ವೈದ್ಯಕೀಯ, ಶಿಕ್ಷಣ ಕ್ಷೇತ್ರಗಳು ಸದೃಢವಾದಾಗ ಆರೋಗ್ಯಕರ ಸಮಾಜ ನಿಮಾ೯ಣ: ವಿವೇಕ್ ಆಳ್ವ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರಗಳು ಸದೃಢವಾಗಿದ್ದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಔಷಧ ತಜ್ಞರು ಆರೋಗ್ಯ ವ್ಯವಸ್ಥೆಯ ಪ್ರಮುಖ ಅಂಗವಾಗಿದ್ದು, ರೋಗಿಗಳಿಗೆ ಔಷಧ ನೀಡುವುದರ ಜತೆಗೆ ಅದರ ಸರಿಯಾದ ಬಳಕೆ ಕುರಿತು ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನೂ ಹೊಂದಿದ್ದಾರೆ. ನಕಲಿ ಔಷಧಗಳು ಹಾಗೂ ಡ್ರಗ್ಸ್ಗಳ ದುರ್ಬಳಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ.
ಇಂದಿನ ದಿನಗಳಲ್ಲಿ ಜನರು ಆರೋಗ್ಯ ಸಮಸ್ಯೆಗಳಿಗೆ ಇಂಟರ್‌ನೆಟ್, ಗೂಗಲ್ ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ವೇದಿಕೆಗಳಲ್ಲಿ ಮಾಹಿತಿ ಹುಡುಕಿ ಸ್ವಯಂ ಔಷಧ ಸೇವಿಸುವ ಪ್ರವೃತ್ತಿ ಹೆಚ್ಚುತ್ತಿದೆ. ವೈದ್ಯರ ಸಲಹೆ ಮತ್ತು ಸೂಕ್ತ ಔಷಧದ ಮಾರ್ಗದರ್ಶನವಿಲ್ಲದೆ ಔಷಧ ಸೇವಿಸುವುದು ಅಪಾಯಕಾರಿಯಾಗಬಹುದು. ಇಂತಹ ಸಂದರ್ಭದಲ್ಲಿ ಫಾರ್ಮಸಿಸ್ಟ್ಗಳು ರೋಗಿಗಳಿಗೆ ವೈಜ್ಞಾನಿಕ ಮಾಹಿತಿ ಹಾಗೂ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
ವೃತ್ತಿ ನಿರತ ಔಷಧಿ ತಜ್ಞರ ಸಂಘದ ಅಧ್ಯಕ್ಷ ಚಿತ್ತರಂಜನ್ ಬಿ. ಎಸ್. ಪ್ರಸ್ತಾವಿಕ ಮಾತುಗಳನ್ನಾಡಿ, ಔಷಧ ತಜ್ಞರ ವೃತ್ತಿಯಲ್ಲಿ ವೃತ್ತಿಪರ ಜ್ಞಾನ, ಜವಾಬ್ದಾರಿ ಹಾಗೂ ನೈತಿಕ ಮೌಲ್ಯಗಳನ್ನು ಪಾಲಿಸುವುದು ಅತ್ಯಂತ ಮುಖ್ಯವಾಗಿದೆ. ಔಷಧ ತಜ್ಞರ ವೃತ್ತಿಯ ಮಹತ್ವ ಹಾಗೂ ಆರೋಗ್ಯ ಸೇವೆಯಲ್ಲಿ ಅವರ ಪಾತ್ರದ ಕುರಿತು ಚರ್ಚಿಸುವುದರ ಜತೆಗೆ, ವೃತ್ತಿಪರ ಹೊಣೆಗಾರಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ನಂತರ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಖ್ಯಾತ ಮನೋವೈಧ್ಯ ಡಾ. ಪಿ.ವಿ. ಭಂಡಾರಿ, ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರು ಮತ್ತು ಔಷಧ ತಜ್ಞರ ನಡುವಿನ ಸಮನ್ವಯ ಮತ್ತಷ್ಟು ಬಲಗೊಳ್ಳಬೇಕಿದೆ. ರೋಗಿಗಳು ವೈದ್ಯರ ನಂತರ ಔಷಧ ತಜ್ಞರ ಮೇಲೆ ಹೆಚ್ಚಿನ ನಂಬಿಕೆ ಇಡುತ್ತಾರೆ. ಕೆಲವರು ವೈದ್ಯರ ಪ್ರಿಸ್ಕ್ರಿಪ್ಶನ್‌ಗಿಂತಲೂ ಇಂಟರ್‌ನೆಟ್, ಗೂಗಲ್ ಅಥವಾ ಕೃತಕ ಬುದ್ಧಿಮತ್ತೆ ಆಧಾರಿತ ಸಾಧನಗಳ ಮಾಹಿತಿಯನ್ನು ಅವಲಂಬಿಸಿ ಔಷಧ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಔಷಧ ತಜ್ಞರು ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಅತ್ಯಂತ ಅಗತ್ಯ. ಆ್ಯಂಟಿಬಯಾಟಿಕ್‌ಗಳ ಅನಗತ್ಯ ಬಳಕೆಯಿಂದ ಉಂಟಾಗುವ ಅಪಾಯಗಳ ಕುರಿತು ಜಾಗೃತಿ ಮೂಡಿಸಬೇಕು.
ಮಕ್ಕಳ ತಜ್ಞ ಡಾ. ಮುರುಳಿ ಕೃಷ್ಣ ಮಾತನಾಡಿ, ಬದಲಾಗುತ್ತಿರುವ ಆರೋಗ್ಯ ಪರಿಸ್ಥಿತಿಗೆ ಅನುಗುಣವಾಗಿ ಫಾರ್ಮಸಿಸ್ಟ್ಗಳು ನಿರಂತರವಾಗಿ ತಮ್ಮ ಜ್ಞಾನವನ್ನು ನವೀಕರಿಸಿಕೊಳ್ಳಬೇಕು. ಜೀವನಶೈಲಿ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಔಷಧ ನೀಡುವುದರ ಜತೆಗೆ ಆಹಾರ, ವ್ಯಾಯಾಮ ಹಾಗೂ ಆರೋಗ್ಯಕರ ಜೀವನಶೈಲಿ ಕುರಿತು ರೋಗಿಗಳಿಗೆ ಸಮಾಲೋಚನೆ ನೀಡುವ ಪಾತ್ರವನ್ನೂ ಫಾರ್ಮಸಿಸ್ಟ್ಗಳು ನಿರ್ವಹಿಸಬೇಕು ಎಂದರು.
ಚಿಂತಕ ಅರವಿಂದ ಚೊಕ್ಕಾಡಿ ಮಾತನಾಡಿ, ಔಷಧಗಳ ಬಳಕೆಯನ್ನು ನಿಯಂತ್ರಿಸಲು ಕೇವಲ ವೈದ್ಯರು ಅಥವಾ ಫಾರ್ಮಸಿಸ್ಟ್ಗಳ ಪ್ರಯತ್ನ ಸಾಕಾಗುವುದಿಲ್ಲ; ಸಮಾಜದ ಮನೋಭಾವದಲ್ಲಿಯೂ ಬದಲಾವಣೆ ಅಗತ್ಯವಿದೆ. ವೈದ್ಯರು ಮತ್ತು ಫಾರ್ಮಸಿಸ್ಟ್ಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಫಾರ್ಮಸಿಸ್ಟ್ಗಳಿಗೆ ನಿಯಮಿತ ತರಬೇತಿ ಹಾಗೂ ವೃತ್ತಿಪರ ಮಾರ್ಗದರ್ಶನ ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸಬೇಕು ಎಂದರು.
ಸಮಾಜದಲ್ಲಿ ಹೆಚ್ಚಿನ ವೃತ್ತಿಪರ ಗುರುತು ದೊರೆಯುವುದರ ಜೊತೆಗೆ, ನಿಯಮಿತ ತರಬೇತಿ, ಜ್ಞಾನ ನವೀಕರಣ ಮತ್ತು ವೃತ್ತಿಪರ ಸಬಲೀಕರಣಕ್ಕೂ ಆದ್ಯತೆ ನೀಡಬೇಕು ಎಂದರು.
ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಧ್ಯಪಕಿ ಡಾ ಸೌಮ್ಯ ಸರಸ್ವತಿ ಮಾತನಾಡಿದರು.
ಕಾರ‍್ಯಕ್ರಮದಲ್ಲಿ ಹಿರಿಯ ಔಷಧ ತಜ್ಞ ಮೊಹಮ್ಮದ್ ಜಾವಿದ್ ಹಸನ್ ಸಂಘದ ವತಿಯಿಂದ ಗೌರವಿಸಲಾಯಿತು.
ಆಳ್ವಾಸ್ ಫಾರ್ಮಾಸಿ ಕಾಲೇಜಿನ ಪ್ರಾಚಾರ‍್ಯ ಡಾ. ಮಂಜುನಾಥ ಸೆಟ್ಟಿ ಸಮಾರೋಪ ಕಾರ‍್ಯಕ್ರಮದಲ್ಲಿ ಮಾತನಾಡಿದರು.
ವೃತ್ತಿ ನಿರತ ಔಷಧಿ ತಜ್ಞರ ಸಂಘದ ಅಧ್ಯಕ್ಷ ಚಿತ್ತರಂಜನ್ ಬಿ. ಎಸ್., ಖಜಾಂಚಿ ಸೂರಜ್ ಎಸ್. ಪೈ, ಜಂಟಿ ಕಾರ್ಯದರ್ಶಿ ರಾಮದಾಸ್ ಶೆಣೈ ಇದ್ದರು. ಸಂಘದ ಉಪಾಧ್ಯಕ್ಷ ಪ್ರೊ. ಮಾಧವ ರಾವ್ ಕರ‍್ಯಕ್ರಮ ನಿರ್ವಹಿಸಿದರು. ಸದಸ್ಯ ನವೀನ್ ಟಿ ಆರ್ ಪ್ರಾರ್ಥನೆ ನೆರವೇರಿಸಿದರು. ಸಂಘದ ಕಾರ್ಯದರ್ಶಿ ಶ್ರೀಧರ್ ವಂದಿಸಿದರು.