ಕೆನರಾ ಬ್ಯಾಂಕ್ ಖಾತೆಯಲ್ಲಿಟ್ಟ ಹಣ ಹೋಲ್ಡ್..: ಯಾರದೋ ತಪ್ಪಿಗೆ ಇನ್ಯಾರಿಗೋ ಸಂಕಷ್ಟ..
ಪುತ್ತೂರು: ಬ್ಯಾಂಕಿನ ಖಾತೆಯಲ್ಲಿಟ್ಟ ವ್ಯಕ್ತಿಯೊಬ್ಬರ ಇದ್ದಕ್ಕಿದ್ದಂತೆ ಮಂಗಮಾಯವಾದ ಘಟನೆ ಪುತ್ತೂರಿನ ಗ್ರಾಮೀಣ ಭಾಗದ ಬ್ಯಾಂಕೊಂದರಲ್ಲಿ ನಡೆದಿದ್ದು, ಇದರಿಂದ ಬ್ಯಾಂಕ್ ಗ್ರಾಹಕರು ಆತಂಕಕ್ಕೆ ಈಡಾಗಿದ್ದಾರೆ.
ತಿಂಗಳಾಡಿಯ ಕೆನರಾ ಬ್ಯಾಂಕಿನಲ್ಲಿ ಹನೀಫ್ ರೆಂಜಲಾಡಿ ಅವರ ಖಾತೆ ಇದ್ದು, ಇದರಿಂದ ರೂ.24,785 ಮಾಯವಾಗಿದೆ. ಮೊಬೈಲ್ ಗೆ ಮಾಹಿತಿ ಬಂದ ತಕ್ಷಣವೇ ಅವರು ಬ್ಯಾಂಕ್ ಖಾತೆ ಪರಿಶೀಲನೆ ಮಾಡಿದ್ದಾರೆ. ಖಾತೆಯಲ್ಲಿ ಹಣ ಕಡಿತಗೊಂಡಿದೆ. ಈ ಬಗ್ಗೆ ಬ್ಯಾಂಕಿನ ಮೇಲಾಧಿಕಾರಿಗಳಿಗೆ ಹಾಗೂ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಹಣ ಪತ್ತೆಯಾಗಿಲ್ಲ.
ಮೊಬೈಲ್ ನಲ್ಲಿ ಬಂದ ಅಪರಿಚಿತ ಲಿಂಕ್ ಓಪನ್ ಮಾಡಿ ಹಣ ಕಳೆದುಕೊಳ್ಳುವುದು, ಒಟಿಪಿ ನಂಬರ್ ಕೊಟ್ಟು ಮೋಸ ಹೋದ ಹಲವು ಘಟನೆಗಳಲ್ಲಿ ಹಣ ಕಳೆದುಕೊಂಡವರಿದ್ದಾರೆ. ಆದರೆ ಇಂತಹ ಯಾವುದೇ ವಿಚಾರ ನಡೆಯದೆ ಖಾತೆಯಲ್ಲಿಟ್ಟ ಹಣ ಯಾಕೆ ಕಡಿತ ಗೊಂಡಿದೆ ಎಂಬುವುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಇದು ಖಾತೆದಾರರಿಗೆ ಬ್ಯಾಂಕಿನ ಬಗ್ಗೆಯೇ ಅನುಮಾನಕ್ಕೆ ಎಡೆ ಮಾಡಿದೆ. ಈ ರೀತಿಯಲ್ಲಿ ಹಣ ಹೋಲ್ಡ್ ಮಾಡಿ ಇಡುವುದು ಗ್ರಾಹಕರ ಹಕ್ಕಿನ ಮೇಲೆ ಸವಾರಿ ಮಾಡಿದಂತೆ ಎಂಬ ಆರೋಪವೂ ವ್ಯಕ್ತವಾಗಿದೆ.
ಮೊಹಮ್ಮದ್ ಹನೀಫ್ ಎಂಬವರ ತಿಂಗಳಾಡಿ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ ರೂ.24,758.82 ರೂ ಹೋಲ್ಡ್ ಆಗಿರುವುದು ನಿಜ. ಈ ಬಗ್ಗೆ ಅವರು ಬ್ಯಾಂಕ್‌ಗೆ ಬಂದು ದೂರು ನೀಡಿದ್ದು ಅದರಂತೆ ನಾವು ಆ.೩ರಂದು ಸಂಬಂಧಪಟ್ಟ ಚಂಡೀಗಢದ ಸೈಬರ್ ಕ್ರೈಂ ಇಲಾಖೆಗೆ ಜಿಆರ್‌ಎಂ ಪೋರ್ಟಲ್ ಮೂಲಕ ದೂರು ನೀಡಿದ್ದೇವೆ. ನಾವು ಕಳುಹಿಸಿದ ದೂರನ್ನು ಅಲ್ಲಿ ಸ್ವೀಕರಿಸಿದ್ದಾರೆ, ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬ್ಯಾಂಕ್ ತಿಂಗಳಾಡಿ ಶಾಖೆಯ ಮೆನೇಜರ್ ತಿಳಿಸಿದ್ದಾರೆ.
ಗ್ರಾಹಕರ ನಂಬಿಕೆಗೆ ಅರ್ಹವಾಗಿದ್ದ ಬ್ಯಾಂಕ್ ಗಳಲ್ಲಿ ಈ ರೀತಿ ಹಣ ಕಡಿತ ಮಾಡುವುದಾದರೆ ಹಣ ಇಡುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಬ್ಯಾಂಕ್ ಖಾತೆಯ ಹಣ ಸುರಕ್ಷಿತ ಎನ್ನುವುದನ್ನು ಬಿಟ್ಟು ಅಸುರಕ್ಷಿತ ಎಂಬುವುದು ಈ ಘಟನೆಯಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಯಾರೋ ಮೋಸ ಮಾಡಿದರೆ ಅದಕ್ಕೆ ಇನ್ಯಾರೋ ಕಷ್ಟ ಅನುಭವಿಸುವ ವ್ಯವಸ್ಥೆ ಇದಾಗಿದೆ. ಈ ಬಗ್ಗೆ ಬ್ಯಾಂಕ್ ಜವಾಬ್ದಾರಿ ವಹಿಸಬೇಕು ಎಂಬ ಪರಿಜ್ಞಾನವೂ ಬ್ಯಾಂಕಿನ ಸಿಬಂದಿಗಳಲ್ಲಿ ಇಲ್ಲದೇ ಇರುವುದು ಜನರ ಆಕ್ರೋಶಕ್ಕೂ ಕಾರಣವಾಗಿದೆ.
ಬ್ಯಾಂಕ್‌ಗೆ ಜವಾಬ್ದಾರಿ ಇಲ್ಲವೇ..:
ನಾನು ಕೆನರಾ ಬ್ಯಾಂಕ್ ತಿಂಗಳಾಡಿ ಶಾಖೆಯಲ್ಲಿ ಖಾತೆ ಹೊಂದಿದ್ದು ನನ್ನ ಖಾತೆಯಲ್ಲಿದ್ದ ರೂ.24,758.82 ಮೊತ್ತ ಆ.2ರಂದು ಕಡಿತಗೊಂಡಿದೆ. ನನ್ನ ಮೊಬೈಲ್‌ಗೆ ‘ಕೆಪ್ಟ್ ಆನ್ ಹೋಲ್ಡ್’ ಎಂಬ ಮೆಸೇಜ್ ಬಂದಿದೆ.
ದೂರು ನೀಡಿದಾಗ ನಿಮ್ಮ ಹಣವನ್ನು ಚಂಡೀಗಢ ಸೈಬರ್ ಕ್ರೈಂ ಪೊಲೀಸರು ಹೋಲ್ಡ್ ಮಾಡಿದ್ದಾರೆ ಎಂದು ಶಾಖೆಯ ಮೆನೇಜರ್ ಮಾಹಿತಿ ನೀಡಿದ್ದಾರೆ. ಇದಕ್ಕೆ ಏನು ಅರ್ಥ. ಹಣ ಹೋಲ್ಡ್ ಮಾಡಿದಾಗ ಬ್ಯಾಂಕ್ ನವರು ಜವಾಬ್ದಾರಿ ತೆಗೆದುಕೊಳ್ಳದೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಇದು ಯಾವ ನ್ಯಾಯ. ಬ್ಯಾಂಕಿನಲ್ಲಟ್ಟ ಹಣಕ್ಕೆ ಗ್ಯಾರಂಟಿ ಇಲ್ಲವಾದರೆ ಈ ಬ್ಯಾಂಕ್‌ಗಳನ್ನು ನಂಬುವುದು ಹೇಗೆ. ಈ ಬಗ್ಗೆ ಕಾನೂನು ಹೋರಾಟಕ್ಕೆ ಮುಂದಾಗಿದ್ದೇನೆ- ಕೆ.ಎಂ.ಹನೀಫ್ ರೆಂಜಲಾಡಿ.