ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು: ಎಸ್‌ಐಟಿ ಮೂಲಕ ಮರು ತನಿಖೆಗೆ ಸುಪ್ರೀಂ ಆದೇಶ - ಮೂರು ತಿಂಗಳ ಗಡುವು
ಪ್ರಕರಣ ನಡೆದು 14 ವರ್ಷಗಳ ಬಳಿಕ ಮರು ತನಿಖೆಗೆ ನ್ಯಾಯಾಲಯ ಆದೇಶ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ.
2012ರ ಅಕ್ಟೋಬರ್ 9ರಂದು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಸೌಜನ್ಯಾಳನ್ನು ಅತ್ಯಾಚಾರಗೈದು ಕೊಲೆ ಮಾಡಲಾಗಿದೆ. ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಸ್ಥಳೀಯ ಪೊಲೀಸರು ನಡೆಸಿದ್ದು, ಬಳಿಕ ಸಿಐಡಿ ಹಾಗೂ ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ತನಿಖೆಯ ಬಳಿಕ ಸಂತೋಷ್ ರಾವ್ ಎಂಬಾತನನ್ನು ಆರೋಪಿಯನ್ನಾಗಿ ಮಾಡಲಾಗಿತ್ತು. ಆದರೆ, 2023ರ ಜೂನ್ 16ರಂದು ಸಿಬಿಐ ವಿಶೇಷ ನ್ಯಾಯಾಲಯವು ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿತ್ತು.
ಖುಲಾಸೆ ಬಳಿಕ ಪ್ರಕರಣದ ನೈಜ ಆರೋಪಿಗಳನ್ನು ಪತ್ತೆಹಚ್ಚಲು ಮರುತನಿಖೆ ನಡೆಸಬೇಕೆಂಬ ಬೇಡಿಕೆ ಮುನ್ನೆಲೆಗೆ ಬಂದಿತ್ತು. ಸೌಜನ್ಯಾಳ ತಾಯಿ ಕುಸುಮಾವತಿ ಗೌಡ 2024ರಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ಮರುತನಿಖೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಮನವಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದರ ವಿರುದ್ಧ ಅವರು 2026ರಲ್ಲಿ ಸುಪ್ರೀಂ ಕೋರ್ಟ್ ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಮರುತನಿಖೆ ನಡೆಸುವ ವಿಧಾನ ಮತ್ತು ಯಾವ ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಸಬೇಕು ಎಂಬ ವಿಚಾರದಲ್ಲಿ ವಾದ-ಪ್ರತಿವಾದಗಳು ನಡೆದಿದ್ದವು. ರಾಜ್ಯ ಸರಕಾರವೂ ಅಗತ್ಯವಿದ್ದಲ್ಲಿ ಎಸ್‌ಐಟಿ ರಚಿಸಲು ಸಿದ್ಧವಿರುವುದಾಗಿಯೂ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.
ಇದೀಗ ಸುಪ್ರೀಂ ಕೋರ್ಟ್ ಎಸ್‌ಐಟಿ ಮೂಲಕ ಈ ಪ್ರಕರಣದ ಮರುತನಿಖೆಗೆ ಅವಕಾಶ ನೀಡಿದ್ದು, ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿರುವುದು ಪ್ರಕರಣದಲ್ಲಿ ಮಹತ್ವದ ತಿರುವಾಗಿದೆ. ತನಿಖೆಯ ಬಳಿಕ ಸೌಜನ್ಯಾ ಪ್ರಕರಣದ ನೈಜ ಘಟನೆಗಳ ಕುರಿತು ಯಾವ ಅಂಶಗಳು ಬೆಳಕಿಗೆ ಬರುತ್ತವೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಪ್ರಕರಣದ ಹಿನ್ನಲೆ...
ಧರ್ಮಸ್ಥಳದ ಎಸ್‌ಡಿಎಂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಸೌಜನ್ಯಾ, ಅ.9, 2012 ರಂದು ಕಾಲೇಜಿನಿಂದ ಮನೆಗೆ ಹಿಂತಿರುಗುವಾಗ ನಾಪತ್ತೆಯಾಗಿದ್ದಳು. ಮರುದಿನ ಅ.10 ರಂದು ಧರ್ಮಸ್ಥಳದ ನೇತ್ರಾವತಿ ನದಿಯ ಸಮೀಪದ ಅರಣ್ಯ ಪ್ರದೇಶದಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು.
ವೈದ್ಯಕೀಯ ತಪಾಸಣೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿ, ಕ್ರೂರವಾಗಿ ಕೊಲೆ ಮಾಡಲಾಗಿರುವುದು ದೃಢಪಟ್ಟಿತ್ತು. ಈ ಘಟನೆಯು ಇಡೀ ಕರ್ನಾಟಕ ರಾಜ್ಯಾದ್ಯಂತ ಭಾರಿ ಜನಕ್ರೋಶ ಮತ್ತು ಪ್ರತಿಭಟನೆಗಳಿಗೆ ಕಾರಣವಾಯಿತು. ಪ್ರಕರಣದ ಆರಂಭಿಕ ತನಿಖೆಯನ್ನು ಸ್ಥಳೀಯ ಪೊಲೀಸರು ನಡೆಸಿ, ಸಂತೋಷ್ ರಾವ್ ಎಂಬ ವ್ಯಕ್ತಿಯನ್ನು ಪ್ರಮುಖ ಆರೋಪಿಯನ್ನಾಗಿ ಬಂಧಿಸಿದರು. ಆದರೆ, ಸೌಜನ್ಯಾ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಸ್ಥಳೀಯ ಪೊಲೀಸರ ತನಿಖೆಯ ಮೇಲೆ ಅಪನಂಬಿಕೆ ವ್ಯಕ್ತಪಡಿಸಿ, ನೈಜ ಅಪರಾಧಿಗಳನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿದರು. ಸಾರ್ವಜನಿಕ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಮೊದಲು ಸಿಐಡಿ ತನಿಖೆಗೆ ಮತ್ತು ನಂತರ ಸಿಬಿಐ ತನಿಖೆಗೆ ವಹಿಸಲಾಯಿತು.
ದೀರ್ಘಾವಧಿಯ ವಿಚಾರಣೆಯ ನಂತರ, ಜೂನ್ 2023ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಏಕೈಕ ಆರೋಪಿ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿತು. ತನಿಖಾ ಸಂಸ್ಥೆಗಳು ನೈಜ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸೌಜನ್ಯಾ ಕುಟುಂಬ ಹಾಗೂ ಸಾಮಾಜಿಕ ಹೋರಾಟಗಾರರು, ನೈಜ ಆರೋಪಿಗಳಿಗೆ ಶಿಕ್ಷೆಯಾಗಬೇಕು ಮತ್ತು ಪ್ರಕರಣದ ಮರು ತನಿಖೆಯಾಗಬೇಕೆಂದು ಹೋರಾಟ ಮುಂದುವರಿಸಿದ್ದರು.