ಗ್ರಾಹಕ ಜಾಗೃತಿ ಪ್ರಮಾಣಪತ್ರ ಕೋರ್ಸ್ ಉದ್ಘಾಟನೆ: ಒಡಂಬಡಿಕೆ ಪತ್ರಕ್ಕೆ ಸಹಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ವಹಿಸಿ, ಮಾತನಾಡಿ, ಕೋರ್ಸ್ ಆರಂಭಿಸುವ ಉದ್ದೇಶವನ್ನು ವಿವರಿಸಿ, ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕೋರ್ಸ್‌ನಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷೆ ಸುನಂದ ಕೆ. ಮಾತನಾಡಿ, ಗ್ರಾಹಕರ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಜಾಗೃತರಾಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯದರ್ಶಿ ಸುನಂದ ದಂಬೇಕೋಡಿ ಮಾತನಾಡಿ, ಕೋರ್ಸ್‌ನ ರೂಪರೇಖೆಯನ್ನು ವಿವರಿಸಿ, ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಸಮಾಜಕ್ಕೆ ಮಾರ್ಗದರ್ಶನ ನೀಡುವಂತೆ ತಿಳಿಸಿದರು.
ಅತಿಥಿಗಳು ಪಠ್ಯಪುಸ್ತಕವನ್ನು ಅನಾವರಣಗೊಳಿಸುವ ಮೂಲಕ ಕೋರ್ಸ್‌ಗೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಕಾಲೇಜು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟದ ನಡುವೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು.
ಕಾರ್ಯಕ್ರಮದಲ್ಲಿ ಸುಮಾರು 55 ವಿದ್ಯಾರ್ಥಿಗಳು ಭಾಗವಹಿಸಿ ಕೋರ್ಸ್‌ಗೆ ನೋಂದಾಯಿಸಿಕೊಂಡರು. ಆಂತರಿಕ ಗುಣಮಟ್ಟ ಭರವಸೆ ಕೋಶ ಸಂಯೋಜಕ ದೇವಿಪ್ರಸಾದ್, ಸಹ ಸಂಯೋಜಕಿ ಡಾ. ಜ್ಯೋತಿಪ್ರಿಯಾ ಮತ್ತು ಇತರ ಬೋಧಕ ವರ್ಗದವರು ಉಪಸ್ಥಿತರಿದ್ದರು.
ಗ್ರಾಹಕ ಜಾಗೃತಿ ವೇದಿಕೆಯ ಸಂಚಾಲಕಿ ವಂದನ ಕೆ. ಆರ್. ಅವರು ಕಾರ್ಯಕ್ರಮವನ್ನು ಸಂಯೋಜಿಸಿ, ನಿರೂಪಿಸಿದರು.