ಉನ್ನತ ಶಿಕ್ಷಣದ ಬದಲಾವಣೆಗಳಿಗೆ ಖಾಸಗಿ ಕಾಲೇಜುಗಳು ಒಗ್ಗಟ್ಟಾಗಿ ಸ್ಪಂದಿಸಬೇಕು: ಡಾ.ಎಂ. ಮೋಹನ್ ಆಳ್ವ

ಉನ್ನತ ಶಿಕ್ಷಣದ ಬದಲಾವಣೆಗಳಿಗೆ ಖಾಸಗಿ ಕಾಲೇಜುಗಳು ಒಗ್ಗಟ್ಟಾಗಿ ಸ್ಪಂದಿಸಬೇಕು: ಡಾ.ಎಂ. ಮೋಹನ್ ಆಳ್ವ


ಮೂಡುಬಿದಿರೆ: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವೇಗವಾಗಿ ಸಂಭವಿಸುತ್ತಿರುವ ಬದಲಾವಣೆಗಳಿಗೆ ಅನುಗುಣವಾಗಿ ಖಾಸಗಿ ಕಾಲೇಜುಗಳು ಹೊಸ ಆಲೋಚನೆ, ಪ್ರಯೋಗ ಹಾಗೂ ಶಿಕ್ಷಣ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ, ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಡಳಿತ ಮಂಡಳಿಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.

ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬುಧವಾರ ನಡೆದ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ 2026–27ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ, ಕೌಶಲ್ಯಾಧಾರಿತ ಶಿಕ್ಷಣ, ಉದ್ಯೋಗಾವಕಾಶಗಳು ಹಾಗೂ ವಿದ್ಯಾರ್ಥಿಗಳ ನಿರೀಕ್ಷೆಗಳಲ್ಲಿ ನಿರಂತರ ಬದಲಾವಣೆಗಳು ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾಲೇಜುಗಳು ತಮ್ಮ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ವ್ಯವಸ್ಥೆಗಳನ್ನು ಕಾಲಕ್ಕೆ ತಕ್ಕಂತೆ ರೂಪಿಸಿಕೊಳ್ಳುವುದು ಅಗತ್ಯ ಎಂದರು.

ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸುಮಾರು 130 ಖಾಸಗಿ ಕಾಲೇಜುಗಳಿದ್ದು, ಹಲವು ಸಂಸ್ಥೆಗಳು ಶೈಕ್ಷಣಿಕ, ಆಡಳಿತಾತ್ಮಕ ಹಾಗೂ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿವೆ. ಎಲ್ಲಾ ಕಾಲೇಜುಗಳ ಆಡಳಿತ ಮಂಡಳಿಗಳನ್ನು ಒಂದೇ ವೇದಿಕೆಯಡಿ ತಂದು, ಸಾಮಾನ್ಯ ಸಮಸ್ಯೆಗಳನ್ನು ಚರ್ಚಿಸಿ ಒಟ್ಟಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಹೇಳಿದರು.

ಹೊಸ ಆಲೋಚನೆಗಳು, ಪ್ರಯೋಗಗಳು ಮತ್ತು ಶಿಕ್ಷಣ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಂಸ್ಥೆಗಳು ಭವಿಷ್ಯದ ಸವಾಲುಗಳಿಗೆ ಸಿದ್ಧವಾಗಬೇಕು ಎಂದರು.  ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಅವಕಾಶಗಳನ್ನು ಕಲ್ಪಿಸುವಲ್ಲಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ನಡುವೆ ಉತ್ತಮ ಸಮನ್ವಯ ಅಗತ್ಯ. ವಿಶ್ವವಿದ್ಯಾಲಯದಿಂದ ಕಾಲೇಜುಗಳಿಗೆ ದೊರೆಯಬೇಕಾದ ಶೈಕ್ಷಣಿಕ ಸಹಕಾರ, ಪಠ್ಯೇತರ ಹಾಗೂ ಸಹಪಠ್ಯ ಚಟುವಟಿಕೆಗಳಿಗೆ ನೆರವು ಮತ್ತು ವಿವಿಧ ಆಡಳಿತಾತ್ಮಕ ಸಮಸ್ಯೆಗಳ ಕುರಿತು ಸಂಘಟನೆಯ ಮೂಲಕ ಪರಿಣಾಮಕಾರಿ ಚರ್ಚೆ ನಡೆಸಬೇಕು ಎಂದರು.

ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ–ಕಾಲೇಜುಗಳ ನಡುವಿನ ಶೈಕ್ಷಣಿಕ ಸಹಕಾರ, ಆಡಳಿತಾತ್ಮಕ ವಿಚಾರಗಳು ಹಾಗೂ ಖಾಸಗಿ ಕಾಲೇಜುಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಸಲು 2027ರ ಜನವರಿಯಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಆಯೋಜಿಸುವ ಕುರಿತು ಸಭೆಯಲ್ಲಿ  ನಿರ್ಧರಿಸಲಾಯಿತು.

ಹಾಲಿ ಪದಾಧಿಕಾರಿಗಳ ಮುಂದುವರಿಕೆ

ಸಭೆಯಲ್ಲಿ 2026–27ನೇ ಸಾಲಿನ ಸಂಘಟನೆಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಕುರಿತು ಚರ್ಚೆ ನಡೆಯಿತು. ಹಾಲಿ ಪದಾಧಿಕಾರಿಗಳನ್ನೇ ಮುಂದಿನ ಸಾಲಿಗೂ ಮುಂದುವರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಸಂಘದ  ಉಪಾಧ್ಯಕ್ಷ ದಿನೇಶ್ ಕುಮಾರ್ ಆಳ್ವ, ಕರ‍್ಯದರ್ಶಿ ಡಾ. ಶ್ರೀಪತಿ ಕಲ್ಲುರಾಯ, ಖಜಾಂಚಿ ಟಿ.ರಮೇಶ್,   ಸೇರಿದಂತೆ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article