ಮೈಸೂರು ಕಂಬಳಕ್ಕೆ ಕಂಟಕ ದೂರ: 175 ಜತೆ ಕೋಣಗಳ ವಿಶೇಷ ಆಕರ್ಷಣೆ ‘ಮೈಸೂರು ಕಂಬಳ’
ಪುತ್ತೂರು: ಕಂಬಳ ತುಳುನಾಡಿನ ವೀರಕ್ರೀಡೆ. ಸಾಂಸ್ಕೃತಿಕವಾಗಿ ಆಯೋಜಿಸಿಕೊಂಡು ಬಂದಿರುವ ಹಬ್ಬದಂತಹ ಕೂಟ. ಮೈಸೂರಿನ ದಸರಾ ಹಬ್ಬದಲ್ಲಿ ಕಂಬಳ ನಡೆಸಲು ಮುಖ್ಯಮಂತ್ರಿ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈಗಾಗಲೇ ಕಂಬಳ ಕರೆಯ ಕೆಲಸಗಳು ನಡೆಯುತ್ತಿದೆ. ಈ ಬಾರಿ 175 ಜತೆ ಕೋಣಗಳಿಗೆ ಕಂಬಳಕೂಟದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಮೈಸೂರು ಕಂಬಳದ ರೂವಾರಿ ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದರು.
ಸೋಮವಾರ ಮಾದ್ಯಮಗಳೊಂದಿಗೆ ಅವರು ಮಾತನಾಡಿ, ಮೈಸೂರು ಕಂಬಳ ಆಯೋಜನೆಗೆ ಆರಂಭದಲ್ಲಿ ಒಂದಷ್ಟು ಗೊಂದಲಗಳಿತ್ತು. ಕಂಬಳ ಎಂಬುವುದು ಎಲ್ಲರೂ ಇಷ್ಟಪಡುವ ಕ್ರೀಡೆಯಾಗಿದೆ. ಆದರೆ ಅಲ್ಲಿಯ ಸ್ಥಳೀಯರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಕೊರತೆ ಇತ್ತು. ನೀರು ಪೋಲು ಮಾಡುತ್ತಾರೆ. ಕೆರೆ ನಿರ್ಮಿಸುತ್ತಾರೆ. ಎಮ್ಮೆಗಳನ್ನು ಬಿಟ್ಟು ಹೋಗ್ತಾರೆ ಎಂಬ ಕಲ್ಪನೆಗಳಿದ್ದವು. ಈಗ ಈ ಎಲ್ಲಾ ಗೊಂದಲಗಳ ನಿವಾರಣೆಯಾಗಿದೆ. ಈ ಬಾರಿ ದಸರಾ ಹಬ್ಬದ ಪ್ರಮುಖ ಆಕರ್ಷಣೆ ಕಂಬಳವಾಗಲಿದೆ. ಸುಮಾರು 25 ಲಕ್ಷ ಮಂದಿ ಎರಡುದಿನ ಈ ಕಂಬಳ ವೀಕ್ಷಣೆ ಮಾಡಲಿದ್ದಾರೆ. ಪ್ರಸ್ತುತ 225 ಕೋಣಗಳ ಯಜಮಾನರು ದಸರಾ ಕಂಬಳದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿ ಸಂಪರ್ಕಿಸಿದ್ದಾರೆ. ಆದರೆ ನಾವು 175 ಜತೆ ಕೋಣಗಳಿಗೆ ಮಾತ್ರ ಅವಕಾಶ ಕಲ್ಪಿಸಲಿದ್ದೇವೆ ಎಂದು ಅವರು ತಿಳಿಸಿದರು.