ಎನ್‌ಎಸ್‌ಎಸ್ ಸತ್ಯ ದೃಷ್ಟಿಕೋನದ ಸೇವಾಕಾರ್ಯ: ಡಾ. ಶೇಷಪ್ಪ ಕೆ.
Friday, September 25, 2026
ಪುತ್ತೂರು: ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನಮ್ಮಲ್ಲಿ ಇಚ್ಛಾಶಕ್ತಿ ಇರಬೇಕು. ಗ್ರಾಮೀಣ ಸೊಗಡಿಗೆ ಮಹತ್ವ ನೀಡುವ ಜತೆಗೆ ನಮ್ಮ ಕಾರ್ಯಗಳನ್ನು ಅತ್ಯಂತ ಬದ್ಧತೆಯಿಂದ ನಿರ್ವಹಿಸಬೇಕು. ಎನ್‌ಎಸ್‌ಎಸ್ ನಿರಂತರವಾಗಿ ಸತ್ಯದ ದೃಷ್ಟಿಕೋನದ ಸೇವಾಕಾರ್ಯ. ಎಸ್‌ಎಸ್‌ಎಸ್ ಅಂದರೆ ನಾನಲ್ಲ ನೀನು ಎಂಬ ಮನೋಭಾವನೆ ಇಟ್ಟುಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಯೋಜನಾ ಸಂಯೋಜಕರಾದ ಡಾ. ಶೇಷಪ್ಪ ಕೆ. ಅವರು ಅಭಿಪ್ರಾಯಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾನಿಲಯ ಸಂಯೋಜಿತ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ಪುತ್ತೂರಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಕಾಲೇಜಿನ ಎಸ್‌ಜೆಎಂ ಸಭಾಂಗಣದಲ್ಲಿ ನಡೆದ ಎನ್‌ಎಸ್‌ಎಸ್ ದಿನಾಚರಣೆ ಹಾಗೂ ವಾರ್ಷಿಕ ‘ಫಿಲೋ ಸೇವಾಮೃತ-2026’ ಉದ್ಘಾಟಿಸಿ ಮಾತನಾಡಿದರು.
ಸಂತ ಫಿಲೋಮಿನಾ ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ. ಮಾನವಕುಲದ ಸೇವೆಯೇ ಜೀವನದ ಅತ್ಯುತ್ತಮ ಕಾರ್ಯವಾಗಿದ್ದು, ಪ್ರತಿಯೊಬ್ಬರೂ ಸೇವಾ ಮನೋಭಾವವನ್ನು ಬೆಳೆಸಿಕೊಂಡು ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಎನ್‌ಎಸ್‌ಎಸ್ ಅಧಿಕಾರಿ ಡಾ. ಕೆ. ಚಂದ್ರಶೇಖರ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಎನ್‌ಎಸ್‌ಎಸ್ ಅಧಿಕಾರಿ ಡಾ. ಕೆ. ಚಂದ್ರಶೇಖರ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎನ್‌ಎಸ್‌ಎಸ್ ಘಟಕದ ನಾಯಕ ಬೃಂದಾನ್ ಅವರು ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಅಪರ್ಣಾ ಮತ್ತು ತಂಡದವರು ಪ್ರಾರ್ಥಿಸಿದರು. ಎನ್‌ಎಸ್‌ಎಸ್ ಅಧಿಕಾರಿ ಪುಷ್ಪಾ ಎನ್. ಅವರು ಸ್ವಾಗತಿಸಿದರು. ಎನ್‌ಎಸ್‌ಎಸ್ ನಾಯಕ ಸಾಯಿ ಪ್ರತೀಶ್ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಕಾರ್ಯದರ್ಶಿ ಕಾರ್ತಿಕ್ ಪಿ.ಸಿ., ಎನ್‌ಎಸ್‌ಎಸ್ ಘಟಕದ ನಾಯಕರಾದ ಸ್ಪಂದನ ಹಾಗೂ ಶಿಲ್ಪಾ ಉಪಸ್ಥಿತರಿದ್ದರು.


