ಮಂಗಳೂರು ಸಚಿವ ಸಂಪುಟ ಸಭೆ: ಈಡೇರಿದ ತುಳುವರ ಕನಸು, ತುಳುವಿಗೆ ಅಧಿಕೃ ಭಾಷೆಯ ಸ್ಥಾನಮಾನ
ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಯವರು, ತುಳು ಭಾಷೆಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಕುರಿತು ಸಚಿವ ಸಂಪುಟ ಸಮ್ಮತಿ ಸೂಚಿಸಿದೆ ಎಂದು ತಿಳಿಸಿದರು.
‘ಹಿಂದಿನ ಸರ್ಕಾರಗಳು ಈ ನಿರ್ಧಾರವನ್ನು ಯಾಕೆ ಕೈಗೊಂಡಿಲ್ಲ ಎಂಬ ಪ್ರಶ್ನೆ ಮಾಡುವುದಿಲ್ಲ. ನಮ್ಮ ಸರ್ಕಾರಕ್ಕೆ ಈ ವಿಷಯದಲ್ಲಿ ಸ್ಪಷ್ಟ ಬದ್ಧತೆ ಇದೆ. ನಾವು ಭಾವನೆಗಳ ಮೇಲೆ ರಾಜಕಾರಣ ಮಾಡುವುದಿಲ್ಲ, ಜನರ ಬದುಕಿಗೆ ಸಂಬಂಧಿಸಿದ ವಿಚಾರಗಳ ಮೇಲೆ ಕೆಲಸ ಮಾಡುತ್ತೇವೆ,’ ಎಂದು ಹೇಳಿದರು.
ಇದೇ ವೇಳೆ ಯು.ಟಿ. ಖಾದರ್ ಅವರ ಪಾತ್ರವನ್ನು ಸ್ಮರಿಸಿದ ಸಿಎಂ, ‘ಸ್ಪೀಕರ್ ಆದ ಬಳಿಕ ಅವರು ಮೊದಲ ಬಾರಿಗೆ ತುಳು ಭಾಷೆಯ ವಿಷಯವನ್ನೇ ಪ್ರಸ್ತಾಪಿಸಿದ್ದರು. ಅವರೊಬ್ಬರಿಗೆ ಮಾತ್ರವಲ್ಲ, ತುಳುವಿಗೆ ಅಧಿಕೃತ ಸ್ಥಾನಮಾನಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆಸಿದ ಎಲ್ಲರಿಗೂ ಅಭಿನಂದನೆಗಳು,’ ಎಂದು ಹೇಳಿದರು.
ಭಾಷೆ ವಿಚಾರಗಳು ಬಂದಾಗ ಟೀಕೆಗಳು ಬರಬಹುದು. ಟೀಕೆಗಳು ಸಾಯುತ್ತವೆ. ಕೆಲಸ ಉಳಿಯಲಿದೆ ಎಂಬ ದೃಷ್ಟಿಯಲ್ಲಿ ನಾವು ಕೆಲಸ ಮಾಡುವುದು ಎಂದು ಹೇಳಿದರು.
ಮಂಗಳೂರು ಮರು ನಾಮಕರಣ..
ದಕ್ಷಿಣ ಕನ್ನಡವನ್ನು ಮಂಗಳೂರು ಜಿಲ್ಲೆಯಾಗಿ ಮರು ನಾಮಕರಣಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಪ್ರದಾಯ, ಆಚಾರ ವಿಚಾರವನ್ನು ಗಣನೆಯಲ್ಲಿ ಇಟ್ಟುಕೊಂಡು ಒಂದು ತಿಂಗಳ ಅವಧಿಯಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಕರಡು ಅಧಿಸೂಚನೆ ಹೊರಡಿಸಲಾಗುವುದು. ಇಡೀ ರಾಷ್ಟ್ರದಲ್ಲಿ ಮಂಗಳೂರು ಖ್ಯಾತಿ ಹೊಂದಿದೆ. ಅದಕ್ಕೆ ಭಾವನಾತ್ಮಕ ಸಂಬಂಧ ಇದೆ. ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಅಗತ್ಯ ಎಂಬ ನೆಲೆಯಲ್ಲಿ ಈ ಕ್ರಮ ಆಗಿದೆ ಎಂದು ಹೇಳಿದರು.
ಕೆಲವೊಂದು ವಿಚಾರ, ಬೇಡಿಕೆಗಳನ್ನು ಆರ್ಥಿಕ, ಕಾನೂನು ಚೌಕಟ್ಟಿನ ಮೇರೆಗೆ ತೀರ್ಮಾನಕ್ಕೆ ಬರಲಾಗುವುದು. ಪ್ರವಾಸೋದ್ಯಮಕ್ಕೆ ಮಲೆನಾಡು ಮತ್ತು ಕರಾವಳಿ ಸೇರಿದಂತೆ ಪ್ರತ್ಯೇಕ ಕರಾವಳಿ ಪ್ರವಾಸೋದ್ಯಮ ನೀತಿಗೆ ನಿರ್ಧಾರ ಮಾಡಲಾಗಿದೆ. ಮೀನುಗಾರಿಕೆ, ಮರೈನ್ ಬ್ಲೂ ಎಕಾನಮಿ, ಮೀನುಗಾರಿಕಾ ವಿ. ವಿ. ಘೋಷಣೆ ಮಾಡುತ್ತಿರುವುದಾಗಿ ಹೇಳಿದ ಅವರು, ಕಿದ್ವಾಯಿ ಹಾಗೂ ಜಯದೇವ್ ಆಸ್ಪತ್ರೆ ಘಟಕ ಸ್ಥಾಪನೆ ಬಗ್ಗೆಯೂ ಕ್ರಮ ಆಗಲಿದೆ ಎಂದರು.
ವಿಶೇಷವಾಗಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಆದ್ಯತೆ ನೀಡುವ ಮೂಲಕ ಕರಾವಳಿಯ ಪ್ರವಾಸಿ ತಾಣಗಳ ಅಭಿವೃದ್ಧಿ, ಹೂಡಿಕೆ ಆಕರ್ಷಣೆ ಹಾಗೂ ಪ್ರವಾಸೋದ್ಯಮ ಮೂಲಸೌಕರ್ಯ ಬಲವರ್ಧನೆಗೆ ಒತ್ತು ನೀಡಲಾಗಿದೆ ಎಂದರು.
32,611 ಕೋಟಿ ರೂ. ಮೊತ್ತದ ಯೋಜನೆ..
ಮೊದಲ ಸಚಿವ ಸಂಪುಟ ಸಭೆ ಬೆಂಗಳೂರಿಂದ ಹೊರಗೆ ನಡೆಸಲಾಗಿದೆ. ಕರಾವಳಿ ಜಿಲ್ಲೆಗಳ ಜನ ತೋರಿಸಿದ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ ಅವರು, ಕರಾವಳಿ ಅಭಿವೃದ್ಧಿಗೆ 32,611 ಕೋಟಿ ರೂ. ಮೊತ್ತದ ಯೋಜನೆಗಳಲ್ಲಿ 16,000 ಕೋಟಿ ರೂ. ರಸ್ತೆಗಳ ಅಭಿವೃದ್ಧಿಗೆ ನೀಡಲಾಗುತ್ತಿದೆ ಎಂದು ಹೇಳಿದರು.
ಸಭೆಯ ಬಳಿಕ ಸುದ್ದಿಗಾರರಿಗೆ ಸಚಿವ ಸಂಪುಟದ ನಿರ್ಣಯಗಳ ಕುರಿತು ಮಾಹಿತಿ ನೀಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕರಾವಳಿ ಭಾಗದ ಅಭಿವೃದ್ಧಿಗೆ ಪೂರಕವಾದ ಮಹತ್ವದ ತೀರ್ಮಾನಗಳನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.