ಮಂಗಳೂರು ರೈಲ್ವೆ ವಲಯದ ಆಡಳಿತಾತ್ಮಕ ವರ್ಗಾವಣೆ: ಮೈಸೂರು-ಪಾಲಕ್ಕಾಡ್ ಅಧಿಕಾರಿಗಳ ಸಭೆ

ಮಂಗಳೂರು ರೈಲ್ವೆ ವಲಯದ ಆಡಳಿತಾತ್ಮಕ ವರ್ಗಾವಣೆ: ಮೈಸೂರು-ಪಾಲಕ್ಕಾಡ್ ಅಧಿಕಾರಿಗಳ ಸಭೆ

ಮಂಗಳೂರು: ಮಂಗಳೂರು ರೈಲ್ವೆ ವಲಯವನ್ನು ಪಾಲಕ್ಕಾಡ್ ವಿಭಾಗದಿಂದ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ದಕ್ಷಿಣ ಪಶ್ಚಿಮ ರೈಲ್ವೆಯ ಮೈಸೂರು ವಿಭಾಗ ಹಾಗೂ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಹಿರಿಯ ಅಧಿಕಾರಿಗಳು ಈ ವಾರ ಮಂಗಳೂರಿನಲ್ಲಿ ಸಭೆ ನಡೆಸಲಿದ್ದಾರೆ.

ವಲಯದ ಆಸ್ತಿಗಳ ಹಸ್ತಾಂತರ, ರೈಲು ಕಾರ್ಯಾಚರಣೆ ಹಾಗೂ ಸಿಬ್ಬಂದಿ ಜವಾಬ್ದಾರಿಗಳ ವರ್ಗಾವಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳು ಚರ್ಚಿಸಿ ಮುಂದಿನ ಕ್ರಮಗಳನ್ನು ಅಂತಿಮಗೊಳಿಸಲಿದ್ದಾರೆ.

ರೈಲ್ವೆ ಸಚಿವಾಲಯವು ಆಗಸ್ಟ್ 21ರಂದು ಮಂಗಳೂರು ರೈಲ್ವೆ ವಲಯವನ್ನು ಆಡಳಿತಾತ್ಮಕ ಕಾರಣಗಳಿಗಾಗಿ ಮೈಸೂರು ವಿಭಾಗದೊಂದಿಗೆ ಸಂಯೋಜಿಸುವ ನಿರ್ಧಾರ ಕೈಗೊಂಡಿತ್ತು. ಅಕ್ಟೋಬರ್ 1ರಿಂದ ಕೋಚಿಂಗ್ ಮತ್ತು ಸರಕು ರೈಲುಗಳ ಕಾರ್ಯಾಚರಣೆಗಳು ಯಾವುದೇ ಅಡಚಣೆಯಿಲ್ಲದೆ ಮುಂದುವರಿಯುವಂತೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.

ಪ್ರಸ್ತುತ ದಕ್ಷಿಣ ಪಶ್ಚಿಮ ರೈಲ್ವೆಯ ವ್ಯಾಪ್ತಿ ಉಳ್ಳಾಲ ರೈಲು ನಿಲ್ದಾಣದವರೆಗೆ ದಕ್ಷಿಣದಲ್ಲಿ ಹಾಗೂ ಪಡೀಲ್ ಮೂಲಕ ತೋಕೂರುವರೆಗೆ ಉತ್ತರದಲ್ಲಿ ವಿಸ್ತರಿಸಿದೆ. ಸುಮಾರು 39 ಕಿ.ಮೀ. ವ್ಯಾಪ್ತಿಯ ಮಂಗಳೂರು ರೈಲ್ವೆ ವಲಯದಲ್ಲಿ, ಆಡಳಿತಾತ್ಮಕ ಬದಲಾವಣೆಯ ಬಳಿಕ ಮೈಸೂರು ವಿಭಾಗದ ವ್ಯಾಪ್ತಿ ಉಳ್ಳಾಲದವರೆಗೆ ಸುಮಾರು 30 ಕಿ.ಮೀ. ಇರಲಿದೆ.

ಸಿಬ್ಬಂದಿ ವರ್ಗಾವಣೆ ತಕ್ಷಣ ಇಲ್ಲ..

ಮಂಗಳೂರು ರೈಲ್ವೆ ವಲಯದ ಕಾರ್ಯಾಚರಣೆ ಮತ್ತು ಸಿಬ್ಬಂದಿ ವ್ಯವಸ್ಥೆಯಲ್ಲಿ ತಕ್ಷಣ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 2,000 ಮಂದಿ ಸಿಬ್ಬಂದಿ ಮಂಗಳೂರು ವಲಯದಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಪಾಲಕ್ಕಾಡ್ ವಿಭಾಗದಿಂದ ಮೈಸೂರು ವಿಭಾಗಕ್ಕೆ ವಲಯದ ಜವಾಬ್ದಾರಿ ಹಸ್ತಾಂತರವಾದರೂ, ರೈಲ್ವೆ ಸಚಿವಾಲಯದ ನಿಯಮಗಳ ಪ್ರಕಾರ ಸಿಬ್ಬಂದಿಯ ವರ್ಗಾವಣೆ ಅಥವಾ ಸ್ಥಳಾಂತರ ನಡೆಯಲಿದೆ. ಸದ್ಯಕ್ಕೆ ಮಂಗಳೂರಿನಿಂದ ಸಿಬ್ಬಂದಿಯನ್ನು ತಕ್ಷಣ ವರ್ಗಾಯಿಸುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರಮುಖ ರೈಲ್ವೆ ಕೇಂದ್ರವಾಗಿ ಮಂಗಳೂರು..

ಮಂಗಳೂರು ರೈಲ್ವೆ ವಲಯವು ಪಾಲಕ್ಕಾಡ್ ವಿಭಾಗದ ಪ್ರಮುಖ ಕಾರ್ಯಾಚರಣಾ ಕೇಂದ್ರವಾಗಿದೆ. ಕೋಚಿಂಗ್ ಮತ್ತು ಸರಕು ರೈಲುಗಳ ನಿರ್ವಹಣೆಯಲ್ಲೂ ಇದು ಮಹತ್ವದ ಪಾತ್ರ ವಹಿಸುತ್ತಿದೆ.

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪ್ರತಿದಿನ ಸುಮಾರು 30 ರೈಲುಗಳ ಆಗಮನ-ನಿರ್ಗಮನ ನಡೆಯುತ್ತದೆ. ಮಂಗಳೂರು ಜಂಕ್ಷನ್ ಉತ್ತರ ಕರ್ನಾಟಕ ಮತ್ತು ಕೇರಳವನ್ನು ಸಂಪರ್ಕಿಸುವ ಪ್ರಮುಖ ರೈಲು ಕೇಂದ್ರವಾಗಿದ್ದು, ಸುಮಾರು 70 ರೈಲುಗಳ ನಿಲುಗಡೆ ಹಾಗೂ ಸುಮಾರು 10 ರೈಲುಗಳ ಆರಂಭ ಅಥವಾ ಅಂತ್ಯ ಇಲ್ಲಿ ನಡೆಯುತ್ತದೆ.

ಮಂಗಳೂರು ಸೆಂಟ್ರಲ್‌ನಲ್ಲಿ ಪಾಲಕ್ಕಾಡ್ ವಿಭಾಗದ ಪ್ರಮುಖ ಕೋಚಿಂಗ್ ಡಿಪೋ ಕೂಡ ಇದೆ. ಇಲ್ಲಿ ಸುಮಾರು 17 ಜೋಡಿ ಪ್ರಯಾಣಿಕ ಹಾಗೂ ಎಕ್ಸ್‌ಪ್ರೆಸ್ ರೈಲುಗಳ 450 ಕೋಚ್‌ಗಳಿಗೆ ಮೂರು ಪಿಟ್‌ಲೈನ್‌ಗಳು ಮತ್ತು ಒಂದು ಸಿಕ್‌ಲೈನ್‌ಗಳಲ್ಲಿ ಪ್ರಾಥಮಿಕ ನಿರ್ವಹಣೆ ಮಾಡಲಾಗುತ್ತಿದೆ.

ಪ್ರತಿದಿನ ಸರಾಸರಿ 20 ರೈಲುಗಳ ಸುಮಾರು 240 ಕೋಚ್‌ಗಳಿಗೆ ಪ್ಲಾಟ್‌ಫಾಮ್ ಟ್ರೈನ್ ಎಕ್ಸಾಮಿನೇಷನ್ (ಪಿಟಿಆರ್) ನಡೆಯುತ್ತದೆ. ಮಂಗಳೂರು ಸೆಂಟ್ರಲ್‌ನಲ್ಲಿ ಸಿಬ್ಬಂದಿಗಾಗಿ 63 ಹಾಸಿಗೆಗಳ ರನ್ನಿಂಗ್ ರೂಂ ಇದ್ದು, ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ಹಾಸಿಗೆಗಳ ವ್ಯವಸ್ಥೆಯೂ ಇದೆ.

ಮಂಗಳೂರು ಜಂಕ್ಷನ್‌ನಲ್ಲಿ ಸರಕು ಮತ್ತು ವ್ಯಾಗನ್ ಪರಿಶೀಲನಾ ಡಿಪೋ, ಡೀಸೆಲ್ ಇಂಧನ ತುಂಬುವ ಕೇಂದ್ರ ಹಾಗೂ ಸಿಬ್ಬಂದಿಗಾಗಿ ರನ್ನಿಂಗ್ ರೂಂ ಇದೆ. ಪಣಂಬೂರು ಯಾರ್ಡ್ ನವ ಮಂಗಳೂರು ಬಂದರಿಗೆ ಸರಕು ಸಾಗಣೆಯ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಮಂಗಳೂರು ರೈಲ್ವೆ ವಲಯವನ್ನು ಮೈಸೂರು ವಿಭಾಗಕ್ಕೆ ಸೇರಿಸುವ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ಈ ವಾರದ ಅಧಿಕಾರಿಗಳ ಸಭೆ ಮಹತ್ವ ಪಡೆದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article