‘ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಬೇಕು’: ಎ.ಸಿ. ಭಂಡಾರಿ
ಮಂಗಳೂರು: ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂದು ಮಂಗಳೂರು ಅಖಿಲ ಭಾರತ ತುಳು ಒಕ್ಕೂಟದ ಎ.ಸಿ. ಭಂಡಾರಿ ತಿಳಿಸಿದರು.
ಅವರು ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1970ರಲ್ಲಿ ಎಸ್.ಆರ್.ಹೆಗ್ಡೆ ನೇತೃತ್ವದಲ್ಲಿ ಆರಂಭಗೊಂಡ ತುಳುಕೂಟ, ಕಳೆದ ಹಲವು ದಶಕಗಳಲ್ಲಿ ತುಳು ಭಾಷೆಯ ಬೆಳವಣಿಗೆ ಹಾಗೂ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದೆ. ಪ್ರಸ್ತುತ ದೇಶ-ವಿದೇಶಗಳಲ್ಲಿ ಸುಮಾರು 50 ಶಾಖೆಗಳನ್ನು ಹೊಂದಿದ್ದು, ತುಳು ಭಾಷೆ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಉಳಿವಿಗಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ತುಳು ಭಾಷೆ ಕೇವಲ ತುಳುವರ ಭಾಷೆಯಲ್ಲ. ಜಾತಿ, ಧರ್ಮ ಹಾಗೂ ಭಾಷೆಯ ಯಾವುದೇ ಭೇದವಿಲ್ಲದೆ ಕರ್ನಾಟಕದ ಎಲ್ಲರ ಭಾಷೆಯಾಗಿ ತುಳುವನ್ನು ಬೆಳೆಸುವ ಉದ್ದೇಶದಿಂದ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನ ದೊರಕಬೇಕು ಎಂಬುದು ದೇಶ-ವಿದೇಶಗಳಲ್ಲಿ ನೆಲೆಸಿರುವ ತುಳುವರ ಒಕ್ಕೊರಲಿನ ಆಶಯವಾಗಿದೆ. 18 ಲಕ್ಷಕ್ಕೂ ಅಧಿಕ ಜನರ ಮಾತೃಭಾಷೆಯಾಗಿರುವ ತುಳು, ತುಳುನಾಡಿನ ಸಾಂಸ್ಕೃತಿಕ ಹಾಗೂ ವ್ಯಾವಹಾರಿಕ ಭಾಷೆಯಾಗಿದೆ. ಸಮೃದ್ಧ ಸಾಹಿತ್ಯ, ಪುರಾತನ ಶಾಸನಗಳು ಮತ್ತು ಸ್ವಂತ ಲಿಪಿಯನ್ನು ಹೊಂದಿದ್ದರೂ ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ಹಾಗೂ ಸಂವಿಧಾನದ ೮ನೇ ಪರಿಚ್ಛೇದದ ಮಾನ್ಯತೆ ಇನ್ನೂ ದೊರಕಿಲ್ಲ ಎಂದು ಅವರು ವಿಷಾದಿಸಿದರು.
ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ತುಳುವಿಗೆ ಸ್ಥಾನಮಾನಕ್ಕೆ ನಿರ್ಣಯಿಸಲಾಗಿದೆ. ವಿವಿಧ ಸಂಘ-ಸಂಸ್ಥೆಗಳ ಮನವಿಗಳು ಹಾಗೂ ಡಾ.ಎಂ.ಮೋಹನ್ ಆಳ್ವ ನೇತೃತ್ವದ ಸಮಿತಿ ಸಲ್ಲಿಸಿದ ವರದಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಈ ಕುರಿತು ಶಾಸಕರು ಹಾಗೂ ಸಂಸದರು ಸದನದಲ್ಲೂ ಧ್ವನಿ ಎತ್ತಿದ್ದಾರೆ ಎಂದರು.
ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ನಿರ್ಧಾರ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕರಾವಳಿಯ ಎಲ್ಲ ಶಾಸಕರು ಒಕ್ಕೊರಲಿನಿಂದ ಬೆಂಬಲ ನೀಡಬೇಕು. ಈ ಮೂಲಕ ಸಚಿವ ಸಂಫುಟ ಸಭೆಯಲ್ಲಿ ತುಳುವರಿಗೆ, ನಾಡಿನ ಜನತೆಗೆ ಸಿಹಿ ಸುದ್ದಿ ಸಿಗಲಿ ಎಂದರು.
ಒಕ್ಕೂಟದ ಪ್ರಮುಖರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಯೋಗೀಶ್ ಶೆಟ್ಟಿ ಜೆಪ್ಪು, ಪಿ.ಎ.ಪೂಜಾರಿ, ಕದ್ರಿ ನವನೀತ ಶೆಟ್ಟಿ, ಗಂಗಾಧರ ಕಿದಿಯೂರು, ತಾರನಾಥ ಇದ್ದರು.