ಶಿಕ್ಷಕರ ದಿನಾಚರಣೆಗೆ ಅರ್ಥಪೂರ್ಣ ಆಚರಣೆ
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಜೆಕಾರು ಜ್ಯೋತಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿಯವರಾದ ಸಿಸ್ಟರ್ ಕ್ರಿಸ್ಟಿಲ್ಲ ಬಿ. ಎಸ್. ಅವರು ಮಾತನಾಡಿ, ತಮ್ಮ ಹೆಮ್ಮೆಯ ಶಿಷ್ಯರಾದ ಜ್ಞಾನಸುಧಾ ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಅವರ ಸಾಧನೆಯನ್ನು ಶ್ಲಾಘಿಸಿದರು.
ಮುಖ್ಯ ಅತಿಥಿ ಮರ್ಣೆ ಗ್ರಾಮ ಪಂಚಾಯತ್‌ನ ಅಜೆಕಾರು ನಿಕಟಪೂರ್ವ ಅಧ್ಯಕ್ಷರಾದ ಪ್ರಭಾವತಿ ನಾಯಕ್ ಅವರು ಶುಭಾಶಯ ಕೋರಿ, ಮುಂದಿನ ದಿನಗಳಲ್ಲಿ ಜ್ಞಾನಸುಧಾ ಸಂಸ್ಥೆಯು ಇತಿಹಾಸದ ಪುಟಗಳಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ನಿರ್ಮಿಸಲಿ ಎಂದು ಹಾರೈಸಿದರು.
ಸನ್ಮಾನಿತರಾದ ನಿವೃತ್ತ ಶಿಕ್ಷಕ ಶಾಂತಿರಾಜ್ ಹೆಗ್ಡೆ ಅವರು ಮಾತನಾಡಿ, ಪರಿಪಕ್ವತೆಯನ್ನು ಕಲಿಸಿಕೊಡುವ ಗುರುವಿಗೆ ಸದಾ ಗೌರವ ಸಲ್ಲಿಸಬೇಕು ಎಂದರು. “ಮೊದಲು ಮಡಿಲು, ಆಮೇಲೆ ಹೆಗಲು” ಎಂಬ ಅರ್ಥಪೂರ್ಣ ನುಡಿಯ ಮೂಲಕ ಹೆತ್ತ ತಾಯಿ ಹಾಗೂ ಹೊತ್ತ ಭೂಮಿಯ ಮಹತ್ವವನ್ನು ಕೊಂಡಾಡಿದರು.
ಮತ್ತೋರ್ವ ಸನ್ಮಾನಿತ ನಿವೃತ್ತ ಶಿಕ್ಷಕ ಭಾಸ್ಕರ್ ಶೆಟ್ಟಿ ಅವರು ಮಾತನಾಡಿ, ತರಗತಿ ಕೋಣೆಯಲ್ಲಿ ಗುರುಗಳಿಂದ ದೊರೆಯುವ ಮೌಲ್ಯಯುತ ಶಿಕ್ಷಣವು ಉತ್ತಮ ನಾಗರಿಕರನ್ನು ರೂಪಿಸುವುದರೊಂದಿಗೆ ದೇಶದ ಪ್ರಗತಿಗೂ ಕಾರಣವಾಗುತ್ತದೆ ಎಂದರು. ದೇಶದ ಅಭಿವೃದ್ಧಿಯ ಕೈಂಕರ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಎಲ್ಲ ಗುರುಗಳಿಗೆ ವಂದನೆಗಳನ್ನು ಸಲ್ಲಿಸಿದರು.
ಜ್ಞಾನಸುಧಾ ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, “ಹುಟ್ಟು ಮತ್ತು ಸಾವಿನ ಮಧ್ಯೆ ಉಸಿರಾಡುವ ಈ ಮಾನವ ಜೀವನದಲ್ಲಿ ಗುರುಗಳಾದವರು ತಮ್ಮ ಉಸಿರಿನ ಒಂದು ಭಾಗವನ್ನು ನಮ್ಮ ಉಸಿರಿಗೆ ಸೇರಿಸಿ, ನಮ್ಮ ಬಾಳನ್ನು ಹಸಿರು ಮಾಡಿದವರು. ಅವರೇ ನಮ್ಮ ಹೆಮ್ಮೆಯ ಶಿಕ್ಷಕರು” ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸರ್ವ ಶಿಕ್ಷಕ ವೃಂದಕ್ಕೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಜೆಕಾರು ಪದ್ಮಗೋಪಾಲ್ ಎಜುಕೇಷನ್ ಟ್ರಸ್ಟ್‌ನ ಟ್ರಸ್ಟಿಗಳಾದ ವಿದ್ಯಾ ಹಾಗೂ ಅನಿಲ್ ಕುಮಾರ್ ಜೈನ್, ಪ್ರಾಂಶುಪಾಲರಾದ ಸಂತೋಷ್, ಉಪಪ್ರಾಂಶುಪಾಲೆಯಾದ ಆರತಿ, ಸಹಾಯಕ ಸಾರ್ವಜನಿಕ ಸಂಪರ್ಕಾಧಿಕಾರಿಯಾದ ರಾಮಚಂದ್ರ ನೆಲ್ಲಿಕಾರ್, ಸರ್ವ ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಸಂತೋಷ್ ಅವರು ಸರ್ವರನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳು ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದರು. ಶಿಕ್ಷಕರಾದ ಆರತಿ, ರಾಮಚಂದ್ರ ನೆಲ್ಲಿಕಾರ್, ನಿಶ್ಮಿತಾ, ಸುಲತಾ ಹಾಗೂ ವಿಜೇತಾರಾಣಿ ಅವರು ಸನ್ಮಾನ ಪತ್ರಗಳನ್ನು ವಾಚಿಸಿದರು.
ಡಾ. ಪ್ರಿಯಾಂಕಾ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ಸರ್ವರನ್ನು ವಂದಿಸಿದರು.