ಮೂಡುಬಿದಿರೆಯಲ್ಲಿ ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಆಚರಣೆ
Thursday, September 17, 2026
ಮೂಡುಬಿದಿರೆ: ವಿಶ್ವದ ಸೃಷ್ಟಿಕತ೯ರಾಗಿರುವ ವಿಶ್ವಕರ್ಮ ದೇವರು ಕೇವಲ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ ಅವರು ಎಲ್ಲಾ ಸಮುದಾಯಕ್ಕೂ ಸೇರಿದವರು ಹಾಗಾಗಿ ವಿಶ್ವಕರ್ಮರ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದು ಮೂಡುಬಿದಿರೆಯ ದ್ವಿತೀಯ ದಜೆ೯ಯ ತಹಸೀಲ್ದಾರ್ ಪುಟ್ಟರಾಜು ಹೇಳಿದರು.
ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಗುರುವಾರ ತಾಲೂಕು ಆಡಳಿತ ಸೌಧದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆನೆಗುಂದಿ ಮಠದ ಮೌನೇಶ ಶರ್ಮ ಬಾಳಿಲ ಧಾರ್ಮಿಕ ಉಪನ್ಯಾಸ ನೀಡಿ ವಿಶ್ವಕರ್ಮ ಒಂದು ಸಮುದಾಯಕ್ಕೆ, ಕಾಲಕ್ಕೆ ಸೀಮಿತವಾದ ದೇವರಲ್ಲ. ನಮ್ಮ ದಿನನಿತ್ಯದ ಕಾರ್ಯಚಟುವಟಿಕೆಗಳಿಗೆ ಬೇಕಾದ ಉಪಕರಣಗಳನ್ನು ನಿರ್ಮಿಸಿಕೊಟ್ಟವರು ವಿಶ್ವಕರ್ಮರು. ಹೀಗಾಗಿ ವಿಶ್ವಕರ್ಮನನ್ನು ನಾವು ನಿತ್ಯ ಆರಾಧಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಬೆಳುವಾಯಿಯ ಹಿರಿಯ ಕಾಷ್ಠಶಿಲ್ಪಿ ಗಂಗಾಧರ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಆಚಾರ್ಯ ಉಳಿಯ ಶುಭ ಹಾರೈಸಿದರು. ವೇದಿಕೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಕ್ಷತಾ, ಉಪಅರಣ್ಯಾಧಿಕಾರಿ ಗುರುಮೂರ್ತಿ ಉಪಸ್ಥಿತರಿದ್ದರು. ಗ್ರಾಮ ಕರಣಿಕ ಅರ್ಜುನ್ ಸಜ್ಜನ್ ಕಾರ್ಯಕ್ರಮ ನಿರ್ವಹಿಸಿದರು.

