‘ದಕ್ಷಿಣ ಕನ್ನಡ ಹೆಸರು ಉಳಿಸಿ’ ಆಗ್ರಹ

‘ದಕ್ಷಿಣ ಕನ್ನಡ ಹೆಸರು ಉಳಿಸಿ’ ಆಗ್ರಹ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ ಹೆಸರನ್ನು ಬದಲಾಯಿಸಿ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡದೆ, ದಕ್ಷಿಣ ಕನ್ನಡ ಎಂಬ ಹೆಸರು ಉಳಿಸಿ ಎಂದು ದಕ್ಷಿಣ ಕನ್ನಡ ಉಳಿಸಿ ವೇದಿಕೆ ರಾಜ್ಯ ಸರಕಾರವನ್ನು ಆಗ್ರಹಿಸಿದೆ.

ಈ ಕುರಿತು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು. ನಮ್ಮ ಬೇಡಿಕೆ ಮಂಗಳೂರಿನ ವಿರುದ್ಧವಾಗಿಲ್ಲ. ಮಂಗಳೂರು ಈ ಪ್ರದೇಶದ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಕೇಂದ್ರವಾಗಿದ್ದು, ತನ್ನದೇ ಆದ ವಿಶಿಷ್ಟ ಅಸ್ತಿತ್ವ ಮತ್ತು ಮಹತ್ವವನ್ನು ಹೊಂದಿದೆ. ಆದರೆ ‘ದಕ್ಷಿಣ ಕನ್ನಡ’ ಎಂಬ ಹೆಸರು ಮಂಗಳೂರನ್ನು ಮೀರಿದ ವಿಶಾಲ ಭೌಗೋಳಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರದೇಶವನ್ನು ಪ್ರತಿನಿಽಸುತ್ತದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಎಂಬ ಹೆಸರನ್ನು ಉಳಿಸಬೇಕಿದೆ ಎಂದು ದಕ್ಷಿಣ ಕನ್ನಡ ಉಳಿಸಿ ವೇದಿಕೆ ಪರವಾಗಿ ಲೇಖಕ ವಿಲಿಯಮ್ ಪಾಯ್ಸ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಸಂಶೋಧಕ ಬೆನೆಟ್ ಅಮ್ಮಣ್ಣ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಗೆ 150 ವರ್ಷಕ್ಕೂ ಮೀರಿದ ಆಡಳಿತಾತ್ಮಕ ಇತಿಹಾಸವಿದೆ. ಈ ಪ್ರದೇಶವು ಹಿಂದೆ ‘ಸೌತ್ ಕೆನರಾ’ ಅಥವಾ ’ಸೌತ್ ಕನಾರಾ’ ಎಂದು ಕರೆಯಲ್ಪಡುತ್ತಿತ್ತು. 1977ರ ಜನವರಿಯಲ್ಲಿ ಕರ್ನಾಟಕ ಸರಕಾರವು ’ಸೌತ್ ಕನಾರಾ’ ಹೆಸರನ್ನು ‘ದಕ್ಷಿಣ ಕನ್ನಡ’ ಎಂದು ಬದಲಾಯಿಸಿತು. ಹೀಗಾಗಿ ‘ದಕ್ಷಿಣ ಕನ್ನಡ’ ಎಂಬ ಹೆಸರು ಈಗ ಸುಮಾರು ಐದು ದಶಕಗಳ ಐತಿಹಾಸಿಕ ನಿರಂತರತೆಯನ್ನು ಹೊಂದಿದೆ ಎಂದು ತಿಳಿಸಿದರು.

ಜಿಲ್ಲೆಯ ಕೇಂದ್ರ ಮಂಗಳೂರು ಎಂಬ ಕಾರಣಕ್ಕೆ ಜಿಲ್ಲೆಯ ಹೆಸರನ್ನೂ ಮಂಗಳೂರಿನ ಹೆಸರಿನಿಂದಲೇ ಕರೆಯಬೇಕೆಂಬ ಆಡಳಿತಾತ್ಮಕ ಅನಿವಾರ್ಯತೆ ಇಲ್ಲ. ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಮೂಡುಬಿದಿರೆ, ಮುಲ್ಕಿ ಸೇರಿದಂತೆ ಅನೇಕ ಪಟ್ಟಣಗಳು, ಗ್ರಾಮಗಳು ಮತ್ತು ಐತಿಹಾಸಿಕ ಪ್ರದೇಶಗಳು ದಕ್ಷಿಣ ಕನ್ನಡದ ವಿಶಾಲ ಅಸ್ತಿತ್ವದ ಭಾಗವಾಗಿವೆ ಎಂದರು.

ಸರಕಾರ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿರುವುದು ಸ್ವಾಗತಾರ್ಹ. ಈ ಪ್ರಕ್ರಿಯೆಯನ್ನು ಮಂಗಳೂರು ನಗರಕ್ಕೆ ಮಾತ್ರ ಸೀಮಿತಗೊಳಿಸದೆ ಜಿಲ್ಲೆಯ ಎಲ್ಲಾ ತಾಲೂಕುಗಳು, ಪಟ್ಟಣಗಳು ಹಾಗೂ ಗ್ರಾಮಗಳ ಜನರ ಅಭಿಪ್ರಾಯವನ್ನು ಒಳಗೊಂಡಂತೆ ವ್ಯಾಪಕ ಹಾಗೂ ಪಾರದರ್ಶಕವಾಗಿ ನಡೆಸಬೇಕು. ಇತಿಹಾಸಕಾರರು, ಶಿಕ್ಷಣ ತಜ್ಞರು, ಸಾಹಿತಿಗಳು, ಸಾಂಸ್ಕೃತಿಕ ಸಂಘಟನೆಗಳು ಹಾಗೂ ಇತರ ಪ್ರಮುಖ ಪಾಲುದಾರರ ಅಭಿಪ್ರಾಯವನ್ನೂ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ವೇದಿಕೆಯ ಪ್ರೊ. ಕೃಷ್ಣಮೂರ್ತಿ, ಸ್ಟೀವನ್ ಪಾಯ್ಸ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article