‘ಡ್ರಗ್ಸ್ ಮುಕ್ತ ಮಂಗಳೂರು’: ಸಕಾರಾತ್ಮಕ ಫಲಿತಾಂಶ

‘ಡ್ರಗ್ಸ್ ಮುಕ್ತ ಮಂಗಳೂರು’: ಸಕಾರಾತ್ಮಕ ಫಲಿತಾಂಶ


ಮಂಗಳೂರು: ‘ಡ್ರಗ್ಸ್ ಮುಕ್ತ ಮಂಗಳೂರು’ ಅಭಿಯಾನದ ಭಾಗವಾಗಿ ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಕಾಲೇಜುಗಳಲ್ಲಿ ನಡೆದಿರುವ ವಿದ್ಯಾರ್ಥಿಗಳ ಮಾದಕ ವಸ್ತು ತಪಾಸಣೆ ಹಾಗೂ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಸಕಾರಾತ್ಮಕ ಹಾಗೂ ಆಶಾದಾಯಕ ಫಲಿತಾಂಶಗಳು ಕಂಡುಬಂದಿವೆ. 

ಈ ವರ್ಷ ಕಮಿಷನರೆಟ್ ವ್ಯಾಪ್ತಿಯ ವಿವಿಧ ಕಾಲೇಜುಗಳ ಒಟ್ಟು 8,310 ವಿದ್ಯಾರ್ಥಿಗಳನ್ನು ಡ್ರಗ್ಸ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 98 ವಿದ್ಯಾರ್ಥಿಗಳಲ್ಲಿ ಮಾದಕ ವಸ್ತು ಸೇವನೆ ದೃಢಪಟ್ಟಿತ್ತು. ಪಾಸಿಟಿವ್ ವರದಿ ಬಂದಿದ್ದ ವಿದ್ಯಾರ್ಥಿಗಳನ್ನು ತಕ್ಷಣವೇ ಕಾಲೇಜು ಆಡಳಿತ ಮಂಡಳಿ ಹಾಗೂ ಪೋಷಕರ ನೆರವಿನಿಂದ 6 ತಿಂಗಳ ಕಾಲ ನಿರಂತರ ಕೌನ್ಸೆಲಿಂಗ್‌ಗೆ ಒಳಪಡಿಸಲಾಗಿತ್ತು. ಆರು ತಿಂಗಳ ಸಮಾಲೋಚನೆ ಹಾಗೂ ಕೌನ್ಸೆಲಿಂಗ್ ಬಳಿಕ ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಬದಲಾವಣೆಯನ್ನು ದೃಢಪಡಿಸಲು ಸೆ.10ರಂದು ಪ್ರಥಮ ಹಂತದಲ್ಲಿ ಪಾಸಿಟಿವ್ ಬಂದಿದ್ದವರ ಪೈಕಿ 50 ವಿದ್ಯಾರ್ಥಿಗಳನ್ನು ಮತ್ತೆ ಮರು ಪರೀಕ್ಷೆಗೆ ಒಳಪಡಿಸಲಾಯಿತು.

ಈ ವೇಳೆ 38 ವಿದ್ಯಾರ್ಥಿಗಳ ಫಲಿತಾಂಶ ನೆಗೆಟಿವ್ ಬಂದಿದ್ದು, ಅವರು ಮಾದಕ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತೊರೆದಿರುವುದು ದೃಢಪಟ್ಟಿದೆ. ಕೌನ್ಸೆಲಿಂಗ್‌ಗೆ ಒಳಪಟ್ಟವರಲ್ಲಿ ಶೇ. 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಪೂರ್ಣವಾಗಿ ಡ್ರಗ್ಸ್ ಮುಕ್ತರಾಗಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಆದರೆ, ಮರು ಪರೀಕ್ಷೆಗೆ ಒಳಗಾದ 12 ವಿದ್ಯಾರ್ಥಿಗಳಲ್ಲಿ ಮತ್ತೆ ಮಾದಕ ವಸ್ತು ಸೇವನೆಯ ಪಾಸಿಟಿವ್ ವರದಿ ಬಂದಿದೆ. ಈ ವಿದ್ಯಾರ್ಥಿಗಳ ಕುರಿತು ಪೋಷಕರು ಹಾಗೂ ಕಾಲೇಜು ಆಡಳಿತ ಮಂಡಳಿಯು ಹೆಚ್ಚಿನ ನಿಗಾ ವಹಿಸಬೇಕು ಮತ್ತು ಸಮಾಲೋಚನಾ ಪ್ರಕ್ರಿಯೆಯನ್ನು ಮತ್ತಷ್ಟು ತೀವ್ರಗೊಳಿಸಿ ಮುಂದುವರಿಸಬೇಕು ಎಂದು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article