ಜವನೆರ್ ಬೆದ್ರ ಫೌಂಡೇಶನ್ ನಿಂದ ಎಕ್ಸಲೆಂಟ್ ಸಂಸ್ಥೆಯ ಯುವರಾಜ್ ಜೈನ್ ಅವರಿಗೆ 2026ನೇ ಸಾಲಿನ ‘ಕೃಷ್ಣೋತ್ಸವ ಪ್ರಶಸ್ತಿ’ ಪ್ರದಾನ

ಜವನೆರ್ ಬೆದ್ರ ಫೌಂಡೇಶನ್ ನಿಂದ ಎಕ್ಸಲೆಂಟ್ ಸಂಸ್ಥೆಯ ಯುವರಾಜ್ ಜೈನ್ ಅವರಿಗೆ 2026ನೇ ಸಾಲಿನ ‘ಕೃಷ್ಣೋತ್ಸವ ಪ್ರಶಸ್ತಿ’ ಪ್ರದಾನ


ಮೂಡುಬಿದಿರೆ: ಶ್ರೀ ಗೋಪಾಲಕೃಷ್ಣ ದೇವಸ್ಥಾನದ 110ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಂಗವಾಗಿ  ಜವನೆರ್ ಬೆದ್ರ ಫೌಂಡೇಶನ್ ವತಿಯಿಂದ  ಆಯೋಜಿಸಲಾದ ‘ಬೆದ್ರದ ಕೃಷ್ಣೋತ್ಸವ–2026’ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅವರಿಗೆ 2026ನೇ ಸಾಲಿನ ‘ಕೃಷ್ಣೋತ್ಸವ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಕೆ. ಅಮರನಾಥ ಶೆಟ್ಟಿ ವೃತ್ತದ ಬಳಿಯ ವೇಣೂರು ಕೃಷ್ಣಯ್ಯ ವೇದಿಕೆಯಲ್ಲಿ ಬೆದ್ರದ ಕೃಷ್ಣೋತ್ಸವ–2026 ಕಾರ್ಯಕ್ರಮವನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಯುವರಾಜ್ ಜೈನ್, ಮನುಷ್ಯ ಎಷ್ಟು ವರ್ಷ ಬದುಕಿದ್ದಾನೆ ಎನ್ನುವುದಕ್ಕಿಂತ ಹೇಗೆ ಬದುಕಿದ್ದಾನೆ ಎಂಬುದು ಮುಖ್ಯ. ಸಮಾಜಕ್ಕಾಗಿ ಬದುಕುವವರು ಜನರ ಮನಸ್ಸಿನಲ್ಲಿ ಸದಾ ಉಳಿಯುತ್ತಾರೆ. ಕೃಷ್ಣೋತ್ಸವ–2026ರ ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಮೂಡುಬಿದಿರೆಯನ್ನು ಗೌರವಿಸಿರುವುದು ಸಂತೋಷದ ವಿಷಯವಾಗಿದೆ. ಜವನೆರ್ ಬೆದ್ರ ತಂಡವು ರಕ್ತದಾನ, ಪರಿಸರ ಸಂರಕ್ಷಣೆ ಹಾಗೂ ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಮೂಲಕ ಆದರ್ಶಪ್ರಾಯ ಕಾರ್ಯ ಮಾಡುತ್ತಿದೆ. ಮುಂದಿನ ಪೀಳಿಗೆಗೂ ಒಳಿತಾಗುವ ಕೆಲಸಗಳನ್ನು ಮಾಡುವ ಮೂಲಕ ಬದುಕಿರುವಾಗಲೇ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ಯಕ್ಷಗಾನ ಭಾಗವತ ರವಿಚಂದ್ರ ಕನ್ನಡಕಟ್ಟೆ, ಶ್ರೀಕೃಷ್ಣ ಕಲಾಕೃತಿ ರಚಿಸುತ್ತಿರುವ ಜಗನ್ನಾಥ್ ಪ್ರಭು, ಯುವ ವಾಹಿನಿಯ ಪ್ರಮುಖ ಜಗದೀಶ್ ಚಂದ್ರ ಡಿ.ಕೆ. ಹಾಗೂ ಪರಿಸರ ಸ್ನೇಹಿಯಾಗಿ ಗುರುತಿಸಿಕೊಂಡಿರುವ ಸಂಧ್ಯಾ ಭಟ್ ಅವರನ್ನು ಸನ್ಮಾನಿಸಲಾಯಿತು.

ಚೌಟರ ಅರಮನೆಯ ಕುಲದೀಪ್ ಎಂ., ಧನಲಕ್ಷ್ಮಿ ಸಂಸ್ಥೆಯ ಮಾಲಕ ಶ್ರೀಪತಿ ಭಟ್, ಬಿಜೆಪಿ ಮುಖಂಡ ಕೆ.ಪಿ. ಜಗದೀಶ ಅಧಿಕಾರಿ, ವಕೀಲ ಶರತ್ ಶೆಟ್ಟಿ, ಕೆ. ಅಮರನಾಥ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ಡಾ. ಅಮರಶ್ರೀ ಶೆಟ್ಟಿ, ಇರುವೈಲ್ ಬಿಲ್ಲವ ಸಂಘದ ಅಧ್ಯಕ್ಷ ಕುಮಾರ್ ಪೂಜಾರಿ, ಮಯೂರಿ ಸಿಲ್ಕ್ ಮಾಲಕ ರಾಜೇಂದ್ರ, ಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರ ಗುರುಪ್ರಸಾದ್ ಹೊಳ್ಳ ಉಪಸ್ಥಿತರಿದ್ದರು.

ಜವನೆರ್ ಬೆದ್ರ ಫೌಂಡೇಶನ್ ಸಂಸ್ಥಾಪಕ ಅಮರ್ ಕೋಟೆ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯ್ಕ್, ಉಪಾಧ್ಯಕ್ಷ ನಾರಾಯಣ ಪಡುಮಲೆ, ಸಹ ಕಾರ್ಯದರ್ಶಿ ಸಂದೀಪ್ ಕೆಲ್ಲಪುತ್ತಿಗೆ ಹಾಗೂ ಕ್ರೀಡಾ ಸಂಯೋಜಕ ಸುಮಂತ್ ಶೆಟ್ಟಿ ಸೇರಿದಂತೆ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಂಚಾಲಕ ರಂಜಿತ್ ಶೆಟ್ಟಿ ಸ್ವಾಗತಿಸಿದರು. ಅಕ್ಷಯ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂದೀಪ್ ಶೆಟ್ಟಿ ಕೆಲ್ಲಪುತಿಗೆ ಕಾರ್ಯಕ್ರಮ ನಿರೂಪಿದರು.

ಕಾರ್ಯಕ್ರಮದ ಅಂಗವಾಗಿ ‘ಅಷ್ಟಮಿದ ಪಿಲಿಗೊಬ್ಬು’ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ದಿವ್ಯನಿಧಿ ರೈ ಎರುಂಬು ಮತ್ತು ಬಳಗದವರಿಂದ ನಡೆದ ‘ಸ್ವರ ಸಮರ್ಪಣೆ’ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.

ಬಳಿಕ ಪಟ್ಲ ಸತೀಶ್ ಶೆಟ್ಟಿ ಹಾಗೂ ರವಿಚಂದ್ರ ಕನ್ನಡಕಟ್ಟೆ ಸಾರಥ್ಯದಲ್ಲಿ ರವೀಂದ್ರ ದೇವಾಡಿಗ, ಸಂದೇಶ್ ಬೇಳ್ಳೂರು ಮತ್ತು ತಂಡದಿಂದ ‘ಕನಕಾಂಗಿ ಕಲ್ಯಾಣ’ ಯಕ್ಷಗಾನ ಪ್ರದರ್ಶನಗೊಂಡಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article