ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಮನವಿ

ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಮನವಿ


ಮಂಗಳೂರು: ಕರಾವಳಿ ಜಿಲ್ಲೆಗಳ ಮೂಲ ನಿವಾಸಿಗಳಾದ ಕೊರಗ ಸಮುದಾಯದ ಪ್ರಮುಖ ಬೇಡಿಕೆಯಾದ ಭೂಮಿ ಹಕ್ಕು ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಶಾಶ್ವತ ಪರಿಹಾರಕ್ಕೆ ನಿಯಮ ರೂಪಿಸುವಂತೆ ಒತ್ತಾಯಿಸಿ ಕೊರಗ ಪ್ರತಿನಿಧಿಗಳು ಸೋಮವಾರ ದ.ಕ. ಜಿಲ್ಲಾ ಪ್ರಜಾಸೌಧಕ್ಕೆ ಮೌನ ಜಾಥಾ ನಡೆಸಿದರು.

ದ.ಕ. ಜಿಲ್ಲಾ ಕೊರಗರ ಸಂಘದ ವತಿಯಿಂದ ಮಂಗಳೂರಿನ ಪಡೀಲ್ ವೃತ್ತದಿಂದ ಪ್ರಜಾಸೌಧದ ಬಾಗಿಲವರೆಗೆ ಬ್ಯಾನರ್ ಹಿಡಿದುಕೊಂಡು ನೂರಾರು ಮಂದಿ ಕೊರಗರು ಮೌನ ಜಾಥಾ ನಡೆಸಿದರಲ್ಲದೆ, ಸಮುದಾಯದ ನಾಯಕರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿಯನ್ನು ಸಲ್ಲಿಸಿದರು. 

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲನಿವಾಸಿ ಕೊರಗರು ಬುಡಕಟ್ಟು ಪಂಗಡಕ್ಕೆ ಸೇರಿದವರು. ಭಾರತದ ಒಟ್ಟು 75 ಪಿವಿಟಿಜಿ ಬುಡಕಟ್ಟು ಸಮುದಾಯಗಳ ಪಟ್ಟಿಯಲ್ಲಿ ಕೊರಗ ಸಮುದಾಯವೂ ಒಂದು. ದುರ್ಬಲ ಸೂಕ್ಷ್ಮ ಬುಡಕಟ್ಟು (ಪಿವಿಟಿಜಿ) ಎಂದು ಗುರುತಿಸುವ ವೇಳೆ ಕೃಷಿ ಪೂರ್ವ ನಾಗರಿಕತೆ ಅಸ್ತಿತ್ವ, ಕಡಿಮೆಯಾಗುತ್ತಿರುವ ಜನಸಂಖ್ಯೆ, ಅತ್ಯಂತ ಕಡಿಮೆ ಸಾಕ್ಷರತೆ, ಆರ್ಥಿಕವಾಗಿ ತೀರಾ ಹಿಂದುಳಿದಿರುವ ಅಂಶಗಳನ್ನು ಗಮನಿಸಲಾಗಿದೆ. ಕೊರಗರು ಪ್ರಕೃತಿಯ ಆರಾಧಕರು. ಪ್ರಜ್ಞಾವಂತ ನಾಗರಿಕರ ತುಳಿತ, ಅಸ್ಪೃಶ್ಯತೆ, ಶೋಷಣೆಗೆ ಬಲಿಯಾಗಿ ನಲುಗಿ ಹೋದವರು. 

ಇಂದಿಗೂ ಸಾಮಾಜಿಕವಾಗಿ ಹಿಂಜರಿಕೆಯನ್ನು ಸಮುದಾಯ ಅನುಭವಿಸುತ್ತಿದೆ. ಕರ್ನಾಟಕ ಕರಾವಳಿಯ ಭವ್ಯ ಸಂಸ್ಕೃತಿ, ಇತಿಹಾಸ, ಪರಂಪರೆಯ ಭಾಗದ ವಾರಸುದಾರರು. ನಮ್ಮ ಸಮುದಾಯ ಶಿಕ್ಷಣ, ಆರೋಗ್ಯ ಮಾತ್ರವಲ್ಲದೆ, ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯವಾಗಿಯೂ ಹಿಂದುಳಿದವರು. ಅಳಿವಿನಂಚಿನಲ್ಲಿರುವ ನಮ್ಮ ಸಮುದಾಯದ ಸಮಗ್ರ ಅಧ್ಯಯನ ನಡೆಸಿರುವ ಡಾ. ಮುಹಮ್ಮದ್ ಫೀರ್ ವರದಿಯಲ್ಲಿ ಪ್ರತಿ ಕೊರಗ ಕುಟುಂಬಗಳಿಗೆ ಕನಿಷ್ಠ 2.5 ಎಕರೆ ಕೃಷಿಗೆ ಭೂಮಿಯನ್ನು ಒದಗಿಸಿ ಪುನರ್ವಸತಿಕಲ್ಪಿಸುವಂತೆ ಶಿಫಾರಸು ಮಾಡಿದೆ. 1994 ರಲ್ಲಿ ಡಾ. ಫೀರ್ ವರದಿಯು ಜಿಲ್ಲಾ ಆಡಳಿತಕ್ಕೆ ಸಲ್ಲಿಕೆಯಾಗಿ ಸುಮಾರು 35 ವರ್ಷಗಳು ಕಳೆದಿವೆ. ಆದರೂ ನಮ್ಮ ಅಭಿವೃದ್ಧಿಗೆ ಪೂರಕವಾಗಿ ವರದಿಯು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. 

ಇದೀಗ ನಮ್ಮ ಸನ್ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಅಭಿವೃದ್ಧಿಯ ಒಟ್ಟಿಗೆ ನಮ್ಮ ಸಮುದಾಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಶಾಶ್ವತ ಪರಿಹಾರದ ನಿಯಮ ರೂಪಿಸಲು ಸೂಕ್ತ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article