ರಾಷ್ಟ್ರೀಯ ಸಂಶೋಧನಾ ಕೇಂದ್ರವಾಗಿ ಮಂಜೇಶ್ವರ‌ ಗಿಳಿವಿಂಡು: ಗೋವಿಂದ ಪೈ ಸ್ಮಾರಕ ಟ್ರಸ್ಟ್ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮೊಯ್ಲಿ ಘೋಷಣೆ

ರಾಷ್ಟ್ರೀಯ ಸಂಶೋಧನಾ ಕೇಂದ್ರವಾಗಿ ಮಂಜೇಶ್ವರ‌ ಗಿಳಿವಿಂಡು: ಗೋವಿಂದ ಪೈ ಸ್ಮಾರಕ ಟ್ರಸ್ಟ್ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮೊಯ್ಲಿ ಘೋಷಣೆ


ಮಂಜೇಶ್ವರ‌: ರಾಷ್ಟ್ರಕವಿ ಮಂಜೇಶ್ವರ‌ ಗೋವಿಂದ ಪೈ ಅವರ ಮಂಜೇಶ್ವರ‌ದಲ್ಲಿರುವ ನಿವಾಸ ಗಿಳಿವಿಂಡು ಮತ್ತು ಅವರ ಜಮೀನು ರಾಷ್ಟ್ರೀಯ ಸಂಶೋಧನಾ ಕೇಂದ್ರವಾಗಿ ಬೆಳವಣಿಗೆ ಕಾಣಬೇಕು ಎನ್ನುವ ದೃಷ್ಟಿಯಿಂದ ಎಲ್ಲರ ಸಹಕಾರದಿಂದ  ಪ್ರಯತ್ನ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಗೋವಿಂದ ಪೈ ಟ್ರಸ್ಟ್ ಅಧ್ಯಕ್ಷ ಡಾ. ಎಂ. ವೀರಪ್ಪ ಮೊಯ್ಲಿ ಹೇಳಿದರು.


ಮಂಜೇಶ್ವರ‌ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಮಂಜೇಶ್ವರ‌ ಇದರ 2026- 27 ನೇ ಸಾಲಿನ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮವನ್ನು ಶನಿವಾರ ಮಂಜೇಶ್ವರ ಗಿಳಿವಿಂಡುವಿನ ಪಾರ್ತಿಸುಬ್ಬ ವೇದಿಕೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.


ಕೇರಳ-ಕರ್ನಾಟಕ ಉಭಯ ರಾಜ್ಯಗಳ ಸಹಭಾಗಿತ್ವದಲ್ಲಿ ಇಲ್ಲಿ ಕೆಲಸಗಳು ನಡೆಯುತ್ತಿದ್ದು, ಕನ್ನಡ, ಮಲಯಾಳಂ ಸಹಿತ ಓರ್ವ ರಾಷ್ಟ್ರಕವಿಯ ಸ್ಥಾನಕ್ಕೆ ಎಲ್ಲ ಭಾಷೆ, ಸಂಸ್ಕೃತಿಗಳ ಸಂಶೋಧನೆ, ಪುನರುತ್ಥಾನ ಸಂಬಂಧಿಸಿ ಕೆಲಸಗಳು ನಡೆಯಬೇಕು ಎಂದು ಅವರು ಹೇಳಿದರು.


ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಒಂದು ಅಥವಾ ಎರಡು ಕಾರ್ಯಕ್ರಮಗಳು ನಡೆಯುವಂತೆ ಯೋಜನೆ ರೂಪಿಸಲಿದೆ. ಉಭಯ ರಾಜ್ಯಗಳ ಸಾಹಿತ್ಯ ಮತ್ತು ಪೈ ಅಭಿಮಾನಿಗಳು, ಸ್ಥಳೀಯರು, ಸಾಹಿತಿಗಳು, ಕಲಾಭಿಮಾನಿಗಳ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದು ವೀರಪ್ಪ ಮೊಯ್ಲಿ ವಿವರಿಸಿದರು.


ಎಲ್ಲರೂ ತೇರು ಎಳೆಯುವ ಕೆಲಸ:

ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿ ಡಾ. ರಮಾನಂದ ಬನಾರಿ ಅವರು, ರಾಷ್ಟ್ರದ ಆಡಳಿತ ಸುಧಾರಣೆಯಲಲ್ಲಿ‌ಮಹತ್ವದ ಕೆಲಸ ನಡೆಸಿ ಅನುಭವ ಹೊಂದಿರುವ ಮತ್ತು ಸ್ವತಃ ಸಾಹಿತಿಯಾಗಿ ರಾಷ್ಟ್ರಕವಿಯ ಮಹತ್ವ ಅರಿತಿರುವ ವೀರಪ್ಪ ಮೊಯ್ಲಿ ಅವರು ಗೋವಿಂದ ಪೈ ಸ್ಮಾರಕ ಯೋಜನೆ ಕುರಿತು ದೂರದೃಷ್ಟಿಯ ಯೋಜನೆ ಹೊಂದಿದ್ದಾರೆ. ಕವಿ ಜಿ.ಎಸ್. ಶಿವರುದ್ರಪ್ಪ ಅವರು ಕಾವ್ಯದಲ್ಲಿ ತಿಳಿಸಿದಂತೆ ನಾವು ಎಲ್ಲರೂ ತೇರು ಎಳೆಯುವ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಮಾಸ್ಟರ್ ಪ್ಲಾನ್ ರಚನೆ:

ಮಂಜೇಶ್ವರ‌ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್ ಅವರು ಮಾತನಾಡಿ, ಪೈ ಸ್ಮಾರಕ ಸಂಬಂಧಿಸಿ ಅಲ್ಪಾವಧಿ ಹಾಗೂ ದೀರ್ಘಾವಧಿಯ ಕಾರ್ಯಕ್ರಮ ಗಳನ್ನು ಒಳಗೊಂಡಿರುವ ಮಾಸ್ಟರ್ ಪ್ಲಾನ್ ರಚಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ ಅವರು ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ದೀರ್ಘ ಕಾಲ ದುಡಿದಿರುವ ಡಾ.ರಮಾನಂದ ಬನಾರಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒದಗಿಸಲು ವೀರಪ್ಪ ಮೊಯ್ಲಿಯವರು ಪ್ರಯತ್ನಿಸುವಂತೆ ಮನವಿ ಮಾಡಿಕೊಂಡರು.

ಮಂಜೇಶ್ವರ‌ ಗ್ರಾ.ಪಂ. ಅಧ್ಯಕ್ಷ ಬಶೀರ್ ಕನಿಲ ಶುಭಾಶಯ ಕೋರಿದರು.

ತಾಳಮದ್ದಳೆ ಸಂಯೋಜಕ ಸತೀಶ್ ಅಡಪ ಸಂಕಬೈಲು ಅವರನ್ನು ಗೌರವಿಸಲಾಯಿತು. ಟ್ರಸ್ಟ್ ಆಡಳಿತಾಧಿಕಾರಿ ಡಾ.ಉದಯ ಕುಮಾರ್ ಇರ್ವತ್ತೂರು ಕಾರ್ಯಕ್ರಮ ನಿರ್ವಹಿಸಿದರು. ಟ್ರಸ್ಟಿಗಳಾದ ಕೆ. ತೇಜೋಮಯ ಅತಿಥಿಗಳನ್ನು ಗೌರವಿಸಿದರು. ಸುಭಾಶ್ಚಂದ್ರ ಕಣ್ವತೀರ್ಥ ಸ್ವಾಗತಿಸಿದರು. ರತ್ನಾಕರ ಆಳ್ವ ತಲಪಾಡಿ ಪ್ರಾರ್ಥನೆ ಹಾಡಿದರು. 

ಸಭೆಯ ಬಳಿಕ ಗೋವಿಂದ ಪೈ ಅವರ 'ಹೆಬ್ಬೆರಳು' ಸಾಹಿತ್ಯ ಆಧರಿಸಿದ 'ಗುರುದಕ್ಷಿಣೆ' ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಂಡಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article