‘ದೇಶದ ಶಿಲ್ಪಿಗಳನ್ನು ತಯಾರಿಸುವ ಶಕ್ತಿ ಶಿಕ್ಷಕರಲ್ಲಿದೆ’: ಸಚಿವ ಯು.ಟಿ.ಖಾದರ್
ಶನಿವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತ್ ನೇತೃತ್ವ ಹಾಗೂ ವಿವಿಧ ಇಲಾಖೆಗಳ ಸಹಕಾರದಲ್ಲಿ ಆಯೋಜಿಸಲಾದ ಮಂಗಳೂರು ಉತ್ತರ ವಲಯ ವತಿಯಿಂದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳನ್ನು ತಮ್ಮ ಶಿಕ್ಷಣದ ಮೂಲಕ ದೊಡ್ಡ ಶಕ್ತಿಯನ್ನಾಗಿ ಬದಲಾಯಿಸುವ ಸಾಮರ್ಥ್ಯ ಶಿಕ್ಷಕರಿಂದ ಮಾತ್ರ ಸಾಧ್ಯ. ಅವರ ಬುದ್ಧಿಶಕ್ತಿ, ಪ್ರತಿಭೆಯನ್ನು ವಿದ್ಯಾರ್ಥಿಗಳಿಗೆ ಮೀಸಲು ಇಟ್ಟು ನಡೆದರೆ ದೇಶದ ಅದ್ಬುತ ಸಂಪತ್ತಿನ ಸೃಷ್ಟಿಯಾಗಬಲ್ಲದು. ಇಂದಿನ ದಿನಗಳಲ್ಲಿ ಶಿಕ್ಷಣ ಪಡೆದವರು ದುಷ್ಕೃತ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಆದ್ದರಿಂದ ಬರೀ ಶಿಕ್ಷಣ ನೀಡಿದರೆ ಸಾಲದು ಮೌಲ್ಯಾಧರಿತ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಆಧುನಿಕ ತಂತ್ರಜ್ಞಾನದ ಕಾಲಘಟ್ಟದಲ್ಲಿ ಶಿಕ್ಷಕರು ಬಹಳಷ್ಟು ಕಲಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ತಮ್ಮನ್ನು ತಾವೇ ತಂತ್ರಜ್ಞಾನ, ವಿದ್ಯಾರ್ಥಿಗಳಿಗಾಗಿ ಅಪ್ಡೇಟ್ ಆಗಬೇಕಾದ ಅಗತ್ಯವಿದೆ. ಈ ರೀತಿಯ ಬದಲಾವಣೆಯಲ್ಲಿ ಶಿಕ್ಷಕರು ಹೊಂದಾಣಿಕೆ ಮಾಡದೇ ಇದ್ದರೆ ಅವರ ಶೈಕ್ಷಣಿಕ ಬದುಕು ಕಷ್ಟಕರವಾಗುವ ಸಾಧ್ಯತೆಯಿದೆ. ಎಐಗೆ ಈಗ ಜಾಸ್ತಿ ಒತ್ತು ನೀಡಿದಾಗ ಶಿಕ್ಷಕರು ವಿದ್ಯಾರ್ಥಿಗಳ ಹತ್ತಿರವಾಗುವ ಜತೆಗೆ ಸಮಾಜದಿಂದ ದೂರ ಉಳಿಯುವುದು ತಪ್ಪುತ್ತದೆ ಎಂದರು.
ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಯ 21 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭ ಮಂಗಳೂರು ಉತ್ತರ ವಲಯದ ನಿವೃತ್ತ ಶಿಕ್ಷಕ/ ಶಿಕ್ಷಕೇತರ ನೌಕರರನ್ನು ಸನ್ಮಾನಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೂಡ ಅಧ್ಯಕ್ಷ ಸಂತೋಷ್ ಶೆಟ್ಟಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಡಿ.ಎಸ್. ಗಟ್ಟಿ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶಾಲೆಟ್ ಪಿಂಟೋ, ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಜಿ.ಪಂ. ಸಿಇಒ ವಿನಾಯಕ್ ಕಾರ್ಭಾರಿ, ಮಂಗಳೂರು ಮನಪಾ ಆಯುಕ್ತ ರಾಹುಲ್ ರತ್ನಂ ಪಾಂಡೆ, ಮಂಗಳೂರು ಸಹಾಯಕ ಆಯುಕ್ತರಾದ ಮೀನಾಕ್ಷಿ ಆರ್ಯ, ಡಿಡಿಪಿಐ ಜಿ.ಎಸ್.ಶಶಿಧರ್, ಮಂಗಳೂರು ಉತ್ತರ ವಲಯದ ಬಿಇಒ ಜೇಮ್ಸ್ ಕುಟಿನ್ಹಾ ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಶಿಕ್ಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರಾದೇಶಿಕ ರಕ್ತಪೂರಣ ಕೇಂದ್ರ ವೆನ್ಲಾಕ್ನ ಸಹಯೋಗದಲ್ಲಿ ಬಹಳಷ್ಟು ಶಿಕ್ಷಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.