ಸಿದ್ದಕಟ್ಟೆಯಲ್ಲಿ ಚೂರಿ ಇರಿತ, ಕ್ಷುಲ್ಲಕ ಕಾರಣಕ್ಕೆ ನಡೆದ ಘಟನೆ
ಬಂಟ್ವಾಳ: ಕ್ಷುಲ್ಲಕ ವಿಚಾರಕ್ಕೆ ಆರು ಮಂದಿ ಯುವಕರ ತಂಡವೊಂದು ವ್ಯಕ್ತಿಯೋರ್ವರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಸಿದ್ದಕಟ್ಟೆ ಜಂಕ್ಷನ್‌ನಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಈ ಸಂದರ್ಭ ಸಿದ್ದಕಟ್ಟೆಯಲ್ಲಿ ಶ್ರೀಶಾರದ ಮಾತೆಯ ಶೋಭಾಯಾತ್ರೆಯು ನಡೆಯುತ್ತಿದ್ದು, ಘಟನೆ ನೆರದ ಜನರಲ್ಲಿ ಕೆಲ ಕಾಲ ಗೊಂದಲಕ್ಕು ಕಾರಣವಾಯಿತೆಂದು ಹೇಳಲಾಗಿದೆ. ಈ ಘಟನೆಗೂ ಶಾರದೆಯ ಶೋಭಾಯಾತ್ರೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿದುಬಂದಿದೆ.
ಆರೋಪಿಗಳು ಹಾಗೂ ಗಾಯಾಳುವಿನ ಮಧ್ಯದ ವಯಕ್ತಿಕ ವಿಚಾರದಲ್ಲೊ ಕೃತ್ಯ ನಡೆದಿದೆಯೆನ್ನಲಾಗಿದ್ದು, ಈ ಸಂಬಂಧವಾಗಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಂಗಬೆಟ್ಟು ಗ್ರಾಮದ ಮಂಚಕಲ್ಲು ನಿವಾಸಿ ಪ್ರಕಾಶ್ ಪೂಜಾರಿ ಎಂಬವರು ಚೂರಿ ಇರಿತಕ್ಕೊಳಗಾಗಿದ್ದು, ಮೂಡಬಿದ್ರೆಯ ಆಸ್ಪತ್ರೆಯೊಂದರಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕಾಶ್ ತನ್ನ ಐವರು ಸ್ನೇಹಿತರೊಂದಿಗೆ ಸಿದ್ದಕಟ್ಟೆ ಜಂಕ್ಷನ್‌ನಲ್ಲಿ ನಿಂತಿದ್ದ ವೇಳೆ ದ್ವಿಚಕ್ರ ವಾಹನಗಳಲ್ಲಾಗಮಿಸಿದ ಅಕ್ಷಿತ್, ಕಿರಣ್ ಅಲಿಯಾಸ್ ರಂಜು, ಅಜಿತ್, ಧನುಷ್, ಸಂತೋಷ್ ಹಾಗೂ ರಾಜು ಎಂಬವರು ತಮ್ಮ ವಾಹನಗಳನ್ನು ಸಿದ್ದಕಟ್ಟೆ ಜಂಕ್ಷನ್ ನಿಂದ ಸ್ವಲ್ಪ ಮುಂದಕ್ಜೆ ನಿಲ್ಲಿಸಿ ಪ್ರಕಾಶ್ ಅವರನ್ನು ಅಲ್ಲಿಗೆ ಕರೆದಿದ್ದಾರೆ ಎನ್ನಲಾಗಿದೆ.
ಅದರಂತೆ ಪ್ರಕಾಶ್ ಅಲ್ಲಿಗೆ ತೆರಳಿದಾಗ ಆರೋಪಿಗಳು ಅಕ್ರಮಕೂಟ ಸೇರಿ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಅಕ್ಷಿತ್ ಎಂಬಾತ ಪ್ರಕಾಶ್ ಅವರಿಗೆ ಚೂರಿಯಿಂದ ಹಲವು ಬಾರಿ ಇರಿದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತಕ್ಷಣ ಗಾಯಾಳುವನ್ನು ಅವರ ಸಹೋದರ ಗಣೇಶ್ ಹಾಗೂ ಇತರರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಗಣೇಶ್ ಅವರ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.