ಮಹಿಳೆ ಮೇಲಿನ ಹಲ್ಲೆ ತಡೆಯಲು ಹೋದ ಪೊಲೀಸರ ಮೇಲೆ ಹಲ್ಲೆ
ಪುತ್ತೂರು: ಪತ್ನಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯೊಬ್ಬ ತಡೆಯಲು ಹೋದ ಪೊಲೀಸರ ಮೇಲೆಯೂ ಹಲ್ಲೆ ನಡೆಸಿದ ಘಟನೆ ಪುತ್ತೂರಿನ ಪಡ್ನೂರು ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಮುಂಡಾಜೆ ಎಂಬಲ್ಲಿನ ನಿವಾಸಿ ನವೀನ್ ಎಂಬಾತ ತನ್ನ ಪತ್ನಿಯ ಮೇಲೆ ರಾತ್ರಿಹೊತ್ತು ಹಲ್ಲೆ ನಡೆಸಿದ್ದು, ಆಕೆ ಪೊಲೀಸರಿಗೆ ಪೋನ್ ಮೂಲಕ ದೂರು ನೀಡಿದ್ದರು. ಹೊಯ್ಸಳ ವಾಹನದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರಾದ ಹೆಡ್ ಕಾನ್ಸ್‌ಟೇಬಲ್ ಮಧು ಹಾಗೂ ಭೀಮನ ಗೌಡ ಎಮ್ ಬಿರಾದಾರ್ ಎಂಬವರು ಕರೆ ಸ್ವೀಕರಿಸಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದರು.
ಅಲ್ಲಿ ವಿಚಾರಿಸಿದಾಗ ಮಹಿಳೆಯೊಬ್ಬರು ತನಗೆ ತನ್ನ ಗಂಡ ಹಲ್ಲೆ ನಡೆಸಿದ್ದಾಗಿ ತಿಳಿಸಿದ್ದಾರೆ. ಈ ಸಂದರ್ಭ ನವೀನ್‌ನನ್ನು ಪೊಲೀಸರು ವಿಚಾರಿಸಿದಾಗ ಕೋಪಗೊಂಡು ಮತ್ತೆ ಪತ್ನಿಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದ. ಅದನ್ನು ತಡೆಯಲು ಹೋದ ಪೊಲೀಸರು ಮೇಲೆ ನವೀನ್ , ಆತನ ತಾಯಿ ಮತ್ತು ಸಹೋದರ ಅವ್ಯಾಚ್ಛ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ.
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಹಲ್ಲೆಗೊಳಗಾದ ಪೊಲೀಸರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ನಡುವೆ ಆರೋಪಿ ನವೀನ್ ಕೂಡಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ. ಚಿಕಿತ್ಸೆಯಿಂದ ಬಿಡುಗಡೆ ಆದ ಬಳಿಕ ಆರೋಪಿ ಮೇಲೆ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಮೇಲೆ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.