ಮಾಸ್ತಿಕಟ್ಟೆ ಬಳಿ ನೇತ್ರಾವತಿ ನದಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಅಕ್ರಮ ಮರಳು ದಂಧೆ: ದೂರು

ಮಾಸ್ತಿಕಟ್ಟೆ ಬಳಿ ನೇತ್ರಾವತಿ ನದಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಅಕ್ರಮ ಮರಳು ದಂಧೆ: ದೂರು


ಬಂಟ್ವಾಳ: ಪಾಣೆಮಂಗಳೂರು ಗ್ರಾಮದ ಮಾಸ್ತಿಕಟ್ಟೆ ಬಳಿ ನೇತ್ರಾವತಿ ನದಿಯಲ್ಲಿ ಅವ್ಯಾಹತವಾಗಿ ಅಕ್ರಮವಾಗಿ ಮರಳುದಂಧೆ ನಡೆಯುತ್ತಿದೆ ಎಂದು ಆರೋಪಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ.

ಪಾಣೆಮಂಗಳೂರಿನ ಗಣೇಶ್ ನಾಯಕ್ ಎಂಬವರು ಈ ಬಗ್ಗೆ ಬಂಟ್ಚಾಳ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಇದರ ಪ್ರತಿಯನ್ನು ಗಣಿ ಇಲಾಖೆಗೂ ರವಾನಿಸಿದ್ದಾರೆ.

ಮಾಸ್ತಿಕಟ್ಟೆ ಬಳಿ ನೇತ್ರಾವತಿ ನದಿಯಿಂದ ಅಕ್ರಮವಾಗ ಮರಳನ್ನು ಹೊರ ತೆಗದು ವಾಹನಗಳಲ್ಲಿ ಸಾಗಾಟ ಮಾಡಲಾಗುತ್ತಿದ್ದು, ಈಗಾಗಲೇ ಹಲವುಬಾರಿ ಪೊಲೀಸರು ಮತ್ತು ಗಣಿ ಇಲಾಖೆಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದೀಗ ಮತ್ತೆ ಅರಫಾ ಅನ್ವರ್ ಎಂಬವರ ನೇತೃತ್ವದಲ್ಲಿ ಮತ್ತೆ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಈ ಬಗ್ಗೆ ದೂರಿನ ಮೇರೆಗೆ ಗಸ್ತು ಪೊಲೀಸರು ಸ್ಥಳಕ್ಕಾಗಮಿಸಿ, ಅಕ್ರಮ ಮರಳುಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಎಚ್ಚರಿಕೆ ನೀಡಿದರೂ ಇದಕ್ಕೆ ಸೊಪ್ಪು ಹಾಕದ ಆರೋಪಿಗಳು ತಮ್ಮ ದಂಧೆಯನ್ನು ಮುಂದುವರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸಜಿಪ ಮುನ್ನೂರು ಗ್ರಾಮದ ಸರ್ವೆ ನಂಬ್ರ 200 ರಲ್ಲಿ ಮರಳು ತೆಗೆಯಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಅನುಮತಿ ನೀಡುವ ಅವಕಾಶವಿದ್ದು, ಈ ಅನುಮತಿಯನ್ನು ದುರುಪಯೋಗಪಡಿಸಿಕೊಂಡು ಅಧಿಸೂಚಿತವಲ್ಲದ ಪ್ರದೇಶದಿಂದ ಮರಳು ತೆಗೆಯಲಾಗುತ್ತಿದೆ. ಇದರ ಪರಿಣಾಮ ಈ ಭಾಗದಲ್ಲಿರುವ 4 ಸೇತುವೆಗಳಿಗೆ ಹಾನಿಯಾಗುತ್ತಿದೆ. ಜೊತೆಗೆ ನದಿ ಮಾಲಿನ್ಯಕ್ಕೆ ಕೂಡಾ ಕಾರಣವಾಗುತ್ತಿದೆ ಎಂದು ಗಣೇಶ್ ನಾಯಕ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಇದೇ ತಂಡ ಕಳೆದ ಜೂನ್ ತಿಂಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಸಿದಾಗ ಗಣಿ ಇಲಾಖೆ ದಾಳಿ ನಡೆಸಿ ಮರಳನ್ನು ವಶಪಡಿಸಿತ್ತು ಎಂದು ದೂರಿನಲ್ಲಿ ತಿಳಿಸಿರುವ ಅವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article