ಭಜನೆಯ ಮೂಲಕ ಸಾತ್ವಿಕತೆ, ಸಾಮಾಜಿಕ ಪರಿವರ್ತನೆ: ಡಾ. ಡಿ. ವೀರೇಂದ್ರ ಹೆಗ್ಗಡೆ

ಭಜನೆಯ ಮೂಲಕ ಸಾತ್ವಿಕತೆ, ಸಾಮಾಜಿಕ ಪರಿವರ್ತನೆ: ಡಾ. ಡಿ. ವೀರೇಂದ್ರ ಹೆಗ್ಗಡೆ


ಧರ್ಮಸ್ಥಳ: ಭಜನೆಯ ಮೂಲಕ ವ್ಯಕ್ತಿಯಲ್ಲಿ ಸಾತ್ವಿಕತೆ ಬೆಳೆದು, ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆ ಸಾಧ್ಯವಾಗುತ್ತದೆ. ಯಾವುದೇ ಭೇದಭಾವವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಭಜನಾ ಪರಂಪರೆಯು ಸಾಮರಸ್ಯ ಮತ್ತು ಸಂಘಟನಾ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಭಜನಾ ಪರಿಷತ್ತಿನ ಪದಾಧಿಕಾರಿಗಳ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಜನಾ ಪರಿಷತ್ತಿನ ಕಾರ್ಯಚಟುವಟಿಕೆಗಳು ಯಾವುದೇ ಭೇದಭಾವವಿಲ್ಲದೆ ಉತ್ತಮವಾಗಿ ನಡೆಯುತ್ತಿವೆ. ಭಜನೋತ್ಸವಗಳ ಮೂಲಕ ವಿವಿಧ ಭಜನಾ ಮಂಡಳಿಗಳು ಒಂದೆಡೆ ಸೇರುವುದರಿಂದ ಪರಸ್ಪರ ಸಂಪರ್ಕ ಹೆಚ್ಚುವುದರ ಜೊತೆಗೆ ಸಂಘಟನೆ ಮತ್ತಷ್ಟು ಬಲಗೊಳ್ಳುತ್ತಿದೆ ಎಂದರು.

“ಭಜನೆಯಲ್ಲಿ ಮಕ್ಕಳು ಸಂತೋಷದಿಂದ ಪಾಲ್ಗೊಂಡು ಕುಣಿಯುವುದನ್ನು ನೋಡುವುದೇ ಒಂದು ಆನಂದ. ಭಜನಾ ಪರಿಷತ್ತಿನ ಎಲ್ಲ ಪದಾಧಿಕಾರಿಗಳ ಪರಿಶ್ರಮ ಅಭಿನಂದನೀಯ. ಜನರಲ್ಲಿ ಭಜನೆಯ ಬಗ್ಗೆ ಗೌರವ, ಆಸಕ್ತಿ ಮತ್ತು ಉತ್ಸಾಹ ಮೂಡಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ನಿರಂತರ ಪ್ರಯತ್ನ ಶ್ಲಾಘನೀಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭಜನೆಯು ಕೇವಲ ಭಕ್ತಿಯ ಅಭಿವ್ಯಕ್ತಿಗೆ ಸೀಮಿತವಾಗದೆ, ವಿವಿಧ ವರ್ಗಗಳ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಶಕ್ತಿಯಾಗಿದೆ. ಇದರಿಂದ ಸಾಮರಸ್ಯ, ಸಹಬಾಳ್ವೆ ಮತ್ತು ಪರಸ್ಪರ ಗೌರವದ ಭಾವನೆ ಗಟ್ಟಿಯಾಗುತ್ತದೆ. ಭಜನೋತ್ಸವಗಳು ಭಜನಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದರೊಂದಿಗೆ ಉತ್ತಮ ಸಂಸ್ಕಾರಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಡಾ. ಹೆಗ್ಗಡೆಯವರು ತಿಳಿಸಿದರು.

ಭಜನಾ ಪರಿಷತ್ತಿಗೆ ಸಂಘಟನಾ ಬಲ ಅಗತ್ಯ..

ಹೇಮಾವತಿ ವಿ. ಹೆಗ್ಗಡೆಯವರು ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ನಡೆಯುವ ನವರಾತ್ರಿ ಹಾಗೂ ದೀಪೋತ್ಸವಗಳಂತೆ ಭಜನಾ ಕಮ್ಮಟವೂ ನಿರಂತರವಾಗಿ ನಡೆಯುತ್ತಿರುವ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿದೆ. ಭಜನಾ ಕಮ್ಮಟವು ಊರಿನ ಜನರು ನಿರೀಕ್ಷಿಸುವ ಹಬ್ಬದಂತಾಗಿದೆ ಎಂದರು.

ಹಿಂದಿನಿಂದಲೂ ಭಜನಾ ಕಮ್ಮಟಗಳು ನಡೆಯುತ್ತಿದ್ದರೂ ಅವುಗಳಿಗೆ ವ್ಯವಸ್ಥಿತವಾದ ಪ್ರತ್ಯೇಕ ಸಂಘಟನೆ ಇರಲಿಲ್ಲ. ಇದೀಗ ಸಮನ್ವಯಾಧಿಕಾರಿಗಳನ್ನು ನೇಮಕ ಮಾಡಿರುವುದರಿಂದ ಭಜನಾ ಚಟುವಟಿಕೆಗಳನ್ನು ಮತ್ತಷ್ಟು ವ್ಯವಸ್ಥಿತವಾಗಿ ನಡೆಸಲು ಅನುಕೂಲವಾಗಿದೆ. “ಬಿತ್ತಿದ ಬೀಜ ಉತ್ತಮವಾಗಿ ಬೆಳೆಯಬೇಕಾದರೆ ಸೂಕ್ತ ವ್ಯವಸ್ಥೆ ಅಗತ್ಯ. ಅದೇ ರೀತಿ ಭಜನಾ ಪರಿಷತ್ತಿಗೂ ಪದಾಧಿಕಾರಿಗಳ ಬಲ ಮತ್ತು ಸಂಘಟನಾ ಶಕ್ತಿ ಅಗತ್ಯ” ಎಂದು ಹೇಳಿದರು.

ಶ್ರೀ ಕ್ಷೇತ್ರದಲ್ಲಿ ನಡೆಯುವ ವಿವಿಧ ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳಿಗೆ ಭಜನಾ ಚಟುವಟಿಕೆಗಳು ಮೂಲಕ್ಕೆ ನೀರುಣಿಸುವ ಕಾರ್ಯದಂತಿವೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಪುರುಷಾರ್ಥಗಳ ಅರಿವು ಮೂಡಿಸುವಲ್ಲಿ ಭಜನೆಯ ಪಾತ್ರ ಮಹತ್ವದ್ದಾಗಿದ್ದು, ಭಜನಾ ಮಂದಿರಗಳು ಧರ್ಮದ ಬೀಜ ಬಿತ್ತುವ ಕೇಂದ್ರಗಳಾಗಿವೆ ಎಂದರು.

ಭಜನಾ ಸಂಘಟನೆಗಳ ಮೂಲಕ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಪ್ರತಿಯೊಂದು ಊರಿನ ದೇವಸ್ಥಾನದ ಸ್ವಚ್ಛತೆಯನ್ನು ಆಯಾ ಊರಿನ ಜನರೇ ಕೈಗೊಳ್ಳುವ ಮನೋಭಾವ ಬೆಳೆಸಬೇಕು. ಯುವಶಕ್ತಿಗೆ ಸೂಕ್ತ ಮಾರ್ಗದರ್ಶನ ನೀಡಿ ಸಂಘಟನೆಯನ್ನು ಬಲಪಡಿಸುವ ಮೂಲಕ ಶ್ರೀ ಕ್ಷೇತ್ರದ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ಶಕ್ತಿ ತುಂಬಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಭಜನಾ ಕಮ್ಮಟದ ಸಂಚಾಲಕ ಜಿ. ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ. ವೀರುಶೆಟ್ಟಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾದೇಶಿಕ ಭಜನಾ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಉಪಾಧ್ಯಕ್ಷರಾದ ರಾಜೇಂದ್ರ ಬಸ್ರೂರು, ರತ್ನವರ್ಮ ಜೈನ್ ಹಾಗೂ ಕೇಶವ ಪಿ. ಬೆಳಾಲ್ ಉಪಸ್ಥಿತರಿದ್ದರು.

ಜಿ. ಸುಬ್ರಹ್ಮಣ್ಯ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ್ ಸಾಲ್ಯಾನ್ ಸ್ವಾಗತಿಸಿದರು. ಉಡುಪಿ ಸಮನ್ವಯಾಧಿಕಾರಿ ರವೀಂದ್ರ ಬಸ್ರೂರು ವಂದಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ಕಾರ್ಯಕ್ರಮ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article