ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಶಿಕ್ಷಕರ ದಿನಾಚರಣೆ
ಈ ಸಂದರ್ಭದಲ್ಲಿ ಕರ್ನಾಟಕ ವಿಧಾನಪರಿಷತ್ ಸದಸ್ಯ ಪಿ.ವಿ. ಮೋಹನ್ ಮಾತನಾಡಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರಪತಿಯಾಗುವ ಮೊದಲು ಓರ್ವ ಶ್ರೇಷ್ಠ ಶಿಕ್ಷಕರಾಗಿದ್ದು, ಶಿಕ್ಷಣ ರಂಗಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿದ್ದರು. ಶಿಕ್ಷಣವೇ ಈ ದೇಶದ ದೊಡ್ಡ ಸಂಪತ್ತು. ಪ್ರಜಾಪ್ರಭುತ್ವದ ಪಾಠ ತರಗತಿಯ ಕೊಠಡಿಯಲ್ಲಿಯೇ ಆಗಬೇಕು. ಶಿಕ್ಷಕರಿಗೆ ನೀಡುವಂತಹ ಗೌರವ ಸಿಗಲೇಬೇಕು. ಯಾವುದೇ ಒಳ್ಳೆಯ ಬೆಳವಣಿಗೆ ಆಗಬೇಕಾದರೆ ಶಿಕ್ಷಕರ ಭೋದನೆ ಅಗತ್ಯ. ಆದ್ದರಿಂದ, ಕಾಂಗ್ರೆಸ್ ಪಕ್ಷದಿಂದ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸುತ್ತಿರುವುದು ಅರ್ಥಪೂರ್ಣ ಆಗಿರುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಜೆ.ಆರ್. ಲೋಬೊ ಮಾತನಾಡಿ, ವಿದ್ಯಾರ್ಥಿಗಳಿಗೆ ಮನೆಯಲ್ಲಿ ತಂದೆ ತಾಯಿಯ ನಂತರ ಶಾಲೆಯಲ್ಲಿ ಶಿಕ್ಷಕರೇ ಮಾರ್ಗದರ್ಶಕರಾಗಿರುತ್ತಾರೆ. ಶಿಕ್ಷಕರು ತನ್ನಲ್ಲಿರುವ ಜ್ಞಾನ ಮತ್ತು ಶಿಸ್ತನ್ನು ವಿದ್ಯಾರ್ಥಿಗಳಿಗೆ ಅರ್ಪಿಸುತ್ತಾರೆ. ಸಮಾಜವು ಒಳ್ಳೆಯ ಸ್ಥಾನದಲ್ಲಿ ಇರಬೇಕಾದರೆ ಶಿಕ್ಷಕರು ಅತೀ ಮುಖ್ಯ ಎಂದರು.
ಈ ಸಂದರ್ಭದಲ್ಲಿ ನಗರದ ಕಾಸ್ಸಿಯ ಪ್ರೌಢ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಗ್ರೇಸಿ ಮರಿಯಾ ಡಿಸೋಜಾ, ಉಳ್ಳಾಲ ಬಿ.ಎಂ. ಶಾಲೆಯ ನಿವೃತ್ತ ಶಿಕ್ಷಕಿ ಉಷಾ ಎಂ., ಪಿ.ಎ. ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕಿಯರಾದ ದೀಪ್ತಿ ಉದ್ಯಾವರ ಮತ್ತು ದೀಪ್ತಿ ರಿನೆಟ್ ಡಿಸೋಜಾ, ಪ್ರೆಸ್ಟೀಜ್ ಶಾಲೆಯ ಶಿಕ್ಷಕಿಯರಾದ ಮುಫೀದಾ ಹುನೈಸ್ ಇಲ್ಯಾಸ್ ಮತ್ತು ಫಾಹಿಜ್ಹಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಡೆನಿಸ್ ಡಿಸಿಲ್ವ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಪ್ರಭಾಕರ್ ಶ್ರೀಯಾನ್, ಶುಭೋದಯ ಆಳ್ವ, ಟಿ.ಕೆ. ಸುಧೀರ್, ಶಫೀಕ್, ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಲಿಯಾಕತ್ ಶಾಹ, ಸುಮನ್ ದಾಸ್, ತನ್ವಿರ್ ಶಾಹ ಮೊದಲಾದವರು ಉಪಸ್ಥಿತರಿದ್ದರು.
ದಕ್ಷಿಣ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ರಮಾನಂದ ಪೂಜಾರಿ ಸ್ವಾಗತಿಸಿ, ದಕ್ಷಿಣ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಆಸೀಫ್ ಅಹ್ಮದ್ ಬೆಂಗ್ರೆ ವಂದಿಸಿದರು. ನಗರ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಉದಯ ಕುಂದರ್ ಕಾರ್ಯಕ್ರಮ ನಿರೂಪಿಸಿದರು.