ಉಳ್ಳಾಲ ತಾಲೂಕಿನಲ್ಲಿ ಮಿನಿ ವಿಧಾನಸೌಧ ಇಲ್ಲದೆ ದಿನನಿತ್ಯ ಪರದಾಡುತ್ತಿರುವ ಜನಸಾಮಾನ್ಯರು
Tuesday, September 22, 2026
ಉಳ್ಳಾಲ: ಉಳ್ಳಾಲ ತಾಲೂಕಾಗಿ ಆರೇಳು ವರ್ಷಗಳು ಕಳೆದಿದೆ. ಇಲ್ಲಿವರೆಗೂ ತಾಲೂಕಿಗೆ ಸಲ್ಲಬೇಕಾದ ಮಿನಿವಿಧಾನಸೌಧ ನಿರ್ಮಾಣ ಆಗಿಲ್ಲ. ಉಳ್ಳಾಲ ತಹಶೀಲ್ದಾರ್ ಕಚೇರಿ ಒಂದು ಕಡೆ, ತಾಲೂಕು ಪಂಚಾಯತ್ ಕಚೇರಿ ಇನ್ನೊಂದು ಕಡೆ, ಕಂದಾಯ ನಿರೀಕ್ಷಕರ ಕಚೇರಿ ಮತ್ತ್ತೊಂದು ಕಡೆಯಲ್ಲಿ ಕಚೇರಿಯಲ್ಲಿ ಕಾರ್ಯಾಚರಿಸುತ್ತಿದೆ.. ಇದರಿಂದ ಜನಸಾಮಾನ್ಯರು ದಿನನಿತ್ಯ ತಮ್ಮ ಕೆಲಸಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಹಶೀಲ್ದಾರ್ ಕಚೇರಿಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ಜನರು ಆದಾಯ, ಜಾತಿ ಪ್ರಮಾಣ ಪತ್ರ ಪಡೆಯಲು ದಿನವಿಡೀ ಸರತಿ ಸಾಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಬ್ಬಂದಿಗಳ ಕೊರತೆಯಿಂದ ಜಾತಿ, ಆದಾಯ ಪ್ರಮಾಣ ಪತ್ರದ ಅರ್ಜಿ ಸ್ವೀಕೃತಿ ಹಾಗೂ ವಿತರಣೆ ಒಂದೇ ಕೌಂಟರ್ ನಲ್ಲಿ ಮಾಡಬೇಕಾದಂತಹ ಪರಿಸ್ಥಿತಿ ಇದೆ. ಇದರಿಂದ ಜನಸಾಮಾನ್ಯರು ಗಂಟೆಗಟ್ಟಲೆ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಕಾಯಬೇಕಾದಂತಹ ಕೆಟ್ಟ ಪರಿಸ್ಥಿತಿ. ಸ್ಥಳೀಯ ಶಾಸಕರಿಗೆ ಇದರ ಬಗ್ಗೆ ಗೋಚರವೇ ಇಲ್ಲ...
ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಜನರು ಶೌಚಾಲಯ ಉಪಯೋಗ ಮಾಡಬೇಕೆಂದರೆ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ.. ಇರುವ ಶೌಚಾಲಯ ಗಬ್ಬು ನಾರುತಿದೆ. ಅಭಿವೃದ್ದಿಯ ಹರಿಕಾರ ಎಂದು ಬಗೆಬಗೆಯ ಬ್ಯಾನರ್ ಹಾಕಿಸುವ ಶಾಸಕರು ಒಮ್ಮೆ ಸಮಯ ಮೀಸಲಿಟ್ಟು ಈ ಕಚೇರಿಯ ಕಡೆ ಬಂದು ಕಣ್ಣು ಹಾಯಿಸಿ ನೋಡಬೇಕು.. ಕಚೇರಿಯಿಂದ ಕಚೇರಿಗೆ ಅಲೆದು ಜನರು ಸುಸ್ತಾಗಿ ಹೋಗಿದ್ದಾರೆ. ಶಾಸಕರು ಇನ್ನಾದರೂ ಎಚ್ಚೆತ್ತು ಎಲ್ಲಾ ಕಚೇರಿಗಳು ಒಂದೇ ಸೂರಿನಡಿಯಲ್ಲಿ ಬರುವ ಮಿನಿವಿಧಾನಸೌಧ ಶೀಘ್ರ ಸ್ಥಾಪನೆ ಮಾಡಬೇಕಾಗಿ ಡಿವೈಎಫ್ಐ ಉಳ್ಳಾಲ ತಾಲೂಕು ಸಮಿತಿ ಒತ್ತಾಯಿಸಿದೆ.




