ಉಪ್ಪಿನಂಗಡಿ ಗ್ರಾಪಂ ಕಚೇರಿಗೆ ಲೋಕಾಯುಕ್ತ ಧಿಡೀರ್ ದಾಳಿ: ಪಿಡಿಒ ವಿರುದ್ದ ಸಾರ್ವಜನಿಕರಿಂದ ಆರೋಪದ ಸುರಿಮಳೆ

ಉಪ್ಪಿನಂಗಡಿ ಗ್ರಾಪಂ ಕಚೇರಿಗೆ ಲೋಕಾಯುಕ್ತ ಧಿಡೀರ್ ದಾಳಿ: ಪಿಡಿಒ ವಿರುದ್ದ ಸಾರ್ವಜನಿಕರಿಂದ ಆರೋಪದ ಸುರಿಮಳೆ


ಉಪ್ಪಿನಂಗಡಿ: ಉಪ್ಪಿನಂಗಡಿ ಗ್ರಾಮಪಂಚಾಯಿತಿ ಕಚೇರಿಗೆ ಬುಧವಾರ ಧಿಡೀರ್ ದಾಳಿ ನಡೆಸಿರುವ ಲೋಕಾಯುಕ್ತ ತಂಡ ಕಚೇರಿಯಲ್ಲಿ ವಿವಿಧ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಲೋಕಾಯುಕ್ತ ಡಿವೈಎಸ್ಪಿ ಗಾನಾ ಕುಮಾರ್ ನೇತೃತ್ವದಲ್ಲಿ ಬಂದಿರುವ ಲೋಕಾಯುಕ್ತ ತಂಡ ಕಡತಗಳ ಪರಿಶೀಲನೆ ನಡೆಸಿದ್ದು, ಸಾರ್ವಜನಿಕರಿಂದ ಗ್ರಾಮಪಂಚಾಯಿತಿಯ ಭ್ರಷ್ಟಾಚಾರದ ವಿರುದ್ಧ 18 ದೂರುಗಳನ್ನು ಸ್ವೀಕರಿಸಿತು. ಈ ದೂರುಗಳನ್ನು ಸಂಬಂಧಪಟ್ಟ ಇಲಾಖೆಯ ಮುಖ್ಯಾಧಿಕಾರಿಗಳಿಗೆ ನೀಡಿ ತನಿಖೆ ನಡೆಸಿ ಕ್ರಮಕೈಗೊಳ್ಳುವ ಭರವಸೆಯನ್ನು ಲೋಕಾಯುಕ್ತ ಡಿವೈಎಸ್ಪಿ ಗಾನಾ ಕುಮಾರ್ ಸಾರ್ವಜನಿಕರಿಗೆ ನೀಡಿದರು. 

ಪಂಜಳದ ಶಾಲಿವಾಹನ ಪೆಟ್ರೋಲ್ ಪಂಪು ಮಾಲೀಕ ಚಂದ್ರಶೇಖರ ತಾಳ್ತಜೆ ಅವರು ಪೆಟ್ರೋಲ್ ಪಂಪು ನವೀಕರಣಕ್ಕೆ ಅರ್ಜಿಯನ್ನು ಗ್ರಾಮಪಂಚಾಯಿತಿಯಲ್ಲಿ ಸ್ವೀಕರಿಸುತ್ತಿಲ್ಲ. ಹಲವು ತಿಂಗಳುಗಳಿಂದ ಇದಕ್ಕಾಗಿ ಅಲೆದಾಡುತ್ತಿದ್ದೇನೆ. ನನ್ನ ಮಾಲಕತ್ವದ ಕಟ್ಟಡಗಳ ತೆರಿಗೆಯನ್ನೂ ಸ್ವೀಕರಿಸುತ್ತಿಲ್ಲ. ಯಾಕೆ ಎಂದು ಸಿಬಂದಿಗಳಲ್ಲಿ ಪ್ರಶ್ನೆ ಮಾಡಿದರೆ ಅಭಿವೃದ್ಧಿ ಅಧಿಕಾರಿ ತೆಗೆದುಕೊಳ್ಳಬೇಡಿ ಎಂದು ತಿಳಿಸಿದ್ದಾರೆ. 

ಲಂಚಕೊಟ್ಟರೆ ಮಾತ್ರ ಇಲ್ಲಿ ಕೆಲಸ ನಡೆಯುತ್ತದೆ ಎಂದು ಆರೋಪಿಸಿದರು. ಉಲ್ಲಾಸ್ ಬಾರ್ ಮಾಲಕ ಕರುಣಾಕರ ಸುವರ್ಣ ಅವರು ಬಾರ್ ಪರವಾನಿಗೆ ನವೀಕರಣ ಮಾಡಿಕೊಡುತ್ತಿಲ್ಲ ಎಂದು ದೂರಿದರು. ನಿರಾಳ ಬಾರ್ ಮಾಲಕ ನವೀನ್ ರೈ, ಕಾರ್ತಿಕ್ ಬಾರ್ ಮಾಲಕ ಆದಿತ್ಯ ಭಟ್ ಕೂಡಾ ಇದೇ ದೂರು ಹೇಳಿದರು. ಪಂಚಾಯಿತಿ ವಾಣಿಜ್ಯ ಸಂಕೀರ್ಣಗಳ ಕೊಠಡಿ ಏಲಂ ಅವಧಿ ಮುಗಿದಿದ್ದರೂ ಮರು ಏಲಂ ಮಾಡುತ್ತಿಲ್ಲ ಎಂದು ರಹಿಮಾನ್ ತಿಳಿಸಿದರು. ಉಪ್ಪಿನಂಗಡಿಯ ಕೆಲ ಮಂದಿ ವರ್ತಕರು ಗ್ರಾಮಪಂಚಾಯಿತಿನಲ್ಲಿ ಹಣದ ಅವ್ಯವಹಾರ ನಡೆಯುತ್ತಿದೆ. ಪರವಾನಿಗೆ ನವೀಕರಣಕ್ಕೆ ಬೃಹತ್ ಮೊತ್ತದ ಲಂಚದ ಬೇಡಿಕೆ ಇಡುತ್ತಿದ್ದಾರೆ ಎಂದು ದೂರು ನೀಡಿದರು. 

ಸಾರ್ವಜನಿಕರಿಂದ ದೂರುಗಳನ್ನು ಆಲಿಸಿದ ಗಾನಾಕುಮಾರ್ ಅವರು ಯಾವುದೇ ಅರ್ಜಿಬಂದರೂ ತೆಗೆದುಕೊಂಡು ಅದಕ್ಕೆ ಬೇಕಾದ ಹಿಂಬರಹ ನೀಡುವುದು ನಿಮ್ಮ ಜವಾಬ್ದಾರಿ. ಪಿಡಿಒ ಹೇಳಿದರೂ ನೀವು ನಿಮ್ಮ ಕರ್ತವ್ಯ ಮಾಡಬೇಕು ಎಂದು ಸಿಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. 

ಲಕ್ಷ ಲಂಚದ ಬೇಡಿಕೆ:

ಉಪ್ಪಿನಂಗಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಪೆರಿಯಡ್ಕ ಜನತಾ ಕಾಲೊನಿ ನಿವಾಸಿಯಾಗಿರುವ ವಿಕಲಚೇತನರೊಬ್ಬರು ವೈಯುಕ್ತಿಕ ಕೆಲಸಗಳಿಗೆ ಸಂಬಂಧಿಸಿ 1 ಲಕ್ಷ ಲಂಚದ ಬೇಡಿಕೆಯನ್ನು ಪಿಡಿಒಇಟ್ಟಿದ್ದಾರೆ ಎಂದು ದೂರಿದರು. ಅಶ್ರಫ್ ಎಂಬವರು ಲೋಕಾಯುಕ್ತಕ್ಕೆ ಈ ದೂರು ನೀಡಿ ಅಗತ್ಯ ದಾಖಲೆಗಳಿದ್ದರೂ ಕೆಲಸ ಮಾಡಿಕೊಡಲಿಲ್ಲ. ಬದಲಿಗೆ ಲಂಚ ಕೊಡಬೇಕು ಎಂದು ಬೇಡಿಕೆ ಇಟ್ಟರು. ಪಿಡಿಒ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. 

ಸಾರ್ವಜನಿಕರಿಂದ ದೂರು ಸ್ವೀಕರಿಸಿದ ಲೋಕಾಯುಕ್ತ ಡಿವೈಎಸ್ಪಿ ಗಾನಾ ಕುಮಾರ್ ಅವರು ತನಿಖೆ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಗ್ರಾಮಪಂಚಾಯಿತಿ ಕಡತಗಳನ್ನು ಪರಿಶೀಲನೆ ಮಾಡಿದ್ದಾರೆ. ಆದರೆ ಪಿಡಿಒ ಮಾತ್ರ ಕಚೇರಿಯಲ್ಲಿ ಲಭ್ಯ ಇರಲಿಲ್ಲ. ಜಿಪಂ ಅಧಿಕಾರಿ ದಿವಾಕರ್ ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article