ಜಾತಿ ಧರ್ಮದ ಬದಲು ಅಧ್ಯಾತ್ಮಿಕವಾಗಿ ನೋಡಿದಾಗ ನಾರಾಯಣ ಗುರುಗಳ ನಿಜರೂಪ ಕಾಣುವುದು: ವರದರಾಜ್ ಮಟ್ಟು ಕಡಪಾಡಿ

ಜಾತಿ ಧರ್ಮದ ಬದಲು ಅಧ್ಯಾತ್ಮಿಕವಾಗಿ ನೋಡಿದಾಗ ನಾರಾಯಣ ಗುರುಗಳ ನಿಜರೂಪ ಕಾಣುವುದು: ವರದರಾಜ್ ಮಟ್ಟು ಕಡಪಾಡಿ


ಮಂಗಳೂರು: ನಾರಾಯಣ ಗುರುಗಳು ಪವಾಡ ಪುರುಷರು, ಮಹಾ ತಪಸ್ವಿ, ಸಮಾಜ ಸುಧಾರಕರು, ದೈವಾಂಶ ಸಂಬೂತರು. ಕುದ್ರೋಳಿ ದೇವಸ್ಥಾನದಲ್ಲಿ ಶಿವಲಿಂಗದ ಸ್ಥಾಪನೆ ಮಾಡಿದರು. ಈ ಶಿವಲಿಂಗವು ಸರಳತೆ ಮತ್ತು ಸ್ಥೂಲತೆ ಹೊಂದಿರುತ್ತದೆ, ಅವರು ಅದ್ವೈತ ತತ್ವದ ದಾರಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಈ ಶಿವಲಿಂಗದ ಸ್ಥಾಪನೆ ಮಾಡಿದರು. ನಾರಾಯಣ ಗುರುಗಳು ಸಾಮಾನ್ಯವಾಗಿ ಕಾಣುತ್ತಾರೆ ಆದರೆ ಆಧ್ಯಾತ್ಮಿಕವಾಗಿ ಕಂಡರೆ ನಾರಾಯಣ ಗುರುಗಳ ನಿಜ ರೂಪ ಕಾಣುವುದು. ದೈವದಶಕಂ ಪ್ರಾರ್ಥನೆ ಅಲ್ಲ, ಅದು ನಾರಾಯಣ ಗುರುಗಳ ಪರಿಚಯವನ್ನು ತಿಳಿಸುತ್ತದೆ. ನಾರಾಯಣ ಗುರುವಿನ ತತ್ವ ಆದರ್ಶಗಳನ್ನು ಪಾಲಿಸುವ ಮೊದಲು ಅದರ ಮೂಲ ಅದ್ವೈತ ಅರ್ಥವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದು ಒಂದೇ ಜಾತಿ, ಒಂದೇ ಮತ ಎಂಬ ತತ್ವವು ಕೇವಲ ರಾಜಕೀಯ ಪದವಾಗಿ ಉಳಿದಿದೆ ಹೊರತು ನಾರಾಯಣ ಗುರುಗಳ ಮಾತು ಆಗಿ ಉಳಿದಿಲ್ಲ. ಅದ್ವೈತದ ಮೂಲ ಎಂದರೆ ನನ್ನ ಆತ್ಮ ನಿನ್ನ ಆತ್ಮ ಒಂದೇ, ನನ್ನ ಧರ್ಮ, ನಿನ್ನ ಧರ್ಮ ಒಂದೇ. ಆತ್ಮ ಬೇರೆ ಪರಮಾತ್ಮ ಬೇರೆ ಅಲ್ಲ, ಎರಡೂ ಒಂದೇ ಯಾಕೆಂದರೆ ಆತ್ಮ ದೇಹದ ಒಳಗೆ ಸೇರುತ್ತದೆ, ದೇಹ ಆತ್ಮಕ್ಕೆ ಬೆಂಬಲ ನೀಡುತ್ತದೆ. ನಾರಾಯಣ ಗುರುವನ್ನು ನಿಮ್ಮ ಆತ್ಮದ ಒಳಗೆ ಸೇರಿಸಿದರೆ ಮಾತ್ರ ಅವರ ಪವಾಡದ ಅನುಭವ ಆಗುವುದು. ನಾರಾಯಣ ಗುರುಗಳ ತತ್ವ ಆದರ್ಶಗಳಾದ ವಿದ್ಯೆ, ಉದ್ಯೋಗ,‌ ಸಂಪರ್ಕ ಧ್ಯೇಯ ಹೊಂದಿರುವ ಈ ಯುವವಾಹಿನಿ ಸಂಘಟನೆಯಿಂದ ಇನ್ನಷ್ಟು ಉತ್ತಮ ಕೆಲಸ ಕಾರ್ಯಗಳು ನೆರವೇರಲಿ ಎಂದು ಶ್ರೀ ನಾರಾಯಣ ಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್(ರಿ.)ನ ಟ್ರಸ್ಟಿಗಳಾದ ವರದರಾಜ್ ಮಟ್ಟು ಕಟಪಾಡಿ ಇವರು ಗುರು ಸಂದೇಶವನ್ನು ನೀಡಿ ಶುಭ ಹಾರೈಸಿದರು.


ಸೆ.1 ರಂದು ಉರ್ವ ಸ್ಟೋರ್ ನಲ್ಲಿ ಇರುವ ಯುವವಾಹಿನಿ ಸಭಾಂಗಣದಲ್ಲಿ  ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಆಚರಣೆಯನ್ನು ಅಷ್ಟೋತ್ತರ ಪಠಿಸಿ, ಗುರು ಪೂಜೆ ಸಲ್ಲಿಸಿ ಭಕ್ತಿ ಪೂರ್ವಕವಾಗಿ ಮತ್ತು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರಿನ B.E.W.S (ರಿ.)ನ ಸಲಹೆಗಾರ ಶ್ರೀಧರ ಪೂಜಾರಿ ಕೂಳೂರು ಅವರು ಶುಭ ಹಾರೈಸಿದರು. ನಾರಾಯಣ ಗುರು ಜಯಂತಿಯ ಸಂದರ್ಭದಲ್ಲಿ ಶ್ರೀ ನಾಗರಾಜ ಹೆಜಮಾಡಿ ವಿರಚಿತ ಶ್ರೀ ನಾರಾಯಣ ಗುರು ಸಚ್ಚರಿತೆ, ಪಾರಾಯಣ ಗ್ರಂಥ ಬಿಡುಗಡೆಗೊಳಿಸಲಾಯಿತು.


ನಾರಾಯಣ ಗುರು ಜಯಂತಿಯ ಸಂಭ್ರಮದ ಜೊತೆಗೆ ರಕ್ಷಾ ಬಂಧನ ಆಚರಿಸಲಾಯಿತು. ಮಾಜಿ ಅಧ್ಯಕ್ಷ ನಾಗೇಶ್ ಅಮೀನ್ ಮುಲ್ಲಕಾಡು ರಕ್ಷಾ ಬಂಧನದ ಮಹತ್ವ ಮತ್ತು ಹಿನ್ನೆಲೆಯನ್ನು ತಿಳಿಸಿದರು. ನಂತರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರ್ವ ಸದಸ್ಯರು ಪರಸ್ಪರ ಒಬ್ಬರಿಗೊಬ್ಬರು ರಕ್ಷೆಯನ್ನು ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಲಾಯಿತು. ಶ್ರೀಕಾಂತ್ ಅಂಚನ್ ಹಾಗೂ ಮೋಹನ್ ದಾಸ್ ಮಾಲೆಮಾರ್ ಸಹಕರಿಸಿದರು.


ಮಾಧವ ಕೀರ್ತನೋತ್ಸವ ಭಜನಾ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಸೇರಿರುವ ಜನಸ್ತೋಮ ಹಾಗೂ ನಮ್ಮ ಕುಡ್ಲ ವೀಕ್ಷಕರ ಜನಮನ ಗೆದ್ದ ಘಟಕದ ಭಜನಾ ತಂಡದ ಸಂಚಾಲಕರು, ಮಾಜಿ ಅಧ್ಯಕ್ಷ ನಾಗೇಶ್ ಅಮೀನ್ ಮುಲ್ಲಕಾಡ್ ಮತ್ತು ಭಜಕರಿಗೆ ಗೌರವ ಸಲ್ಲಿಸಲಾಯಿತು. 

ಇದೇ ಸಂದರ್ಭದಲ್ಲಿ ಮುಂದೆ ನಡೆಯಲಿರುವ ಘಟಕದಲ್ಲಿರುವ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಎಲ್ಲಾ ಶಿಕ್ಷಕರಿಗೆ ಹಾಗೂ ನಾರಾಯಣ ಗುರು ತತ್ವಾದರ್ಶಗಳ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರು ಹಾಗೂ ಸಮಿತಿ ಸದಸ್ಯರನ್ನು ಗೌರವ ಸಲ್ಲಿಸಲಾಯಿತು.

ಪ್ರತಿಭಾ ಪುರಸ್ಕಾರ: 

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 92.2 ಅಂಕ ಗಳಿಸಿದ ಜ್ಞಾನ್ ಸಿ. ಕರ್ಕೇರ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 99.17 ಅಂಕ ಗಳಿಸಿದ ದಶಾ ಆರ್.ಪಿ. ಇಬ್ಬರು ಘಟಕದ ಸದಸ್ಯರ ಮಕ್ಕಳಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರಿನ ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನಿರ್ದೇಶಕ ಲೋಹಿತ್ ರೆಂಜಳ, ಮಂಗಳೂರಿನ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ನಾಗೇಶ್ ಪೂಜಾರಿ ಮಾಣಿ, ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ಯುವವಾಹಿನಿ (ರಿ.)ಯ ನಿರ್ದೇಶಕ ಗೋಪಾಲ ಪೂಜಾರಿ ಶುಭ ಹಾರೈಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಘಟಕದ ಅಧ್ಯಕ್ಷ ಹರೀಶ್ ಕೆ‌. ಸುವರ್ಣ ಮಾತನಾಡಿ, ನಾರಾಯಣ ಗುರುಗಳು ಸಂಘಟನೆಯಿಂದ ಬಲಯುತರಾಗಿರಿ ಎಂಬ ಸಂದೇಶವನ್ನು ಸಾರಿದ್ದಾರೆ ಆದರೆ ಇಂದು ಹೆಚ್ಚಿನ ಬಿಲ್ಲವ ಸಂಘಟನೆಗಳು ಸ್ವಾರ್ಥ ಮನೋಭಾವನೆಯಿಂದ  ತುಂಬಿದೆ, ಎಲ್ಲರೂ ನಾರಾಯಣ ಗುರುಗಳಿಗೆ ನಿಷ್ಠೆಯಿಂದ ಪೂಜೆ ಮಾಡುತ್ತಾರೆ ಆದರೆ ಯಾರೂ ನಾರಾಯಣ ಗುರುಗಳ ತತ್ವ ಆದರ್ಶಗಳ ಪಾಲನೆ ಸಂಪೂರ್ಣವಾಗಿ ಮಾಡುವುದಿಲ್ಲ ಎಂದರು. ನಮ್ಮ ಉದ್ದೇಶ ಒಂದೇ ಎಲ್ಲರು ಜೊತೆ ಜೊತೆಗೆ ಕಾರ್ಯ ನಿರ್ವಹಿಸಿದರೆ ಸಂಘಟನೆಯು ಇನ್ನಷ್ಟು ಬಲಯುತವಾಗುವುದು. ಬೇರೆ ಜಾತಿ ಧರ್ಮದ ಸಂಘಟನೆ ನೋಡಿದರೆ ಅವರಲ್ಲಿ ಇರುವಷ್ಟು ಹೊಂದಾಣಿಕೆ ನಮ್ಮಲ್ಲಿ ಇಲ್ಲ. ಬಿಲ್ಲವ ಸಂಘಟನೆಯು ಇನ್ನಷ್ಟು ಗಟ್ಟಿಯಾಗಬೇಕು ಎಂಬುದೇ ನನ್ನ ಮೂಲ ಉದ್ದೇಶವಾಗಿದ್ದು, ಇದಕ್ಕೆ ಪ್ರತಿಯೊಬ್ಬರೂ ಸ್ವಾರ್ಥ ಮನೋಭಾವನೆ ಬಿಟ್ಟು ಸಹಕಾರ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಸಂಯೋಜನೆಗೆ ಸಹಕರಿಸಿದ ಘಟಕದ ಸದಸ್ಯರಿಗೆ ಅತಿಥಿಗಳಿಂದ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕೋಶಾಧಿಕಾರಿಗಳು, ನಿರ್ದೇಶಕರು ಹಾಗೂ ಮಂಗಳೂರು ಘಟಕದ ಹಾಗೂ ಇತರ ಘಟಕಗಳ, ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಯುವವಾಹಿನಿಯ ಸಂಸ್ಥೆಯ ಬಂಧುಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುವಂತೆ ಸಹಕರಿಸಿದರು.

ಶಾರಿಕಾ ಬಿ. ಎಚ್ ಉಜ್ಜೋಡಿ, ನಾರಾಯಣ ಗುರುಗಳ ದೈವದಶಕಂ ಹಾಡುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ಕಾರ್ಯದರ್ಶಿ ಉಷಾ.ಕೆ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಡಾ. ರಾಕೇಶ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಘಟಕದ ಉಪಾಧ್ಯಕ್ಷರುಗಳಾದ ಯತೀಶ್ ಬಳಂಜಾ ಹಾಗೂ ಮಹೇಶ್ ಅಮೀನ್ ಅಭಿನಂದನಾ ಪತ್ರ ಓದಿದರು, ಕೋಶಾಧಿಕಾರಿ ಚಂದ್ರಶೇಖರ್ ಕಿನ್ನಿಗೋಳಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article