಂತರ ಹುಡುಕಿದರೆ ನಮ್ಮ ಸಮುದಾಯಗಳಿಂದ ಒಬ್ಬ ಐಎಎಸ್ ಇಲ್ಲ, ಕೆಎಎಸ್ ಇಲ್ಲ. ಕೇವಲ ಪುಸ್ತಕದ ಬದನೆಕಾಯಿಯಾದರೆ ಸಾಲದು, ಆಡಳಿತಾತ್ಮಕ ಹುದ್ದೆಗಳನ್ನು ಹಿಡಿದು ಸಮಾಜವನ್ನು ಮುನ್ನಡೆಸಬೇಕು" ಎಂದು ಅವರು ಸಲಹೆ ನೀಡಿದರು.

"ನಿನ್ನೆ ಮಂಗಳೂರಿಗೆ ಬಂದಾಗ ಕೊರಗ ಸಮುದಾಯದ ಮುಖಂಡರು ನನ್ನನ್ನು ಭೇಟಿಯಾದರು. ಇಂದಿಗೂ ಆ ಸಮುದಾಯದ ಕುಟುಂಬಗಳಿಗೆ ಒಂದು ಗುಂಟೆ, ಒಂದು ಸೆಂಟ್ ಸ್ವಂತ ಜಾಗವಿಲ್ಲದಿರುವುದು ನಾಚಿಕೆಗೇಡು. ಸಂವಿಧಾನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಎಷ್ಟು ಹಕ್ಕಿದೆಯೋ, ಅಷ್ಟೇ ಹಕ್ಕು ಕಟ್ಟಕಡೆಯ ಕೊರಗ ವ್ಯಕ್ತಿಗೂ ಇದೆ. ಸಮಬಾಳು, ಸಮಪಾಲು ತತ್ವದಡಿ ಎಲ್ಲರಿಗೂ ನ್ಯಾಯ ಸಿಗುವಂತಾಗಬೇಕು" ಎಂದು ಪ್ರತಿಪಾದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article