ಮೊಗವೀರ ಪಟ್ಣ-ಕೋಟೆಪುರ ರಸ್ತೆ ದುರಸ್ತಿಗೆ ಆಗ್ರಹಿಸಿ ಸೆ.19 ರಂದು ಪ್ರತಿಭಟನೆ
ಅವರು ತೊಕ್ಕೊಟ್ಟುವಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೊಗವೀರ ಪಟ್ಣ ದಿಂದ ಕೋಟೆಪುರಕ್ಕೆ ಹೋಗುವ ರಸ್ತೆಯಲ್ಲಿ ಹೊಂಡ ಗುಂಡಿಗಳು ತುಂಬಿವೆ. ಹದಗೆಟ್ಟ ಈ ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿವೆ. ವಿದ್ಯಾರ್ಥಿಗಳು, ಮಹಿಳೆಯರು, ಮೀನುಗಾರರು ಈ ರಸ್ತೆಯಲ್ಲಿ ಸಂಚರಿಸಲು ಪರದಾಡುವಂತಾಗಿದೆ. ರಸ್ತೆ ದುರಸ್ತಿ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಉಳ್ಳಾಲ ನಗರಸಭೆ ಹಾಗೂ ಸಂಬಂಧಪಟ್ಟ ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲವೆಂದರು.
ಪ್ರತಿನಿತ್ಯ ಈ ರಸ್ತೆಯಲ್ಲಿ ಫಿಶ್‌ಮಿಲ್‌ಗಳಿಗೆ ಸಂಬಂಧಿಸಿದ ನೂರಾರು ಭಾರೀ ಘನ ವಾಹನಗಳು ಸಂಚರಿಸುತ್ತಿವೆ. ಫಿಶ್‌ಮಿಲ್‌ಗಳಿಂದ ಬರುತ್ತಿರುವ ದುರ್ವಾಸನೆ ಹಾಗೂ ರಸ್ತೆಗೆ ಹರಿದುಬರುವ ಕೊಳಚೆ ನೀರಿನಿಂದ ಪರಿಸರದಲ್ಲಿ ಸಮಸ್ಯೆ ಉಂಟಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ನಾಗರಿಕರು ಒಗ್ಗೂಡಿ ಶಾಂತಿಯುತ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ವೀಣಾ, ನಿಶಾ ಎಸ್. ಕೋಟ್ಯಾನ್, ಇರ್ಫಾನ್, ಮಂಗಳೂರು ರಿಯಾಝ್ ಉಪಸ್ಥಿತರಿದ್ದರು.