‘ಮಹಿಳಾ ಸಬಲೀಕರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಪಾತ್ರ ಮಹತ್ವದ್ದು’: ಶ್ರದ್ಧಾ ಅಮಿತ್
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಮಂಗಳೂರಿನ ಬಿಲ್ಲವ ಸಮುದಾಯ ಭವನದಲ್ಲಿ ಮಂಗಳವಾರ ಜ್ಞಾನ ವಿಕಾಸ-ಸ್ವಸಹಾಯ ಸಂಘಗಳ ಸದಸ್ಯರ ಜೊತೆಗಿನ ಸಂವಾದದಲ್ಲಿ ಅವರು ಮಾತನಾಡಿದರು.
ಸುಮಾರು 35 ವರ್ಷ ಹಿಂದೆ ಆರಂಭವಾದ ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಗೆ ದ.ಕ. ಜಿಲ್ಲೆಯೇ ಪ್ರಯೋಗ ಶಾಲೆಯಾಗಿದ್ದು, ಇಂದು ದೊಡ್ಡ ಯೋಜನೆಯಾಗಿ ಬೆಳೆದಿದೆ. ಈ ಯೋಜನೆಯ ಮೊದಲ ಫಲಾನುಭವಿಗಳು ನಮ್ಮ ಜಿಲ್ಲೆಯವರು ಎಂಬುದಕ್ಕೆ ಹೆಮ್ಮೆ ಇದೆ. ಈ ಯೋಜನೆ ಕೂಡ ನನ್ನ ಬಾಲ್ಯದ ದೊಡ್ಡ ಭಾಗವಾಗಿದ್ದು, ಯೋಜನೆ ಜೊತೆ ಜೊತೆಗೆ ನಾನೂ ಬೆಳೆದಿದ್ದೇನೆ. ಯೋಜನೆಯ ಸಭೆ, ಸಮಾರಂಭಗಳಿಗೆ ನಾನು ಕೂಡ ತಂದೆ ತಾಯಿಯರೊಂದಿಗೆ ಹೋಗುತ್ತಿದ್ದೆ. ಹಾಗಾಗಿ ಬಹಳ ಹತ್ತಿರದಿಂದ ಈ ಯೋಜನೆ ನೋಡಿದ್ದೇನೆ. ದ.ಕ. ಜಿಲ್ಲೆಯಲ್ಲಿ ಯೋಜನೆಗೆ ಸಿಗುವ ಪ್ರೀತಿ, ಆತ್ಮೀಯತೆ ಬೇರೆಲ್ಲೂ ಸಿಗದು. ಮಹಿಳೆಯರು ಕೂಡ ಅಧಿಕ ಸಂಖ್ಯೆಯಲ್ಲಿ ಈ ಯೋಜನೆಯಲ್ಲಿ ತೊಡಗಿಸಿಕೊಂಡಿರುವುದು ಗಮನಾರ್ಹ ಎಂದರು.
ಸಮಾಜದ ಹೀರೋಗಳು..
ಕರಾವಳಿ ಜಾನಪದ ಅಥವಾ ಐತಿಹ್ಯಗಳಲ್ಲಿ ಅಂದರೆ ರಾಣಿ ಅಬ್ಬಕ್ಕ, ಚೆನ್ನ ಭೈರಾದೇವಿ ಮುಂತಾದ ಸಾಧಕರು ಮಹಿಳೆಯರೇ ಆಗಿದ್ದಾರೆ. ಅಳಿಯ ಸಂತಾನ ಇಲ್ಲಿನ ವಿಶೇಷವಾಗಿದ್ದು, ಹೊರ ಜಿಲ್ಲೆಗಳಲ್ಲಿ ಇದನ್ನು ತಿಳಿದು ಅಚ್ಚರಿ ಪಡುತ್ತಾರೆ. ಎಸ್‌ಎಸ್‌ಎಲ್ಸಿ, ಪಿಯುಸಿ ಫಲಿತಾಂಶಗಳಲ್ಲೂ ಮಹಿಳೆಯರದ್ದೇ ಅಗ್ರಸ್ಥಾನ. ಹೀಗಿರುವಾಗ ಇಂತಹ ಪ್ರತಿಭೆಗಳನ್ನು ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕಾಣಬೇಕಾಗಿದೆ. ಪುರಾಣೇತಿಹಾಸಗಳಿಂದ ತೊಡಗಿ ಈಗಿನ ಸಿನಿಮಾ ರಂಗದ ವರೆಗೂ ಮಹಿಳೆಯರನ್ನು ಪುರುಷರು ರಕ್ಷಿಸಿದ ಸನ್ನಿವೇಶಗಳನ್ನೇ ಹೇಳಲಾಗುತ್ತಿದೆ. ರಕ್ಷಣೆ ಮತ್ತು ಅಭಿವೃದ್ಧಿ ಸ್ವತಃ ಮಹಿಳೆಯರಿಂದಲೇ ಸಾಧ್ಯ, ಮಹಿಳೆಯರೇ ಸಮಾಜದ ಹೀರೋಗಳು ಎಂದು ಹೇಳಿದರು.
ಸ್ನೇಹ ಜೀವಿಗಳು..
ಮಹಿಳೆಯರು ಸ್ನೇಹ ಜೀವಿಗಳಾಗಿದ್ದು, ಸಮಸ್ಯೆ ಬಂದಾಗ ಪರಿಹಾರವನ್ನೂ ಅವರೇ ಕಂಡುಕೊಳ್ಳುತ್ತಾರೆ. ಜ್ಞಾನ ವಿಕಾಸ ಸ್ವಸಹಾಯ ಸಂಘಗಳಲ್ಲಿ ಕರ್ತವ್ಯ, ನೇತೃತ್ವ ಹಾಗೂ ಮಾತೃತ್ವ ಈ ಮೂರು ಸಂಗತಿಗಳಲ್ಲಿ ನಾರಿ ಶಕ್ತಿ ಕೇವಲ ಮನೆಗೆ ಸೀಮಿತವಾಗದೆ ವಿಕಸಿತ ಸಮಾಜಕ್ಕೆ ಕಾರಣಕರ್ತಳಾಗಿದ್ದಾಳೆ. ಹೇಮಾವತಿ ಹೆಗ್ಗಡೆ ಅವರ ಜ್ಞಾನ ವಿಕಾಸ ಕಾರ್ಯಕ್ರಮ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಲು ಸಾಧ್ಯವಾಗಿದೆ. ಸ್ವಉದ್ಯೋಗ ಕೈಗೊಂಡು ಅನೇಕ ಮಂದಿ ಮಹಿಳೆಯರು ಆರ್ಥಿಕ ಸಬಲೀಕರಣರಾಗಿದ್ದಾರೆ ಎಂದರು.
ಈ ಸಂದರ್ಭ ಜ್ಞಾನ ವಿಕಾಸ-ಸ್ವಸಹಾಯ ಸಂಘಗಳ 179ನೇ ಸದಸ್ಯೆ ಹೇಮಲತಾಗೆ ಮಂಜೂರಾತಿ ಪತ್ರ ಹಸ್ತಾಂತರಿಸಲಾಯಿತು. ಮಂಗಳೂರು ತಾಲೂಕಿನ ಶಾಲೆಗಳಿಗೆ ಜ್ಞಾನದೀಪ ಯೋಜನೆಯಡಿ ನೇಮಕಗೊಂಡ ಏಳು ಮಂದಿ ಗೌರವ ಶಿಕ್ಷಕಿಯರಿಗೆ ಮಂಜೂರಾತಿ ಪತ್ರ ನೀಡಲಾಯಿತು. ಈ ವೇಳೆ ಶ್ರದ್ಧಾ ಅಮಿತ್ ಅವರನ್ನು ಗೌರವಿಸಲಾಯಿತು.
ಜ್ಞಾನ ವಿಕಾಸ ಸ್ವಸಹಾಯ ಸಂಘಗಳ ಸದಸ್ಯರಾದ ಅನಿತಾ, ಚೈತ್ರಾ, ವಿದ್ಯಾ ಸರಸ್ವತಿ, ಗೌರಿ ಚಂದ್ರಹಾಸ, ಕವಿತಾ ಮತ್ತಿತರರು ಅನಿಸಿಕೆ ವ್ಯಕ್ತಪಡಿಸಿದರು.
ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ಇದರ ಯೋಜನಾಧಿಕಾರಿ ಚಂದ್ರಶೇಖರ್, ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಜಿಲ್ಲಾ ನಿರ್ದೇಶಕ ದಿನೇಶ್ ಇದ್ದರು.
ಆಶಾ ವಂದಿಸಿದರು. ಸವಿತಾ ನಿರೂಪಿಸಿದರು.