ಜನ ವಿಶ್ವಾಸ್ ಕಾಯ್ದೆ ಸಮಪರ್ಕಕ ಅನುಷ್ಠಾನಕ್ಕೆ ಆಗ್ರಹ
ಮಂಗಳೂರು: ರಾಜ್ಯದಲ್ಲಿ ಜನ ವಿಶ್ವಾಸ್ ಕಾಯ್ದೆ 2023ರ ಸಮರ್ಪಕವಾಗಿ ಅನುಷ್ಠಾನವಾಗವಾಗಬೇಕು ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಂಘದ ಕಾರ್ಯದರ್ಶಿ ಬೆನೆಡಿಕ್ಟ್ ಫೆರ್ನಾಂಡಿಸ್ ಆಗ್ರಹಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾಯ್ದೆ ಸರಿಯಾಗಿ ಅನುಷ್ಠಾನವಾಗದಿರುವುದು ದುರದೃಷ್ಟಕರ. ಜನ ವಿಶ್ವಾಸ್ ಕಾಯ್ದೆ-2023ರ ಮೂಲಕ ‘ಪರಿಸರ (ಸಂರಕ್ಷಣೆ) ಕಾಯ್ದೆ 1986ರ ಕಲಂ 15ಕ್ಕೆ ತಿದ್ದುಪಡಿ ತರಲಾಗಿದ್ದು, 2024ರ ಎ.1 ರಿಂದ ಜಾರಿಗೆ ಬಂದಿದೆ. ಆದರೆ ತಿದ್ದುಪಡಿಯ ಬಳಿಕ ಕ್ರಿಮಿನಲ್ ಮೊಕದ್ದಮೆ ಹೂಡುವ ಪದ್ಧತಿಯನ್ನು ಕೈಬಿಡಲಾಗಿದೆ ಎಂದರು.
ಸಾಮಾನ್ಯ ಉಲ್ಲಂಘನೆಗಳಿಗೆ ಕನಿಷ್ಠ 10 ಸಾವಿರ ರೂ. ನಿಂದ ಗರಿಷ್ಠ 15 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಕಂಪೆನಿಗಳು ಉಲ್ಲಂಘಿಸಿದರೆ ಕನಿಷ್ಠ 1 ಲಕ್ಷದಿಂದ 15 ಲಕ್ಷ ರೂ. ವರೆಗೆ ದಂಡ ವಿಧಿಸುವ ಅವಕಾಶವಿದೆ. ನಿಯಮ ಉಲ್ಲಂಘಿಸಿದ ಸರಕಾರಿ ಅಧಿಕಾರಿಯ ತಿಂಗಳ ಮೂಲ ವೇತನದಷ್ಟು ದಂಡ ಪಾವತಿಸಬೇಕು ಎನ್ನುವ ನಿಯಮ ತರಲಾಗಿದೆ ಎಂದರು.
2024-25ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 4,73,684 ರೂ. ಉಲ್ಲಂಘನೆ ಆಗಿದ್ದು, 79 ಕೋ.ರೂ. ದಂಡ ಸಂಗ್ರಹಿಸಲಾಗಿದೆ. ಸುಮಾರು 394 ಕೋ.ರೂ. ಗಳಷ್ಟು ಕಡಿಮೆ ದಂಡ ಮೊತ್ತ ಸಂಗ್ರಹಿಸಲಾಗಿದೆ. 2025-2026, 2026-27ನೇ ಆರ್ಥಿಕ ವರ್ಷದಲ್ಲೂ ಕಡಿಮೆ ದಂಡ ದಂಡ ವಿಧಿಸಿರುವುದು ಕಂಡು ಬಂದಿದೆ. ಇದು ಸಂಬಂಧಪಟ್ಟ ಆಡಳಿತಾತ್ಮಕ ಮುಖ್ಯಸ್ಥರ ಕರ್ತವ್ಯ ಲೋಪದ ಗಂಭೀರ ಪ್ರಕರಣವಾಗಿದೆ ಎಂದು ಅವರು ಆರೋಪಿಸಿದರು.
ಸಂಘದ ಅಧ್ಯಕ್ಷ ಚಾರ್ಲ್ಸ್ ಡಿ‘ಸೋಜಾ ಮಾತನಾಡಿ, ಪರಿಸರ ಸಂರಕ್ಷಣೆ ಕಾಯ್ದೆಯಡಿ ಸ್ವತಂತ್ರವಾಗಿ ದಂಡ ವಿಧಿಸದಂತೆ ಎಲ್ಲ ಅಧೀನ ಕ್ಷೇತ್ರಾಧಿಕಾರಿಗಳಿಗೆ ನಿರ್ಬಂಧ ವಿಧಿಸಿ, ಪತ್ತೆಯಾದ ಎಲ್ಲ ಉಲ್ಲಂಘನೆಗಳನ್ನು ನಮೂನೆ -1ರ ಮೂಲಕ ನಿರ್ಣಯಾಧಿಕಾರಿಗೆ ವರದಿ ಮಾಡುವಂತೆ ಸೂಚಿಸಿ ಸುತ್ತೋಲೆ ಹೊರಡಿಸಬೇಕು. ಈಗಾಗಲೇ ಕಡಿಮೆ ವಿಧಿಸಲಾದ ದಂಡದ ಪೂರ್ತಿ ಮೊತ್ತವನ್ನು ವಸೂಲಿ ಮಾಡಬೇಕು. ನಮೂನೆ 1 ಬಳಸಿ ವರದಿ ಮಾಡಲು ಸಾರ್ವಜನಿಕರಿಗೆ ಪ್ರೋತ್ಸಾಹಧನ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಖಜಾಂಚಿ ಅಶ್ವಿನಿ ಕೆ. ಭಟ್, ಸದಸ್ಯ ಮಹಮ್ಮದ್ ನಿಹಾಲ್ ಉಪಸ್ಥಿತರಿದ್ದರು.