ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು ಯಶಸ್ವಿ ಪ್ರಾಯೋಗಿಕ ಸಂಚಾರ
ಯಶವಂತಪುರ ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಈ ಪರೀಕ್ಷಾರ್ಥ ಸಂಚಾರ ನಡೆಯುತ್ತಿದ್ದು, ರೈಲಿನ ವೇಗ, ಪ್ರಯಾಣದ ಸಮಯ ಹಾಗೂ ಸವಾಲಿನ ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಘಾಟಿ ಪ್ರದೇಶದಲ್ಲಿ ರೈಲಿನ ಕಾರ್ಯಾಚರಣೆ ಮತ್ತು ಸುರಕ್ಷತೆಯನ್ನು ಪರಿಶೀಲಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದು ಪರೀಕ್ಷಾರ್ಥ ಓಟವಾದ್ದರಿಂದ ಸಾರ್ವಜನಿಕ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿಲ್ಲ.
ಯಶವಂತಪುರದಿಂದ ಮಂಗಳೂರು: ಶನಿವಾರ ಬೆಳಿಗ್ಗೆ 6.05ಕ್ಕೆ ಯಶವಂತಪುರದಿಂದ ಹೊರಟಿರುವ ರೈಲು, ಬೆಳಿಗ್ಗೆ 9ಕ್ಕೆ ಹಾಸನ ಜಂಕ್ಷನ್ ತಲುಪಿ, 9.05ಕ್ಕೆ ಹೊರಟು 9.55ಕ್ಕೆ ಸಕಲೇಶಪುರ ನಿಲ್ದಾಣ ತಲುಪಿದೆ. ಸಕಲೇಶಪುರದಲ್ಲಿ 5 ನಿಮಿಷ ನಿಂತು 10 ಗಂಟೆಗೆ ಘಾಟಿ ಪ್ರದೇಶ ಪ್ರವೇಶಿಸಿದೆ. ಬಳಿಕ ಮಧ್ಯಾಹ್ನ 12.30ಕ್ಕೆ ಸುಬ್ರಹ್ಮಣ್ಯ ರೋಡ್ ತಲುಪಿ, 12.35ಕ್ಕೆ ಹೊರಟು ಮಧ್ಯಾಹ್ನ 4.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
ಮಂಗಳೂರಿನಿಂದ ಯಶವಂತಪುರ (ಹಿಂದಿರುಗುವ ಪ್ರಯಾಣ): ಮಧ್ಯಾಹ್ನ 3 ಗಂಟೆಗೆ ಮಂಗಳೂರು ಸೆಂಟ್ರಲ್ನಿಂದ ಹೊರಡಲಿರುವ ರೈಲು, ಮಧ್ಯಾಹ್ನ 3.25ಕ್ಕೆ ಪಡೀಲ್ ಕ್ರಾಸ್ ಮಾಡಲಿದೆ. ಸಂಜೆ 4.30ಕ್ಕೆ ಸುಬ್ರಹ್ಮಣ್ಯ ರೋಡ್ ತಲುಪಿ 4.35ಕ್ಕೆ ಹೊರಟು, ಸಂಜೆ 6.30ಕ್ಕೆ ಸಕಲೇಶಪುರಕ್ಕೆ ಆಗಮಿಸಲಿದೆ. ಅಲ್ಲಿಂದ 6.35ಕ್ಕೆ ಹೊರಟು ರಾತ್ರಿ 7.20ಕ್ಕೆ ಹಾಸನ ತಲುಪಿ, ಇತರ ರೈಲುಗಳ ಸಂಚಾರಕ್ಕಾಗಿ 10 ನಿಮಿಷ ನಿಲ್ಲಲಿದೆ. ಅಂತಿಮವಾಗಿ ಹಾಸನದಿಂದ ಹೊರಟು ರಾತ್ರಿ 11 ಗಂಟೆಗೆ ಯಶವಂತಪುರ ಜಂಕ್ಷನ್ ತಲುಪಲಿದೆ.
ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ ಘಾಟಿ ಪ್ರದೇಶವು ಕಡಿದಾದ ತಿರುವುಗಳು ಹಾಗೂ ಇಳಿಜಾರುಗಳಿಂದ ಕೂಡಿದೆ. ಹೀಗಾಗಿ, ವಂದೇ ಭಾರತ್ ರೈಲಿನ ಬ್ರೇಕಿಂಗ್ ವ್ಯವಸ್ಥೆ, ವೇಗದ ನಿಯಂತ್ರಣ ಮತ್ತು ಸುರಕ್ಷತೆಯನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಲಾಗುತ್ತಿದೆ. ಈ ಪ್ರಯೋಗದ ವರದಿ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ರೈಲಿನ ಅಧಿಕೃತ ವೇಳಾಪಟ್ಟಿ ಹಾಗೂ ಪ್ರಯಾಣದ ಅವಧಿ ಅಂತಿಮಗೊಳ್ಳಲಿದೆ.