ಬ್ರಹ್ಮ ಬಂದರೂ ಭ್ರಷ್ಟಾಚಾರ ನಿಲ್ಲಿಸಲು ಅಸಾಧ್ಯ-ಸಚಿವರ ಹೆಸರಲ್ಲಿ ಕೆಆರ್‌ಐಡಿಎಲ್ ಶುಲ್ಕಸಂಗ್ರಹ: ಮುಖ್ಯಮಂತ್ರಿಗೆ ಪತ್ರ ಬರೆದ ಅಶೋಕ್ ರೈ
ಪುತ್ತೂರು: ಮಂಗಳೂರಿನ ಕೆಆರ್‌ಐಡಿಎಲ್ ಅಧಿಕಾರಿಗಳು ಶೇ.೭ ಪರ್ಸೆಂಟ್ ಲಂಚಕ್ಕಾಗಿ ಬೇಡಿಕೆ ಇಡುತ್ತಿರುವ ಬಗ್ಗೆ ಮುಖ್ಯಮಂತ್ರಿ ಅವರಿಗೆ ದೂರು ನೀಡಿರುವುದು ನಿಜ. ಈ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದೇನೆ. ಕೆಆರ್‌ಐಡಿಎಲ್ ಅಧಿಕಾರಿಗಳಿಗೆ ಹೇಳಿದ್ದೆ. ಆದರೆ ಅವರು ತಮ್ಮ ಚಾಳಿ ಬಿಟ್ಟಿಲ್ಲ. ಸಚಿವರ ಹೆಸರನ್ನು ಬಳಕೆ ಮಾಡಿಕೊಂಡು ಶುಲ್ಕ ಸಂಗ್ರಹ ಮಾಡುತ್ತಿದ್ದಾರೆ. ಹಾಗಾಗಿ ದೂರು ನೀಡಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಪುತ್ತೂರಿನಲ್ಲಿ ಮಾದ್ಯಮಗಳೊಂದಿಗೆ ಅವರು ಮಾತನಾಡಿ, ಮುಖ್ಯಮಂತ್ರಿಗಳು ಒದಗಿಸಿದ ಅನುದಾನ ಜನರಿಗೆ ಮುಟ್ಟಬೇಕು. ಸುಮಾರು 200-300 ಕೋಟಿ ಅನುದಾನ ಬಂದಿದೆ. ಮಂಗಳೂರು ಕೆಆರ್‌ಐಡಿಎಲ್‌ನಲ್ಲಿ ಎಲ್ಲಾ ಅಧಿಕಾರಿಗಳು ಭ್ರಷ್ಟರಲ್ಲ. ಆದರೆ ಮಂಗಳೂರು ವಿಭಾಗದ ಕಾರ್ಯನಿರ್ವಹಣಾ ಇಂಜಿನಿಯರ್ ವಿಜಯ್ ಮತ್ತು ಕಿರಿಯ ಇಂಜಿನಿಯರ್ ಪ್ರಜ್ವಲ್ ಗುತ್ತಿಗೆದಾರರಲ್ಲಿ ಹೆಚ್ಚು ಪರ್ಸಂಟೇಜ್ ಗೆ ಬೇಡಿಕೆ ಇಡುತ್ತಿದ್ದಾರೆ. ಈ ಅಧಿಕಾರಿಗಳಲ್ಲಿ ನೇರವಾಗಿ ಮಾತನಾಡಿದ್ದೆ. ಒಂದು ವಾರದೊಳಗೆ ಹಣ ಬಿಡುಗಡೆ ಮಾಡುವಂತೆ ಸೂಚಿಸಿದ್ದೆ. ಆದರೆ ಅವರು ಶೇ.7 ಪರ್ಸಂಟೇಜ್ ಗಾಗಿ ಒತ್ತಡ ಹಾಕುವುದನ್ನು ಬಿಟ್ಟಿಲ್ಲ. ಕಾನೂನಾತ್ಮಕವಾಗಿ ಶೇ.2-3ರಷ್ಟು ಪರ್ಸಂಟೇಜ್ ಕೊಡಬೇಕು. ಕೆಆರ್‌ಐಡಿಎಲ್ ಸರ್ಕಾರಿ ಸಂಸ್ಥೆಯಲ್ಲ. ನಾನು ಹೇಳಿದ ನಂತರವೂ ಗುತ್ತಿಗೆದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ. ಶಾಸಕರಿಗೆ ಮಾಹಿತಿ ನೀಡಿದವರನ್ನು ಬಿಡೋದಿಲ್ಲ ಎಂದಿದ್ದಾರೆ. ಇವರ ಈ ಚಾಳಿಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇಂತಹ ವ್ಯವಸ್ಥೆಗಳಿದ್ದಲ್ಲಿ ಗಮನಕ್ಕೆ ತನ್ನಿ ಎಂದು ಮುಖ್ಯಮಂತ್ರಿಗಳೇ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಲಿಖಿತವಾಗಿ ತಿಳಿಸಿದ್ದೇನೆ.
ಉನ್ನತ ಶಿಕ್ಷಣ ಇಲಾಖೆಯಲ್ಲೂ ಇದೇ ರೀತಿ ನಡೆಯುತ್ತಿದೆ. ಇಲಾಖೆಯ ಓರ್ವ ಅಧಿಕಾರಿ ಶಿಕ್ಷಣ ಕೋರ್ಸಿಗೆ ಸಂಬಂಧಿಸಿದ ಫೈಲ್ ಒಂದನ್ನು ಕಳೆದ 22 ದಿನಗಳಿಂದ ತನ್ನ ಬಳಿಯೇ ಇರಿಸಿಕೊಂಡಿದ್ದಾನೆ. ಹಾಗಂತ ಎಲ್ಲಾ ಅಧಿಕಾರಿಗಳು ಭ್ರಷ್ಟರಲ್ಲ. ಸಾಕಷ್ಟು ಮಂದಿ ಪ್ರಾಮಾಣಿಕ ಅಧಿಕಾರಿಗಳಿದ್ದಾರೆ. ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಕೆಲವರು ಮಾತನಾಡುತ್ತಿಲ್ಲ. ಅವರು ಎಜೆಸ್ಟ್‌ಮೆಂಟ್ ಮಾಡಿಕೊಂಡಿದ್ದರು. ಆದರೆ ನಾನು ಮಾತನಾಡುತ್ತೇನೆ ಎಂದರು.
ಬ್ರಹ್ಮ ಬಂದರೂ ಭ್ರಷ್ಟಾಚಾರ ನಿಯಂತ್ರಣ ಅಸಾಧ್ಯ:
ಅಧಿಕಾರಿ ವರ್ಗ-ಕಾರ್ಯಾಂಗದಲ್ಲಿ ಭ್ರಷ್ಟಾಚಾರ ನಿಲ್ಲಿಸಲು ಬ್ರಹ್ಮ ಬಂದರೂ ಸಾಧ್ಯವಿಲ್ಲ ಅನ್ನುವ ಸ್ಥಿತಿ ಉಂಟಾಗಿದೆ. ಈ ಶೇ.3 ಪರ್ಸಂಟೇಜ್‌ನ್ನು ನಿಲ್ಲಿಸಲು ಸಾಧ್ಯವೇ ಇಲ್ಲ. ಆದರೆ ಅದನ್ನು ಆದಷ್ಟು ತಗ್ಗಿಸಲು ಪ್ರಯತ್ನಿಸಬೇಕು. ಅಕ್ರಮ-ಸಕ್ರಮ ಕಡತಗಳಲ್ಲಿಯೂ ವಿಎಗಳು ಲಂಚ ಪಡೆಯುತ್ತಿದ್ದಾರೆ. ಇರುವಂತಹ ಸತ್ಯ ಹೇಳೋದಕ್ಕೆ ನನಗೆ ಯಾವುದೇ ಸಂಕೋಚ ಇಲ್ಲ ಎಂದು ಶಾಸಕರು ಹೇಳಿದರು.