ದಶಲಕ್ಷಣ ಪರ್ವ ಭೋಗದ ಪರ್ವ ಅಲ್ಲ, ತ್ಯಾಗದ ಪರ್ವ
Friday, September 18, 2026
ಉಜಿರೆ: ಪ್ರತಿ ವರ್ಷ ಭಾದ್ರಪದ ಪಂಚಮಿಯಿಂದ ಹುಣ್ಣಿಮೆಯ ವರೆಗೆ ಈ ವರ್ಷ ಸೆ. 16 ರಿಂದ 25 ರ ವರೆಗೆ ಶ್ರದ್ಧಾ-ಭಕ್ತಿಯಿಂದ ಜೈನರು ಆಚರಿಸುವ ದಶಲಕ್ಷಣ ಪರ್ವ ಜಪ, ತಪ, ಧ್ಯಾನ, ಉಪವಾಸ, ಸ್ವಾಧ್ಯಾಯ ಮೊದಲಾದ ವೃತ-ನಿಯಮಗಳೊಂದಿಗೆ ಆಚರಿಸುವುದು ಭೋಗದ ಪರ್ವ ಅಲ್ಲ, ತ್ಯಾಗದ ಪರ್ವ ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಹೇಳಿದರು.
ಅವರು ಬುಧವಾರ ವೇಣೂರಿನಲ್ಲಿ ಯಾತ್ರಿನಿವಾಸದಲ್ಲಿ ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿ ಆಶ್ರಯದಲ್ಲಿ ಆಯೋಜಿಸಿದ ದಶಲಕ್ಷಣ ಪರ್ವ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಉತ್ತಮ ಕ್ಷಮಾಧರ್ಮದ ಬಗ್ಯೆ ಮಾತನಾಡಿದ ಮೂಡಬಿದ್ರೆ ಮಹಾವೀರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಸ್.ಪಿ. ವಿದ್ಯಾಕುಮಾರ್, ಆತ್ಮನಿಗಂಟಿದ ಕರ್ಮದ ಕೊಳೆಯನ್ನು ಕಳೆಯುವ ಪರ್ವವೇ ದಶಲಕ್ಷಣ ಪರ್ವ. ಕ್ರೋಧಕ್ಕಿಂತ ಮಿಗಿಲಾದ ಪಾಪವಿಲ್ಲ. ಒರಟುತನ ಬಿಡುವುದೇ ಕ್ಷಮಾಧರ್ಮವಾಗಿದೆ. ಮೃದು ವ್ಯವಹಾರದಿಂದ ಕ್ರೋಧ ಶಮನವಾಗುತ್ತದೆ ಎಂದು ಅವರು ಹೇಳಿದರು. ಧರ್ಮದಲ್ಲಿ ಅತಿ ಶ್ರೇಷ್ಠ ಧರ್ಮ ಕ್ಷಮಾಧರ್ಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಶಿವಪ್ರಸಾದ ಅಜಿಲರು ಶುಭಾಶಂಸನೆ ಮಾಡಿದರು. ಪ್ರವೀಣ್ ಕುಮಾರ್ ಮತ್ತು ಜಯರಾಜ ಕಂಬಳಿ ಉಪಸ್ಥಿತರಿದ್ದರು.
ಪ್ರವೀಣಕುಮಾರ್ ಇಂದ್ರ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಮಹಾವೀರ ಜೈನ್ ವಂದಿಸಿದರು.