ಕಡಂದಲೆ-ಪಾಲಡ್ಕದಲ್ಲಿ ಉಚಿತ ಕ್ಯಾನ್ಸರ್ ಹಾಗೂ ಆರೋಗ್ಯ ತಪಾಸಣಾ ಶಿಬಿರ
ಜಯಶ್ರೀ ಅಮರನಾಥ ಶೆಟ್ಪಿ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕೆ.ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಿ ಡಾ.ಅಮರಶ್ರೀ ಅಮರನಾಥ ಶೆಟ್ಟಿ ಮಾತನಾಡಿ ಕ್ಯಾನ್ಸರ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯವಾಗಿದೆ ಎಂದರು.
ತಮ್ಮ ತಂದೆಯನ್ನು ಸ್ಮರಿಸಿದ ಅವರು, “ನನ್ನ ತಂದೆ-ತಾಯಿ ಇದೇ ಊರಿನವರು. ಆದ್ದರಿಂದ ನಮ್ಮ ಊರಿನ ಜನರಿಗೆ ಮೊದಲ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಲ್ಲವ ಸಂಘದ ಉಪಾಧ್ಯಕ್ಷ ಜಯ ಸಿ. ಅಂಚನ್, ದ.ಕ. ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ಕೆ.ಪಿ. ಸುಚರಿತ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮೂಡಬಿದಿರೆ ತಾಲೂಕು ಯೋಜನಾಧಿಕಾರಿ ಧನಂಜಯ್, ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡಾ. ನಿಖಿಲ್, ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಡಾ. ರಂಜನ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಹರಿಪ್ರಸಾದ್ ಶೆಟ್ಟಿ, ಜನಜಾಗೃತಿ ಸದಸ್ಯ ಟಿ.ಎನ್. ಕೆಂಬಾರೆ, ವಲಯಾಧ್ಯಕ್ಷ ಸುಕೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಶ್ಮಿತಾ ಜನತಾನಗರ ಕಾರ್ಯಕ್ರಮ ನಿರೂಪಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿನುತಾ ಶೆಟ್ಟಿ ವಂದಿಸಿದರು.
ಶಿಬಿರದಲ್ಲಿ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ತಪಾಸಣೆ, ಪುರುಷರಿಗೆ ಬಾಯಿ ಕ್ಯಾನ್ಸರ್ ತಪಾಸಣೆ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು. ಸಾರ್ವಜನಿಕರಿಗೆ ಇಸಿಜಿ, ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣೆಯನ್ನೂ ಮಾಡಲಾಯಿತು.
ಸುಮಾರು 160 ಮಂದಿ ಭಾಗವಹಿಸಿ ಉಚಿತ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದರು.