ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ವಿಭಾಗಗಳ ರ‍್ಯಾಂಕ್ ಪ್ರಕಟ
ಎಂ.ಎಸ್.ಡಬ್ಲ್ಯು. ವಿಭಾಗದಲ್ಲಿ ಸ್ನೇಹಾ ರೋಸ್ ಜೇಕಬ್ (8.85 CGPA), ಎಂ.ಕಾಂ. ವಿಭಾಗದಲ್ಲಿ ಚಸ್ಮಿಕಾ ಟಿ. (9.08 CGPA), ಎಂ.ಎಸ್ಸಿ. ಭೌತಶಾಸ್ತ್ರ ವಿಭಾಗದಲ್ಲಿ ನಿತೀಶ್ (8.98 CGPA), ಎಂ.ಎಸ್ಸಿ. ಗಣಿತಶಾಸ್ತ್ರ ವಿಭಾಗದಲ್ಲಿ ಅನುಪಮಾ ಟಿ. (8.58 CGPA) ಹಾಗೂ ಎಂ.ಸಿ.ಎ. ವಿಭಾಗದಲ್ಲಿ ನಿರೀಕ್ಷಾ ಆರ್. (9.39 CGPA) ಅವರು ತಮ್ಮ ತಮ್ಮ ಕಾರ್ಯಕ್ರಮಗಳಲ್ಲಿ ಅಗ್ರಸ್ಥಾನ ಪಡೆದು ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.
ಕಾಲೇಜಿನ ಪ್ರಥಮ ಪದವೀಧರರ ಸಮಾರಂಭವು ಸೆಪ್ಟೆಂಬರ್ 11ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ರ‍್ಯಾಂಕ್ ಪ್ರಮಾಣಪತ್ರ ಪ್ರದಾನ ಮಾಡಲಾಗುವುದು. ಕಾಲೇಜಿನ ಶೈಕ್ಷಣಿಕ ಪಯಣದಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ ಗೌರವಿಸುವ ವಿಶೇಷ ಸಂದರ್ಭವಾಗಿದೆ.
ಸಂತ ಫಿಲೋಮಿನಾ ಕಾಲೇಜಿಗೆ ದೊರೆತ ಸ್ವಾಯತ್ತ ಸ್ಥಾನಮಾನವು ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಹಾಗೂ ಜವಾಬ್ದಾರಿಯನ್ನು ಒದಗಿಸಿದೆ. ಸ್ವಾಯತ್ತ ವ್ಯವಸ್ಥೆಯಡಿ ಕಾಲೇಜು ತನ್ನ ಶೈಕ್ಷಣಿಕ ಅಗತ್ಯತೆಗಳಿಗೆ ಅನುಗುಣವಾಗಿ ಪಠ್ಯಕ್ರಮಗಳನ್ನು ರೂಪಿಸುವುದು, ಬೋಧನಾ ವಿಧಾನಗಳನ್ನು ನವೀಕರಿಸುವುದು, ಮೌಲ್ಯಮಾಪನ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ಉನ್ನತ ಮಟ್ಟದ ಶೈಕ್ಷಣಿಕ ಸಾಮರ್ಥ್ಯವನ್ನು ಬೆಳೆಸುವತ್ತ ಹೆಚ್ಚಿನ ಗಮನ ಹರಿಸುತ್ತಿದೆ.
ವಿದ್ಯಾರ್ಥಿಗಳಲ್ಲಿ ವಿಷಯಜ್ಞಾನ, ವಿಮರ್ಶಾತ್ಮಕ ಚಿಂತನೆ, ಸಂಶೋಧನಾ ಮನೋಭಾವ, ತಾಂತ್ರಿಕ ಹಾಗೂ ಉದ್ಯೋಗಪರ ಕೌಶಲ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಶೈಕ್ಷಣಿಕ ಸಾಧನೆಯ ಜೊತೆಗೆ ಸಮಗ್ರ ವ್ಯಕ್ತಿತ್ವ ವಿಕಸನಕ್ಕೂ ಆದ್ಯತೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿವಿಧ ಸ್ನಾತಕೋತ್ತರ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಶ್ಲಾಘನೀಯ ಸಾಧನೆ ಮಾಡಲಾಗಿರುವುದು ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಹಾಗೂ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.
ಪ್ರಥಮ ಪದವೀಧರರ ಸಮಾರಂಭದಲ್ಲಿ ಸ್ನಾತಕೋತ್ತರ ಕಾರ್ಯಕ್ರಮಗಳ ಪ್ರಥಮ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತಿರುವುದು ಕಾಲೇಜಿನ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.