ಮೂಡುಮಾನಾ೯ಡಿನ ಅಶಕ್ತ ಕುಟುಂಬಕ್ಕೆ ಯುವವಾಹಿನಿಯಿಂದ 12 ಲಕ್ಷ ರೂ. ವೆಚ್ಚದ ನೂತನ ಮನೆ ನಿಮಾ೯ಣ: ಹಸ್ತಾಂತರ

ಮೂಡುಮಾನಾ೯ಡಿನ ಅಶಕ್ತ ಕುಟುಂಬಕ್ಕೆ ಯುವವಾಹಿನಿಯಿಂದ 12 ಲಕ್ಷ ರೂ. ವೆಚ್ಚದ ನೂತನ ಮನೆ ನಿಮಾ೯ಣ: ಹಸ್ತಾಂತರ


ಮೂಡುಬಿದಿರೆ: ಮೂಡುಮಾರ್ನಾಡ್‌ನ ಅಶಕ್ತ ಕುಟುಂಬಕ್ಕೆ ಮೂಡುಬಿದಿರೆ ಯುವವಾಹಿನಿ ಘಟಕವು ದಾನಿಗಳ ಸಹಕಾರದೊಂದಿಗೆ  ಸುಮಾರು 12 ರೂ. ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆಯನ್ನು ಭಾನುವಾರ ಹಸ್ತಾಂತರಿಸಿತು. 


ಕರ್ನಾಟಕ ಸರ್ಕಾರದ ಹೈಕೋರ್ಟ್ ಹೆಚ್ಚುವರಿ ಅಡ್ವೊಕೇಟ್ ಜನರಲ್ ಇರುವೈಲು ತಾರಾನಾಥ್ ಪೂಜಾರಿ ಅವರು ದೀಪ ಬೆಳಗಿಸುವ ಮೂಲಕ ಮನೆ ಹಸ್ತಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಅಶಕ್ತ ಕುಟುಂಬವೊಂದಕ್ಕೆ ನೂತನ ಮನೆ ನಿರ್ಮಿಸಿಕೊಟ್ಟು ಸ್ವಾಭಿಮಾನದ ಬದುಕಿಗೆ ದಾರಿ ಮಾಡಿಕೊಡುವ ಮೂಲಕ ಯುವವಾಹಿನಿ ಕೈಗೊಂಡಿರುವ ಸಮಾಜಮುಖಿ ಹಾಗೂ ರಚನಾತ್ಮಕ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.


ಸಮಾಜದ ಅಗತ್ಯವಿರುವ ಕುಟುಂಬಗಳ ಕಷ್ಟಗಳಿಗೆ ಸ್ಪಂದಿಸಿ ಅವರ ಬದುಕಿನಲ್ಲಿ ಭರವಸೆ ಮೂಡಿಸುವ ಸೇವಾ ಕಾರ್ಯಗಳು ಸಂಘಟನೆಯ ಮೂಲ ಆಶಯವನ್ನು ಪ್ರತಿಬಿಂಬಿಸುತ್ತವೆ. ಮನೆ ನಿರ್ಮಾಣದಂತಹ ಶಾಶ್ವತ ನೆರವು ಒಂದು ಕುಟುಂಬಕ್ಕೆ ನೆಮ್ಮದಿ, ಭದ್ರತೆ ಹಾಗೂ ಸ್ವಾಭಿಮಾನದ ಬದುಕನ್ನು ಒದಗಿಸುತ್ತದೆ ಎಂದು ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ  ಅವರು ಸುಮಿತ್ರ ವಿಶ್ವನಾಥ್ ದಂಪತಿಗೆ ನೂತನ ಮನೆಯ ಕೀ ಹಸ್ತಾಂತರಿಸಿ ಮಾತನಾಡಿ, ಅಶಕ್ತ ಕುಟುಂಬವೊಂದಕ್ಕೆ ನೂತನ ಮನೆ ನಿರ್ಮಿಸಿಕೊಟ್ಟು ಅವರಿಗೆ ಸ್ವಾಭಿಮಾನದ ಬದುಕು ಕಲ್ಪಿಸಿರುವ ಯುವವಾಹಿನಿಯ ಸಮಾಜಮುಖಿ ಕಾರ್ಯ ಅರ್ಥಪೂರ್ಣವಾಗಿದೆ. ಮಾನವ ಜನ್ಮದ ಸಾರ್ಥಕತೆಗೆ ಇಂತಹ ಸೇವಾ ಕಾರ್ಯಗಳು ಮಾದರಿಯಾಗಿದೆ.

ಆರ್ಥಿಕವಾಗಿ ಹಿಂದುಳಿದ ಹಾಗೂ ಅಶಕ್ತ ಕುಟುಂಬಗಳಿಗೆ ನೆರವಾಗುವ ಮೂಲಕ ಅವರ ಬದುಕಿನಲ್ಲಿ ಭರವಸೆ ಮೂಡಿಸುವುದು ಅತ್ಯಂತ ಮಹತ್ವದ್ದಾಗಿದೆ. ಕೇವಲ ತಾತ್ಕಾಲಿಕ ಸಹಾಯ ನೀಡುವುದಕ್ಕಿಂತ ಒಂದು ಕುಟುಂಬ ಸ್ವಾಭಿಮಾನದಿಂದ ಬದುಕಲು ಶಾಶ್ವತ ನೆಲೆ ಕಲ್ಪಿಸುವುದು ನಿಜವಾದ ಮಾನವೀಯ ಸೇವೆಯಾಗಿದೆ ಎಂದು ಅವರು ಹೇಳಿದರು.

ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಮಾರೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. 

ಮನೆ ನಿರ್ಮಾಣದ ನೇತೃತ್ವ ವಹಿಸಿದ್ದ ಘಟಕದ ಮಾಜಿ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಡು, ಶ್ರೀಕ್ಷೇತ್ರ ಹೋಯ್ಪಾಲಬೆಟ್ಟದ ಅನುವಂಶಿಕ ಆಡಳಿತ ಮೊಕ್ತೇಸರ ರಾಜೇಶ್ ಬಲ್ಲಾಳ್, ಮೂಡುಮಾರ್ನಾಡ್ ವೇದಮೂರ್ತಿ ಅನಂತ ಪದ್ಮನಾಭ ಆಸ್ರಣ್ಣ, ಮೂಡುಬಿದಿರೆ ಭೂನ್ಯಾಯ ಮಂಡಳಿ ಸದಸ್ಯ ರಮೇಶ್ ಶೆಟ್ಟಿ, ಪಾಪಣ್ಣ ಪೂಜಾರಿ ಗುಮಡಬೆಟ್ಟು ಹಾಗೂ ಮೂಡುಬಿದಿರೆ ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಯುವವಾಹಿನಿ ಮೂಡುಬಿದಿರೆ ಘಟಕದ ಸಮಾಜ ಸೇವಾ ನಿರ್ದೇಶಕ ಉಮೇಶ್ ಕೋಟ್ಯಾನ್, ಕಾರ್ಯದರ್ಶಿ ಮೇಘನಾ, ಕೋಶಾಧಿಕಾರಿ ಜಯಶೀಲಾ ಪೂಜಾರಿ ಹಾಗೂ ಸುಮಿತ್ರಾ ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.

ಪ್ರಾರ್ಥನೆಯನ್ನು ಸುನೀಕ್ಷಾ ಮತ್ತು ಗಾನವಿ ನೆರವೇರಿಸಿದರು. ಘಟಕದ ಮಾಜಿ ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ. ಪ್ರಸ್ತಾವನೆ ಮಂಡಿಸಿ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ ಮನೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಪರಿಚಯಿಸಿ ಗೌರವಿಸಿದರು. ರಾಮ್ ಕುಮಾರ್ ಮೂಡುಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article