ಅಧಿಕಾರಿಗಳು ‘ಹೃದಯ’ದಿಂದ ಕೆಲಸ ಮಾಡಿ, ಜಿಲ್ಲೆಯ ಶಾಂತಿ ನಮ್ಮ ಕೈಯಲ್ಲಿ ಕೊಡಿ.. ಅಭಿವೃದ್ಧಿ ನಿಮ್ಮ ಕಾಲಡಿ ಇಡುತ್ತೇವೆ: ಉಸ್ತುವಾರಿ ಸಚಿವ ಯು.ಟಿ ಖಾದರ್ ಭರವಸೆ

ಅಧಿಕಾರಿಗಳು ‘ಹೃದಯ’ದಿಂದ ಕೆಲಸ ಮಾಡಿ, ಜಿಲ್ಲೆಯ ಶಾಂತಿ ನಮ್ಮ ಕೈಯಲ್ಲಿ ಕೊಡಿ.. ಅಭಿವೃದ್ಧಿ ನಿಮ್ಮ ಕಾಲಡಿ ಇಡುತ್ತೇವೆ: ಉಸ್ತುವಾರಿ ಸಚಿವ ಯು.ಟಿ ಖಾದರ್ ಭರವಸೆ

ಜಿಲ್ಲಾ ಮಟ್ಟದ ಪ್ರಜಾಸೇವೆ ಆಂದೋಲನ ಪುತ್ತೂರಿನಲ್ಲಿ ಚಾಲನೆ


ಪುತ್ತೂರು: ದೇಶದಲ್ಲಿಯೇ ಮೊದಲ ಬಾರಿಗೆ ಪಾರದರ್ಶಕತೆ ಮತ್ತು ಬದ್ಧತೆಯಿಂದ ಕೆಲಸ ಮಾಡುವ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ ಡಿಕೆಶಿ ಅವರ ಕನಸಿನ ಯೋಜನೆ ಪ್ರಜಾಸೇವೆ ಆಂದೋಲನ ಜನಪರವಾದ ಚಿಂತನೆ. ಹಿಂದೆ ಜನಸಂಪರ್ಕದಂತಹ ಕಾರ್ಯಕ್ರಮಗಳಿದ್ದವು. ಆದರೆ ಅದಕ್ಕೆ ಯಾವುದೇ ಗಡು-ನಿಮಯಗಳಿರಲಿಲ್ಲ. ಆದರೆ ಪ್ರಜಾಸೇವೆಯಲ್ಲಿ ಅರ್ಜಿ ಸಲ್ಲಿಸಿದ ಬಳಿಕ 21 ದಿನಗಳ ಗಡು ನೀಡಲಾಗಿದೆ. ಕಾನೂನಾತ್ಮಕ ಸಮಸ್ಯೆಗಳಿಗೆ ಈ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಅಧಿಕಾರಿಗಳು ‘ಹೃದಯ’ದಿಂದ ಮಾಡಬೇಕು. ಜಿಲ್ಲೆಯಲ್ಲಿ ಕಪ್ಪುಚುಕ್ಕೆಯಾಗದಂತೆ  ಶಾಂತಿಯನ್ನು ನಮ್ಮ ಕೈಯಲ್ಲಿ ಕೊಡಿ. ಅಭಿವೃದ್ಧಿ ನಿಮ್ಮ ಕಾಲಡಿ ಇಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.

ಶನಿವಾರ ಪುತ್ತೂರು ಪುರಭವನದಲ್ಲಿ ನಡೆದ ಜಿಲ್ಲಾಮಟ್ಟದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಧಿಕಾರಿ ವರ್ಗ ಸರಿಯಾಗಿ ಕರ್ತವ್ಯ ನಿರ್ವಹಿಸಿದ್ದಾಗ ದೂರು ನೀಡಲು ಪ್ರತ್ಯೇಕ ಸೆಲ್ ತೆರೆಯಲಾಗುವುದು. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲಾಗುವುದು. ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆಗಳು ಇತ್ಯರ್ಥಗೊಳಿಸುವ ಯೋಜನೆ ಇದಾಗಿದೆ. ನೂರಕ್ಕೆ ನೂರು ಸಮಸ್ಯೆಗಳನ್ನು ಪರಿಹಾರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಜನರ ತಾಳ್ಮೆಯ ಸಹಕಾರವೂ ಅತೀ ಅಗತ್ಯವಾಗಿದೆ. ಜನತೆಯ ನಂಬಿಕೆಗೆ ಅನುಗುಣವಾಗಿ ವಿಶ್ವಾಸಭರಿತ ಕೆಲಸ ಮಾಡುವುದು ಸರ್ಕಾರದ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿಯೂ ಈ ಪ್ರಜಾಸೇವೆ ಆಂದೋಲನ ನಡೆಯಲಿದೆ ಎಂದು ಅವರು ಹೇಳಿದರು.

ಧಾರ್ಮಿಕತೆ ದೌರ್ಬಲ್ಯವಾಗಬಾರದು..

ಜಿಲ್ಲೆಯಲ್ಲಿ ರಾಜಕೀಯ ಬದಿಗಿಡಿ. ಧಾರ್ಮಿಕತೆ ಯಾವತ್ತೂ ನಮ್ಮ ದೌರ್ಬಲ್ಯವಾಗಬಾರದು. ಎಲ್ಲಾ ಧರ್ಮದ ಜನತೆಯ ಮಕ್ಕಳೂ ಕೈಹಿಡಿದುಕೊಂಡು ನಲಿದಾಡುವ ಸ್ಥಿತಿಗೆ ವ್ಯವಸ್ಥೆ ಬರಬೇಕಾಗಿದೆ. ಈ ಭೂಮಿ ಕೇವಲ ನಮಗೆ ಮಾತ್ರವಲ್ಲ. ನಮ್ಮ ಮುಂದಿನ ಭವಿಷ್ಯದ ಜನಾಂಗಕ್ಕೂ ಬೇಕು. ಅದಕ್ಕೆ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದು ಸಾಮೂಹಿಕವಾದ ಜವಾಬ್ದಾರಿಯಾಗಿದೆ. ಇದು ನಾವು ಸಮಾಜಕ್ಕೆ ಕೊಡುವ ಕೊಡುಗೆಯಾಗಿದೆ. ಚಿಕ್ಕಪುಟ್ಟ ಘಟನೆಗಳನ್ನು ಮೇಲೈಸುವ ಸಣ್ಣತನದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಜನತೆಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ರೈ ಅವರು ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಗೆ ಪೂರಕವಾಗಿ ಪ್ರಜಾಸೇವೆ ಆಂದೋಲನ ಆರಂಭಿಸಲಾಗಿದೆ. ಆದರೆ ಕಾರ್ಯಾಂಗದ ಕೆಲಸ ನಿರ್ವಹಣೆ ಅತ್ಯಂತ ಸಮರ್ಪಕವಾಗಿ ಆದಾಗ ಕಾರ್ಯಕ್ರಮವೂ ಅತ್ಯಂತ ಯಶಸ್ವಿಯಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಾಂಗದ ಅಧಿಕಾರಿ ವರ್ಗ ಬಡ ಜನತೆ ಸಮಸ್ಯೆಗಳಿಗೆ- ನೋವುಗಳಿಗೆ ಸ್ಪಂಧಿಸುವ ಕೆಲಸ ಮಾಡಬೇಕು. ರೈತರಿಗೆ ಆಗುತ್ತಿರುವ ಸಮಸ್ಯೆಗಳು, ತಳಮಟ್ಟದಲ್ಲಿನ ಜನತೆಯ ಕಷ್ಟಗಳ ನಿವಾರಣೆಗಳಿಗೆ ಅಧಿಕಾರಿಗಳು ಮುಂದಾಗಬೇಕು ಎಂದರು. 

ವೇದಿಕೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ , ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಅರುಣ್, ಪ್ರೊಬೆಷನರಿ ಐಎಎಸ್ ಹರ್ಷಿತ್ ಡೋಂಗ್ರೆ, ಮೆಸ್ಕಾಂ ಎಂ.ಡಿ ಹರೀಶ್ ಕುಮಾರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ನರ್ವಡೆ, ಡಿಎಫ್‌ಒ ರವಿಶಂಕರ್, ಪುತ್ತೂರು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಉಪಸ್ಥಿತರಿದ್ದರು. ತಹಶೀಲ್ದಾರ್ ಎಸ್.ಬಿ.ಕೂಡಲಗಿ ಸ್ವಾಗತಿಸಿದರು. 

ಅಹವಾಲು ಸ್ವೀಕಾರ:

ಪ್ರಜಾಸೇವೆಯಲ್ಲಿ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿ 100ಕ್ಕೂ ಹೆಚ್ಚು ಅರ್ಜಿಗಳಿದ್ದವು. ವಿಶೇಷವಾಗಿ ಕೋವಿ ಪರವಾನಿಗೆ, ಕಂದಾಯ ಇಲಾಖೆಗೆ ಸಂಬಂಧಿಸಿದ ಅಕ್ರಮಸಕ್ರಮ, ಫ್ಲ್ಯಾಟಿಂಗ್, ಆರ್‌ಟಿಸಿ, ಶಾಲಾ ಶಿಕ್ಷಕರ ಕೊರತೆ ಮತ್ತು ಅನುದಾನದ ಬೇಡಿಕೆಗಳನ್ನು ಜನತೆ ಮುಂದಿಟ್ಟರು. ಈ ವಿಚಾರಗಳಿಗೆ ಸಂಬಂಧಿಸಿ ಪರಿಹಾರ ಪ್ರಯತ್ನ ಭರವಸೆ ನೀಡಲಾಯಿತು. ಸುಮಾರು 30 ವರ್ಷದಿಂದಲೂ ಹೆಚ್ಚು ವರ್ಷದಿಂದ ಪೋಡಿಯಾಗದೆ ಬಾಕಿಉಳಿದಿದ್ದ 4057 ಬಾಕಿ ಅರ್ಜಿಗಳ ಪೈಕಿ 1651 ಮಂದಿಗೆ ಪಹಣಿಪತ್ರಗಳ ವಿತರಣೆ ಮಾಡಲಾಯಿತು. ಅಗ್ನಿಶಾಮಕದಳದಿಂದ ಗ್ರಾಮೀಣ ಭಾಗದ 300 ಮಂದಿಗೆ ತರಬೇತಿ ನೀಡಲಾಗಿತ್ತು. ಅದರಲ್ಲಿ 25 ಮಂದಿಗೆ ಸುರಕ್ಷಾ ಕಿಟ್ ವಿತರಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article