ಪ್ರತ್ಯೇಕ ‘ಮಂಗಳೂರು ರೈಲ್ವೆ ವಿಭಾಗ’ ರಚಿಸುವ ಬದಲು ಮೈಸೂರು ವಿಭಾಗಕ್ಕೆ ಸೇರ್ಪಡೆ ಜನತೆಗೆ ಎಸಗಿದ ದ್ರೋಹ: ಪಿ.ವಿ. ಮೋಹನ್

ಪ್ರತ್ಯೇಕ ‘ಮಂಗಳೂರು ರೈಲ್ವೆ ವಿಭಾಗ’ ರಚಿಸುವ ಬದಲು ಮೈಸೂರು ವಿಭಾಗಕ್ಕೆ ಸೇರ್ಪಡೆ ಜನತೆಗೆ ಎಸಗಿದ ದ್ರೋಹ: ಪಿ.ವಿ. ಮೋಹನ್


ಮಂಗಳೂರು: ಪ್ರತ್ಯೇಕ ‘ಮಂಗಳೂರು ರೈಲ್ವೆ ವಿಭಾಗ’ ರಚಿಸುವ ಬದಲು ಮೈಸೂರು ವಿಭಾಗಕ್ಕೆ ಸೇರಿಸಲು ಹೊರಟಿರುವುದು ಮಂಗಳೂರಿನ ಜನತೆಗೆ ಎಸಗಿದ ಬಹುದೊಡ್ಡ ದ್ರೋಹ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಒಪ್ಪಲು ಸಾಧ್ಯವಿಲ್ಲ, ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಪಿ.ವಿ. ಮೋಹನ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಕ್ಕಾಡ್ ವಿಭಾಗದಿಂದ ಮಂಗಳೂರನ್ನು ಬೇರ್ಪಡಿಸುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಮೈಸೂರು ಜನತೆ ಅಥವಾ ಜನಪ್ರತಿನಿಧಿಗಳು ಒತ್ತಾಯಿಸದೆ ಇದ್ದರೂ, ಮಂಗಳೂರು ರೈಲ್ವೆ ಮಾರ್ಗಗಳನ್ನು ಮೈಸೂರು ವಿಭಾಗಕ್ಕೆ ಸೇರಿಸಲಾಗುತ್ತಿದೆ. ಮಂಗಳೂರು, ಉಡುಪಿ ಮತ್ತು ಕಾರವಾರದ ಜನತೆಯೇ ಈ ವಿಭಾಗದ ನಿಜವಾದ ಹಕ್ಕುದಾರರು ಎಂದರು.

ಮಂಗಳೂರು ರೈಲ್ವೆ ಮಾರ್ಗದಿಂದ ವರ್ಷಕ್ಕೆ ಸುಮಾರು 1,100 ಕೋಟಿ ರು.ಗೂ ಅಧಿಕ ಆದಾಯ ಬರುತ್ತಿದೆ. ಈ ಭಾಗದಲ್ಲಿ ಸುಮಾರು 750 ಕಿ.ಮೀ ಕೊಂಕಣ ರೈಲ್ವೆ, 190 ಕಿ.ಮೀ ಮಂಗಳೂರು- ಹಾಸನ ರೈಲ್ವೆ ಸಂಪರ್ಕ ಹಾಗೂ ಎನ್‌ಎಂಪಿಎ ಬಂದರು ಸಂಪರ್ಕವಿದೆ. ಕಂಕನಾಡಿ, ತೊಕ್ಕೊಟ್ಟು, ಪಣಂಬೂರು, ಕುಲಶೇಖರ ಮುಂತಾದ ವ್ಯಾಪ್ತಿಗಳು ಭಾರಿ ಪ್ರಮಾಣದ ಆದಾಯ ತಂದುಕೊಡುತ್ತಿವೆ. ದೇಶದ ಪ್ರಥಮ ನಾಲ್ಕು ಟರ್ಮಿನಲ್‌ಗಳಲ್ಲಿ ಒಂದಾದ ಹಾಗೂ 100 ವರ್ಷಗಳ ಸುದೀರ್ಘ ಇತಿಹಾಸವಿರುವ ಮಂಗಳೂರು ಸೆಂಟ್ರಲ್ ಮತ್ತು ಕಂಕನಾಡಿ (ಮಂಗಳೂರು ಜಂಕ್ಷನ್) ಎಂಬ ಎರಡು ಪ್ರಮುಖ ಟರ್ಮಿನಲ್‌ಗಳು ಇಲ್ಲೇ ಇವೆ. ಇಷ್ಟೆಲ್ಲ ಇದ್ದರೂ ಮೈಸೂರು ವಿಭಾಗಕ್ಕೆ ಮಂಗಳೂರನ್ನು ಸೇರಿಸುವ ಆಗತ್ಯವೇನಿದೆ? ಮಂಗಳೂರನ್ನೇ ಪ್ರತ್ಯೇಕ ವಿಭಾಗ ಮಾಡಲು ಇಲ್ಲಿರುವ ಸೌಲಭ್ಯಗಳೇ ಸಾಕು ಎಂದು ಪಿ.ವಿ. ಮೋಹನ್ ಪ್ರತಿಪಾದಿಸಿದರು.

ಕರಾವಳಿ ಜನತೆ ಕಳೆದ ಹಲವು ವರ್ಷಗಳಿಂದ ಪ್ರತ್ಯೇಕ ಮಂಗಳೂರು ವಿಭಾಗಕ್ಕಾಗಿ ಧರಣಿ, ರೈಲು ತಡೆ, ಉಪವಾಸ ಸತ್ಯಾಗ್ರಹ ನಡೆಸಿ ಕೇಸುಗಳನ್ನು ಎದುರಿಸಿದ್ದಾರೆ. ಮಾಜಿ ಸಂಸದ ದಿ.ಆಸ್ಕರ್ ಫರ್ನಾಂಡಿಸ್ ಅವರು ಈ ವಿಭಾಗ ರಚನೆಗಾಗಿ ಸಂಪೂರ್ಣ ಯೋಜನೆ ಹಾಗೂ ರೂಪುರೇಷೆ ಸಿದ್ಧಪಡಿಸಿದ್ದರು. ಅದರ ಬಳಿಕ ಬಿಜೆಪಿ ಸಂಸದರು ಮತ್ತು ಮಂತ್ರಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ವಿಫಲರಾಗಿದ್ದಾರೆ. ಹಿಂದೆ ವಿಜಯ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ಕರಾವಳಿಯ ಹೆಮ್ಮೆಯನ್ನು ಕಸಿದಂತೆ, ಈಗ ರೈಲ್ವೆ ವಿಭಾಗವನ್ನೂ ಕೈತಪ್ಪಿಸಲಾಗಿದೆ ಎಂದು ಆರೋಪಿಸಿದರು.

ಮಂಗಳೂರು ಪ್ರತ್ಯೇಕ ವಿಭಾಗವಾಗಿದ್ದರೆ ಸ್ಥಳೀಯ ಯುವಕರಿಗೆ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದ್ದವು. ಇದೀಗ ಉದ್ಯೋಗಕ್ಕಾಗಿ ಯುವಕರು ಬೆಂಗಳೂರು, ಮುಂಬೈಗೆ ಅಲೆಯುವಂತಾಗಿದೆ ಎಂದರು.

ಕೇಂದ್ರದ ಈ ನಿರ್ಧಾರವನ್ನು ವಿರೋಧಿಸಿ ಹೋರಾಟ ರೂಪಿಸಲಾಗುವುದು. 2029ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಸ್ಥಾಪಿಸಲಾಗುವುದು ಎಂದು ಪಿ.ವಿ. ಮೋಹನ್ ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪ್ರಮುಖರಾದ ಹೊನ್ನಯ್ಯ, ಚಿತ್ತರಂಜನ್ ಶೆಟ್ಟಿ, ಟಿ.ಕೆ. ಸುಧೀರ್, ಪ್ರೇಮ್, ರಮಾನಂದ ಪೂಜಾರಿ, ಯೋಗೇಶ್ ಕುಮಾರ್ ಹಾಗೂ ನವಾಜ್ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article