ಚಾರ್ಲಿ ಚಾಪ್ಲಿನ್ ಕಲಾಕೃತಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್: ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿ ಸಿಂಧೂರಾ ಶೆಟ್ಟಿಗೆ ‘ಐಬಿಆರ್ ಅಚೀವರ್’ ಗೌರವ

ಚಾರ್ಲಿ ಚಾಪ್ಲಿನ್ ಕಲಾಕೃತಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್: ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿ ಸಿಂಧೂರಾ ಶೆಟ್ಟಿಗೆ ‘ಐಬಿಆರ್ ಅಚೀವರ್’ ಗೌರವ


ಪುತ್ತೂರು: ಚಾರ್ಟ್ ಪೇಪರ್ ಮೇಲೆ ಕಪ್ಪು ಮಾರ್ಕರ್ ಪೆನ್ ಬಳಸಿ, ಸ್ಕ್ರಿಬಲ್ ಆರ್ಟ್ (ಅಸ್ತವ್ಯಸ್ತ ವೃತ್ತಾಕಾರದ ಮಾದರಿ) ತಂತ್ರದ ಮೂಲಕ ಖ್ಯಾತ ನಟ ಹಾಗೂ ನಿರ್ದೇಶಕ ಚಾರ್ಲಿ ಚಾಪ್ಲಿನ್ ಅವರ ಕಪ್ಪು-ಬಿಳುಪು ಸ್ಕೆಚ್ ಕಲಾಕೃತಿಯನ್ನು ರಚಿಸಿದ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನ ಪ್ರಥಮ ವರ್ಷದ ಬಿಸಿಎ (ಎಐ ಮತ್ತು ಎಂಎಲ್) ವಿದ್ಯಾರ್ಥಿನಿ ಸಿಂಧೂರಾ ಶೆಟ್ಟಿ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನ ‘ಐಬಿಆರ್ ಅಚೀವರ್’ ಗೌರವಕ್ಕೆ ಪಾತ್ರರಾಗಿದ್ದಾರೆ.

18 ವರ್ಷ ಒಂದು ತಿಂಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವ ಸಿಂಧೂರಾ ಶೆಟ್ಟಿ ಅವರ ದಾಖಲೆಯನ್ನು 2026ರ ಜುಲೈ 9ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅಧಿಕೃತವಾಗಿ ದೃಢೀಕರಿಸಿದೆ.

ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕೆಲಾಜೆ ಸಾಯಿ ಪ್ರಸಾದ ಮನೆ ನಿವಾಸಿ ಕೃಷ್ಣ ಶೆಟ್ಟಿ ಮತ್ತು ಭಾರತಿ ಶೆಟ್ಟಿ ದಂಪತಿಯ ಪುತ್ರಿಯಾದ ಸಿಂಧೂರಾ ಶೆಟ್ಟಿ, ನಡ ಸರ್ಕಾರಿ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಹಾಗೂ ಉಜಿರೆಯ ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಅವರು ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು ಇಲ್ಲಿ ಬಿಸಿಎ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್) ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ.

ಸಿಂಧೂರಾ ಅವರ ಕಲಾ ಪ್ರತಿಭೆಗೆ ಇದು ಮೊದಲ ಗುರುತಿಸಿಕೊಳ್ಳುವಿಕೆಯಲ್ಲ. ಈ ಹಿಂದೆ ಅವರು 46 ಎ4 ಶೀಟ್‌ಗಳನ್ನು ಬಳಸಿ, ಕವಯತ್ರಿ ಸರೋಜಿನಿ ನಾಯ್ಡು ಅವರ ಕವನಗಳನ್ನು ಆಧರಿಸಿದ ಟೈಪೋಗ್ರಾಫಿಕ್ ಆರ್ಟ್ ರಚಿಸಿ ಗಮನ ಸೆಳೆದಿದ್ದರು. ವಿಭಿನ್ನ ಕಲಾ ಮಾಧ್ಯಮ ಹಾಗೂ ತಂತ್ರಗಳನ್ನು ಬಳಸಿಕೊಂಡು ಕಲಾಕೃತಿಗಳನ್ನು ರಚಿಸುವ ಮೂಲಕ ಅವರು ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸುತ್ತಿದ್ದಾರೆ.

ಶಾಲಾ ದಿನಗಳಿಂದಲೇ ಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಸಿಂಧೂರಾ ಶೆಟ್ಟಿ ಅವರು ತಮ್ಮ ಅದ್ಭುತ ಪ್ರತಿಭೆಯ ಮೂಲಕ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಚಾರ್ಲಿ ಚಾಪ್ಲಿನ್ ಅವರ ಸ್ಕೆಚ್ ಕಲಾಕೃತಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮಾನ್ಯತೆ ದೊರೆತಿರುವುದು ಅವರ ಕಲಾ ಪಯಣದ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.

ಶಿಕ್ಷಣದ ಜತೆಗೆ ಕಲಾ ಕ್ಷೇತ್ರದಲ್ಲಿಯೂ ತಮ್ಮ ಪ್ರತಿಭೆಯನ್ನು ಮುಂದುವರಿಸುತ್ತಿರುವ ಸಿಂಧೂರಾ ಶೆಟ್ಟಿ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವ ಕನಸು ಹೊಂದಿದ್ದು, ತಮ್ಮ ಸೃಜನಶೀಲತೆಯ ಮೂಲಕ ಮತ್ತಷ್ಟು ಗಮನಾರ್ಹ ಸಾಧನೆಗಳನ್ನು ದಾಖಲಿಸುವ ಆಶಯ ವ್ಯಕ್ತಪಡಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article