ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಡಿವೈಎಫ್ಐ ಕಾರ್ಯಕರ್ತ ವರ್ಷಿತ್ ಕುಲಾಲ್

ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಡಿವೈಎಫ್ಐ ಕಾರ್ಯಕರ್ತ ವರ್ಷಿತ್ ಕುಲಾಲ್


ಮಂಗಳೂರು: ಸೋಮವಾರ ಸಂಜೆ ಕುತ್ತಾರ್ ಭಾಗದಲ್ಲಿ ನಡೆದ ರಸ್ತೆ ಅಪಘಾತಕ್ಕೆ ಒಳಗಾಗಿ ಮೆದುಳು ನಿಷ್ಕ್ರಿಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುತ್ತಾರ್ ಬಟ್ಟೆದಡಿ ಪ್ರದೇಶದ ಡಿವೈಎಫ್ಐಯ ಸಕ್ರಿಯ ಕಾರ್ಯಕರ್ತ ವರ್ಷಿತ್ ಕುಲಾಲ್ (21) ಇನ್ನಿಲ್ಲ ಎಂಬ ನೋವಿನ ಸುದ್ದಿ ನಿಜಕ್ಕೂ ಆಘಾತಕಾರಿ.

ಮತ್ತೆ ಗುಣಮುಖನಾಗಿ ನಮ್ಮ ನಡುವೆ ಮರಳಿ ಬರುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ, ವೈದ್ಯರು ವರ್ಷಿತ್ ಅವರ ಮೆದುಳು ನಿಷ್ಕ್ರಿಯಗೊಂಡಿರುವುದನ್ನು ತಿಳಿಸಿದಾಗ ಆ ಕುಟುಂಬ ಎದುರಿಸಿದ ನೋವನ್ನು ಪದಗಳಲ್ಲಿ ಹೇಳಲಾಗದು. ಕಣ್ಣೆದುರೇ ಬೆಳೆಸಿದ ಮಗನನ್ನು ಕಳೆದುಕೊಂಡ ದುಃಖ ಒಂದೆಡೆಯಾದರೆ, ಆ ನೋವಿನ ನಡುವೆಯೂ ತಂದೆ ಗೋಪಾಲ, ತಾಯಿ ವೇದಾವತಿ, ಸಹೋದರ ತಮ್ಮ ಮಗನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಹಲವು ಜೀವಗಳಿಗೆ ಹೊಸ ಬದುಕು ನೀಡಲು ಒಪ್ಪಿಗೆ ಸೂಚಿಸಿರುವುದು ಅತ್ಯಂತ ಮಾನವೀಯ ಮತ್ತು ಮಹತ್ವದ ನಿರ್ಧಾರವಾಗಿದೆ.

ತಮ್ಮ ಮಗನನ್ನು ಕಳೆದುಕೊಂಡ ನೋವಿನ ನಡುವೆಯೂ, ಮತ್ತಷ್ಟು ಕುಟುಂಬಗಳ ಕಣ್ಣೀರನ್ನು ಒರೆಸುವಂತಹ ನಿರ್ಧಾರ ಕೈಗೊಂಡ ವರ್ಷಿತ್ ಅವರ ಕುಟುಂಬದ ವಿಶಾಲ ಹೃದಯಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.

ವರ್ಷಿತ್ ದೇಹತಃ ನಮ್ಮೊಂದಿಗಿಲ್ಲದಿದ್ದರೂ, ಅವರ ಅಂಗಾಂಗಗಳ ಮೂಲಕ ಹಲವು ಜೀವಗಳಲ್ಲಿ ಬದುಕಲಿದ್ದಾರೆ.

ಜನರಿಗಾಗಿ, ಸಮಾಜಕ್ಕಾಗಿ ಸದಾ ಮುಂಚೂಣಿಯಲ್ಲಿ ನಿಂತಿದ್ದ ಒಬ್ಬ ಯುವ ಹೋರಾಟಗಾರ, ಸಾವಿನಲ್ಲೂ ತನ್ನ ಬದುಕಿಗೆ ಒಂದು ಅರ್ಥವನ್ನು ಬಿಟ್ಟುಹೋಗಿದ್ದಾರೆ. ವರ್ಷಿತ್ ಅವರು ಸತ್ತಿಲ್ಲ, ಅವರೆಂದೂ ಸಾಯುವುದಿಲ್ಲ ಅವರ ಆದರ್ಶ, ಕನಸು ಎಲ್ಲವನ್ನೂ ನಾವು ಮುಂದುವರಿಸಲಿದ್ದೇವೆ. ಅವರು ಸಂಘಟನೆಯ ಪ್ರತಿಯೊಬ್ಬ ಒಡನಾಡಿಗಳ ಮನದೊಳಗೆ ಇನ್ನೂ ಜೀವಂತವಾಗಿದ್ದಾರೆ. ಅವರ ನೆನಪು ಸದಾ ನಮ್ಮೊಂದಿಗೆ ಇರಲಿದೆ.  

ಅಂಗಾಂಗ ದಾನದ ಮಹತ್ವವನ್ನು ಸಮಾಜಕ್ಕೆ ಸಾರಿದ ಅವರ ಕುಟುಂಬದ ಮಾನವೀಯ ನಿರ್ಧಾರಕ್ಕೆ ಹೃದಯಪೂರ್ವಕ ಗೌರವ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article