ಪೆರ್ನಾಜೆಯಲ್ಲಿ ಮತ್ತೆ ಕಾಡಾನೆಗಳ ಉಪಟಳ
Friday, September 25, 2026
ಪುತ್ತೂರು: ತಾಲೂಕಿನ ಗಡಿಭಾಗವಾದ ಪೆರ್ನಾಜೆಯಲ್ಲಿ ಮತ್ತೆ ಕಾಡಾನೆಗಳ ಉಪಟಳ ಕಂಡುಬಂದಿದೆ. ಈ ಭಾಗದ ರೈತರ ತೋಟಗಳಿಗೆ ನುಗ್ಗಿದ ಕಾಡಾನೆಗಳ ಹಿಂಡು ಬೆಳೆದುನಿಂತ ಅಡಿಕೆ ಹಾಗೂ ಬಾಳೆಗಿಡಗಳನ್ನು ಮುರಿದು ಹಾಕಿದ ಪರಿಣಾಮ ಅಪಾರ ನಷ್ಟ ಉಂಟಾಗಿದೆ. ಹಲವು ತಿಂಗಳಿನಿಂದ ಇಲ್ಲಿ ಕಾಡಾನೆಗಳ ಸಮಸ್ಯೆ ಕಂಡುಬರುತ್ತಿದೆ. ಕೆಲ ವಾರಗಳ ಹಿಂದೆಯಷ್ಟೇ ಈ ಕಾಡಾನೆಗಳ ಹಿಂಡು ಈ ಭಾಗದ ರೈತರ ತೋಟಗಳಿಗೆ ಧಾಳಿ ಮಾಡಿತ್ತು. ಆ ಸಂದರ್ಭದಲ್ಲಿಯೂ ಅಪಾರಪ್ರಮಾಣದ ಕೃಷಿ ನಾಶವಾಗಿತ್ತು. ಇದೀಗ ಮತ್ತೆ ಆನೆಗಳ ಉಪಟಳ ಪ್ರಾರಂಭವಾಗಿದೆ.
ರೈತಾಪಿವರ್ಗ ನೆಟ್ಟು ಬೆಳೆಸಿದ ಕೃಷಿ ಫಲ ಬರುವ ಸಮಯದಲ್ಲಿ ಆನೆಗಳ ದಾಳಿಯಿಂದ ಸಂಪೂರ್ಣ ಕೃಷಿ ನಾಶವಾಗುತ್ತಿದ್ದು, ಇಲ್ಲಿಯ ಜನತೆ ಭೀತಿಯ ನಡುವೆಯೇ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ನಿರಂತರವಾಗಿ ಈ ಕಾಡಾನೆಗಳ ಉಪಟಳದಿಂದ ಪೆರ್ನಾಜೆ ಭಾಗದ ಜನತೆ ತಮ್ಮ ಕೃಷಿ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಗಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವೂ ಜನತೆಯಿಂದ ವ್ಯಕ್ತವಾಗುತ್ತಿದೆ. ಕಾಡಾನೆಗಳ ಹಿಂಡನ್ನು ಮತ್ತೆ ಕಾಡಿನ ಕಡೆಗೆ ಅಟ್ಟುವ ಕಾರ್ಯವೂ ನಡೆಯುತ್ತಿಲ್ಲ. ಅರಣ್ಯ ಇಲಾಖೆಗೆ ಕರೆ ಮಾಡಿದರೂ ಇಲಾಖಾಧಿಕಾರಿಗಳು ಸರಿಯಾಗಿ ಸ್ಪಂಧಿಸುತ್ತಿಲ್ಲ ಎಂದು ಇಲ್ಲಿಯ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೆರ್ನಾಜೆ ಭಾಗದಿಂದ ಈ ಕಾಡಾನೆಗಳ ಹಿಂಡನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಬೇಕು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಕಾಡಾನೆಗಳ ಉಪಟಳದಿಂದ ಹಾನಿಗೊಳಗಾದ ಕೃಷಿಗೆ ನಷ್ಟ ಪರಿಹಾರ ಒದಗಿಸಬೇಕು ಎಂದು ಇಲ್ಲಿನ ರೈತರು ಒತ್ತಾಯಿಸಿದ್ದಾರೆ.