ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಎನ್‌ಡಿಆರ್‌ಎಫ್ ಯೂತ್ ಲೈಫ್ಲೈನ್ ಸ್ಟೂಡೆಂಟ್ ಬಿಎಲ್‌ಎಸ್ ಮಿಷನ್’ ವಿಪತ್ತು ನಿರ್ವಹಣಾ ತರಬೇತಿ
Monday, September 28, 2026
ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ರಜತ ಮಹೋತ್ಸವ ಸ್ಮಾರಕ ಸಭಾಂಗಣದಲ್ಲಿ 3/19 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ, 5 ಕರ್ನಾಟಕ ನೇವಲ್ ಎನ್‌ಸಿಸಿ, ಎನ್‌ಎಸ್‌ಎಸ್, ರೋವರ್ಸ್-ರೇಂಜರ್ಸ್, ಯೂತ್ ರೆಡ್‌ಕ್ರಾಸ್, ವಿದ್ಯಾರ್ಥಿ ಸಂಘ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಎಸ್‌ಡಿಆರ್‌ಎಫ್ ದಕ್ಷಿಣ ಕನ್ನಡ ವತಿಯಿಂದ ‘ಎಸ್‌ಡಿಆರ್‌ಎಫ್ ಯೂತ್ ಲೈಫ್ಲೈನ್-ಸ್ಟೂಡೆಂಟ್ ಬಿಎಲ್‌ಎಸ್ ಮಿಷನ್’ ವಿಪತ್ತು ನಿರ್ವಹಣಾ ತರಬೇತಿ ನಡೆಯಿತು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್ ಮಾತನಾಡಿ, ಪ್ರವಾಹ, ಭೂಕುಸಿತ, ಭೂಕಂಪ, ಕಟ್ಟಡ ಕುಸಿತದಂತಹ ಸಂಕಷ್ಟದ ಸಮಯದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನೂರಾರು ಜೀವಗಳನ್ನು ರಕ್ಷಿಸುವ ಎಸ್‌ಡಿಆರ್‌ಎಫ್ ಕಾರ್ಯ ಶ್ಲಾಘನೀಯ. ಕೇವಲ ರಕ್ಷಣಾ ಕಾರ್ಯಾಚರಣೆಗೆ ಸೀಮಿತವಾಗದೆ, ವಿದ್ಯಾರ್ಥಿ-ಯುವಜನರಲ್ಲಿ ವಿಪತ್ತು ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ನಿಜವಾದ ಹೀರೋಗಳೇ ನಮ್ಮ ಎಸ್‌ಡಿಆರ್‌ಎಫ್ ಯೋಧರು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಉಸ್ತುವಾರಿ ಸಹಾಯಕ ಉಪ ನಿರೀಕ್ಷಕ ಭಂಕರ್ ಅವಿನಾಶ್ ಮಾತನಾಡಿ, ವಿಪತ್ತು ಯಾವಾಗ, ಎಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ವಿದ್ಯಾರ್ಥಿಗಳು ಸಿದ್ಧರಿದ್ದರೆ ಸಾವು-ನೋವನ್ನು ತಪ್ಪಿಸಬಹುದು. ವಿಪತ್ತು ಸನ್ನದ್ಧತೆ, ತುರ್ತು ಪ್ರತಿಕ್ರಿಯೆ ಹಾಗೂ ಜೀವ ಉಳಿಸುವ ಕೌಶಲ್ಯಗಳನ್ನು ಕಲಿತರೆ, ವೈದ್ಯರು ಬರುವ ಮೊದಲಿನ ‘ಗೋಲ್ಡನ್ ಅವರ್’ನಲ್ಲಿ ಒಂದು ಜೀವವನ್ನು ಉಳಿಸಬಹುದು. ಯುವಜನರು ಕೈಜೋಡಿಸಿದರೆ ವಿಪತ್ತು ಮುಕ್ತ ಸಮಾಜ ನಿರ್ಮಾಣ ಸಾಧ್ಯ.ಒಂದು ಸರಿಯಾದ ನಿರ್ಧಾರ ನೂರು ಜನರಿಗೆ ದಾರಿದೀಪವಾಗುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಎನ್‌ಸಿಸಿ ಆರ್ಮಿ ಅಧಿಕಾರಿ ಕ್ಯಾಪ್ಟನ್ ಜಾನ್ಸನ್ ಡೇವಿಡ್ ಸಿಕ್ವೇರಾ, ಎನ್‌ಸಿಸಿ ನೌಕಾ ಅಧಿಕಾರಿ ಸಬ್ ಲೆಫ್ಟಿನೆಂಟ್ ತೇಜಸ್ವಿ ಭಟ್ ಕೆ., ಐಕ್ಯೂಎಸಿ ಸಂಯೋಜಕ ಡಾ. ಎದ್ವಿನ್ ಎಸ್. ಡಿಸೋಜಾ, ಯುವ ರೆಡ್ ಕ್ರಾಸ್ ಸಂಯೋಜಕಿ ಡಾ. ಡಿಂಪಲ್ ಜೆನ್ನಿಫರ್ ಫರ್ನಾಂಡಿಸ್, ರೋವರ್ ಲೀಡರ್ ಖಲಂದರ್ ಶರೀಫ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಸ್ಪರ್ಲ್ ಫಿಯೋನ ಪಿರೇರ ಉಪಸ್ಥಿತರಿದ್ದರು.
ಎಂಎಸ್ಡಬ್ಲ್ಯೂ ಸಂಯೋಜಕಿ ಶ್ರೀಮಣಿ ಸ್ವಾಗತಿಸಿ, ಎನ್‌ಎಸ್‌ಎಸ್ ಯೋಜನಾಧಿಕಾರಿ ಪ್ರೊ. ಕೆ. ಚಂದ್ರಶೇಖರ್ ವಂದಿಸಿದರು. ಫಾತಿಮಾ ನಿಧಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಗೆ ಸಿಪಿಆರ್ ಮಾಡುವ ವಿಧಾನ, ರಕ್ತಸ್ರಾವ ನಿಯಂತ್ರಣ, ಗಂಟಲ್ಲಲಿ ಸಿಲುಕಿದಾಗ ಮಾಡುವ ಹೈಮ್ಲಿಕ್ ವಿಧಾನ, ಸುಟ್ಟ ಗಾಯಕ್ಕೆ ಪ್ರಾಥಮಿಕ ಚಿಕಿತ್ಸೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಯಿತು.


