ಆರೋಗ್ಯವಿದ್ದರೆ ಉತ್ತಮ ಕೆಲಸ ಮಾಡಲು ಸಾಧ್ಯ: ರಾಜೇಂದ್ರ ಪ್ರಸಾದ್ ಕೆ.ಎಸ್.
ಬಂಟ್ವಾಳ: ಒತ್ತಡದ ಜೀವನಶೈಲಿಯಲ್ಲಿ ಅನೇಕರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದಿಲ್ಲ. ಅನಾರೋಗ್ಯ ಕಾಣಿಸಿಕೊಂಡ ಬಳಿಕ ವೈದ್ಯರನ್ನು ಸಂಪರ್ಕಿಸುವ ಬದಲು, ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಿದೆ ಎಂದು ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಜೆಎಂಎಫ್‌ಸಿ ರಾಜೇಂದ್ರ ಪ್ರಸಾದ್ ಕೆ.ಎಸ್. ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘ, ಬಂಟ್ವಾಳ ವಕೀಲರ ಸಂಘ ಹಾಗೂ ಯೆನೆಪೋಯ ವಿಶ್ವವಿದ್ಯಾಲಯದ ಜಂಟಿ ಆಶ್ರಯದಲ್ಲಿ ಬುಧವಾರ ಬಂಟ್ವಾಳ ಕೋರ್ಟ್ ಆವರಣದಲ್ಲಿ ನಡೆದ ಉಚಿತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದರಿಂದ ಮುಂದಿನ ದಿನಗಳಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇಂತಹ ಶಿಬಿರಗಳು ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದರ ಜತೆಗೆ, ಆರಂಭಿಕ ಹಂತದಲ್ಲಿಯೇ ಆರೋಗ್ಯ ಸಮಸ್ಯೆಗಳನ್ನು ಗುರುತಿಸಲು ಸಹಕಾರಿಯಾಗುತ್ತವೆ ಎಂದರು.
ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶೆ ಸೌಂದರ್ಯ ಎಂ. ಮಾತನಾಡಿ, ಸದೃಢ ಹಾಗೂ ಆರೋಗ್ಯವಂತ ಸಮಾಜ ನಿರ್ಮಿಸುವ ಉದ್ದೇಶದಿಂದ ಉತ್ತಮ ಕಾರ್ಯವನ್ನು ಸಂಘಟಿಸಲಾಗಿದೆ. ಆರೋಗ್ಯದ ಕುರಿತ ಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಬೇಕು. ವೈದ್ಯಕೀಯ ತಪಾಸಣೆ ಮತ್ತು ಅಗತ್ಯ ಸಲಹೆಗಳನ್ನು ಪಡೆಯಲು ಇಂತಹ ಶಿಬಿರಗಳು ಉತ್ತಮ ಅವಕಾಶವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೊಸ್ತಾ ಎಂ. ಅಧ್ಯಕ್ಷತೆ ವಹಿಸಿದ್ದರು.
ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ, ನೇತ್ರ, ಚರ್ಮರೋಗ ತಪಾಸಣೆ, ರಕ್ತದ ಗುಂಪು ವರ್ಗೀಕರಣ, ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣೆ ನಡೆಸಲಾಯಿತು.
ಸರಕಾರಿ ಅಭಿಯೋಜಕ ಬಿ.ವಿ. ಶೆಣೈ, ವೈದ್ಯಕೀಯ ಅಧಿಕಾರಿ ಡಾ. ಆಯಿಶಾ, ಟ್ಯೂಟರ್ ಡಾ. ರಿಯಾಜ್, ಹಿರಿಯ ದಂತ ಸಂಯೋಜನಾಧಿಕಾರಿ ಭರತ್ ಕುಮಾರ್ ಹಾಗೂ ವೈದ್ಯಕೀಯ ಸಮಾಜ ಸೇವಕಿ ಸ್ವೀಕೃತ ಉಪಸ್ಥಿತರಿದ್ದರು.
ಬಂಟ್ವಾಳ ವಕೀಲರ ಸಂಘದ ಕಾರ್ಯದರ್ಶಿ ಕೆ. ನರೇಂದ್ರನಾಥ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.