ಸಾತ್ವಿಕ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಕೊಡುಗೆ ಅಪಾರ: ಶಾಸಕ ಅಶೋಕ್ ರೈ

ಸಾತ್ವಿಕ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಕೊಡುಗೆ ಅಪಾರ: ಶಾಸಕ ಅಶೋಕ್ ರೈ


ಪುತ್ತೂರು: ಸಮಾಜದಲ್ಲಿ ಸಾತ್ವಿಕತೆ-ಸಂಸ್ಕಾರಯುತ ವ್ಯಕ್ತಿಯನ್ನು ರೂಪಿಸುವ ಮಹತ್ವದ ಜವಾಬ್ದಾರಿಯಲ್ಲಿ ಶಿಕ್ಷಕರದ್ದು ಮಹತ್ವದ ಕೊಡುಗೆಯಾಗಿದೆ. ಈ ದೇಶದಲ್ಲಿ ಎಸಿ ರೂಮಿನಲ್ಲಿ ಕುಳಿತು ಆದೇಶ ಮಾಡುವ ಅಧಿಕಾರಿಗಳಿಂದಾಗಲೀ, ಕೇವಲ ಭಾಷಣ ಮಾಡುವ ಜನಪ್ರತಿನಿಧಿಗಳಿಂದಾಗಲೀ ದೇಶದ ಉದ್ಧಾರ ಸಾಧ್ಯವಿಲ್ಲ. ಬದುಕಿಗೆ ಮಾರ್ಗದರ್ಶನ ಮಾಡುವ ನಾಗರಿಕ ಸಮಾಜವನ್ನು ನಿರ್ಮಾಣ ಮಾಡುವ ಶಿಕ್ಷಕರಿಂದ ದೇಶ ಉದ್ಧಾರ ಸಾಧ್ಯ ಎಂದು ಶಾಸಕ ಅಶೋಕ್ ರೈ ಕೋಡಿಂಬಾಡಿ ಹೇಳಿದರು.

ಶನಿವಾರ ಪುತ್ತೂರು ಕೊಂಬೆಟ್ಟು ಬಂಟರಭವನದಲ್ಲಿ ನಡೆದ ತಾಲೂಕು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣನೀಡುವ ಈ ನಿಟ್ಟಿನಲ್ಲಿ ಸರ್ಕಾರ ರೂ.3,600 ಕೋಟಿ ವೆಚ್ಚದಲ್ಲಿ ಕೆಪಿಎಸ್ ಸ್ಕೂಲ್ ಗಳನ್ನು ರಾಜ್ಯದಾದ್ಯಂತ ನಿರ್ಮಾಣ ಮಾಡುತ್ತಿದೆ. ಪುತ್ತೂರಿನಲ್ಲಿಯೂ ೧೯ ಶಾಲೆಗಳನ್ನು ಗುರುತಿಸಲಾಗಿದೆ. ಬಸ್ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ವಿಷಯವಾರು ಶಿಕ್ಷಕ ನೇಮಕಾತಿ ಆಗಲಿದೆ. ಕೆಪಿಎಸ್ ಸ್ಕೂಲ್ ಅಕ್ಕಪಕ್ಕ ಇರುವ ಕಡಿಮೆ ಮಕ್ಕಳನ್ನು ಹೊಂದಿರುವ ಸರ್ಕಾರಿ ಶಾಲೆಗಳನ್ನು ಬಂದ್ ಮಾಡುವುದಿಲ್ಲ. ಆದರೆ ಆ ಮಕ್ಕಳನ್ನು ಕೆಪಿಎಸ್ ಸ್ಕೂಲಿನಂತಹ ಗುಣಮಟ್ಟದ ಶಿಕ್ಷಣ ನೀಡುವ ಶಾಲೆಗಳಿಗೆ ಕಳಿಸುವುದು ಪೋಷಕರ ಜವಾಬ್ದಾರಿ ಎಂದು ಅವರು ಹೇಳಿದರು. 

ನಿವೃತ್ತ ಶಿಕ್ಷಕರೂ ಪಾಠ ಮಾಡಿ: 

ವ್ಯಕ್ತಿಯ ಅನುಭವಗಳು ಸಮಾಜಕ್ಕೆ ಕೊಡುಗೆಯಾಗುತ್ತವೆ. ಹಾಗಾಗಿ ನಿವೃತ್ತ ಶಿಕ್ಷಕರು ತಮ್ಮ ಅನುಭವಗಳನ್ನು ಮಕ್ಕಳಿಗೆ ಧಾರೆ ಎರೆಯಬೇಕು. ಕನಿಷ್ಟ ದಿನಕ್ಕೊಂದು ಘಂಟೆ ಮಕ್ಕಳಿಗೆ ಪಾಠ ಮಾಡುವ ಕ್ರಿಯೆಯಲ್ಲಿ ಈ ನಿವೃತ್ತ ಶಿಕ್ಷಕರೂ ಭಾಗಿಯಾದರೆ ಉತ್ತಮ. ಇದು ನಿಜವಾದ ದೇಶಸೇವೆಯಾಗುತ್ತದೆ ಎಂದ ಅವರು ಮನೆಗಿಂತಲೂ ಶಾಲೆಯನ್ನು ಪ್ರೀತಿಸುವ ಶಿಕ್ಷಕರು ಪುತ್ತೂರಿನಲ್ಲಿ ಸಾಕಷ್ಟಿದ್ದಾರೆ. ಮಕ್ಕಳಲ್ಲಿ ಸಂಸ್ಕೃತಿ ಆಚಾರ-ವಿಚಾರಗಳನ್ನು ತುಂಬಿಸಿ ಸಮಾಜಕ್ಕೆ ಆಸ್ತಿಯನ್ನಾಗಿಸುವ ಇಂತಹ ಶಿಕ್ಷಕರಿಂದ ನಿಜವಾದ ನಾಗರಿಕ ಸಮಾಜ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದರು. ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಗುರುಭವನಕ್ಕೆ ಸರ್ಕಾರದಿಂದ ರೂ.5 ಕೋಟಿ ಅನುದಾನ ತರುವ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದರು.

ಪುತ್ತೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಅವರು ಮಾತನಾಡಿ, ಸಮಾಜ ಹಾಗೂ ವೈಯುಕ್ತಿಕ ಬದಲಾವಣೆ ಮಾಡುವ ಶಕ್ತಿ ಶಿಕ್ಷಕರಲ್ಲಿದೆ. ಅಂತಹ ಕ್ಷೇತ್ರದಲ್ಲಿ ಓರ್ವ ಶಿಕ್ಷಕ ತಪ್ಪು ಮಾಡಿದರೂ ಕಳಂಕ ಶಿಕ್ಷಕ ಕುಲಕ್ಕೆ ಉಂಟಾಗುತ್ತದೆ. ಆದ್ದರಿಂದ ಶಿಕ್ಷಕರು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದರು. 

ಕಾರ್ಕಳ ಇನ್ನಾ ಎಂ.ವಿ ಶಾಸ್ತ್ರೀ ಅನುದಾನಿತ ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಜೇಂದ್ರ ಭಟ್ ದಿಕ್ಸೂಚಿ ಭಾಷಣ ಮಾಡಿದರು. ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ಮಾತನಾಡಿದರು. 

ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ಯಾಮಲಾ, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಪುತ್ತೂರು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ., ಕಡಬ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಾಂತರಾಮ ಓಡ್ಲ,  ಪುತ್ತೂರು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಚಕ್ರಪಾಣಿ, ಕಡಬ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್, ನಿವೃತ್ತ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ಪಾಪೆಮಜಲು ಪ್ರೌಢಶಾಲಾ ಮುಖ್ಯ ಶಿಕ್ಷಕ ಮೋನಪ್ಪ ಕೆ., ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾದ ನಾರಾಯಣ ಭಟ್ ರಾಮಕುಂಜ ಹಾಗೂ ಐತ್ತಪ್ಪ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸುರೇಶ್ ಸ್ವಾಗತಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ಸ್ಟಿಫನ್ ವೇಗಸ್ ವಂದಿಸಿದರು. ಸಿಆರ್‌ಪಿ ಗಣೇಶ್ ಹಾಗೂ  ಬಜತ್ತೂರು ವಳಾಲು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article