ಬ್ರಹ್ಮಾವರ: ಸರಣಿ ಅಪಘಾತ ಮಹಿಳೆ ಗಂಭೀರ ಜಖಮ್
ಗಾಯಗೊಂಡ ಮಹಿಳೆಯನ್ನು ಬಾರ್ಕೂರು ನಿವಾಸಿ ಸರೀಟ ಎಂದು ಗುರುತಿಸಲಾಗಿದೆ.
ಇವರು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಶುಕ್ರವಾರ ಬೆಳಿಗ್ಗೆ ಬಾರ್ಕೂರಿನಿಂದ ಸಂತೆಕಟ್ಟೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಬೆಳಿಗ್ಗೆ ಸುಮಾರು 8 ಗಂಟೆಗೆ ಅಪಘಾತ ನಡೆದಿದೆ.
ಹಾಲಾಡಿಯಿಂದ ಉಪ್ಪಿನಂಗಡಿಗೆ ಕಟ್ಟಿಗೆ ತುಂಬಿಕೊಂಡು ತೆರಳುತ್ತಿದ್ದ ಲಾರಿಯ ಟಯರ್ ಹೆರೂರು ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಂಚರ್ ಆಗಿತ್ತು. ಟಯರ್ ದುರಸ್ತಿಗಾಗಿ ಲಾರಿಯನ್ನು ಹೆದ್ದಾರಿಯ ಎಡಭಾಗದಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ವಾಹನ ಸವಾರರಿಗೆ ಮುನ್ಸೂಚನೆ ನೀಡುವ ಯಾವುದೇ ಸೂಚನಾ ಫಲಕವನ್ನು ಅಳವಡಿಸದೆ, ಮೆಕ್ಯಾನಿಕ್ನನ್ನು ಕರೆಸಿ ಲಾರಿಯ ಸ್ಟೆಪ್ನಿ ಬದಲಿಸುವ ಕಾರ್ಯ ನಡೆಸಲಾಗುತ್ತಿತ್ತು ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ಬಾರ್ಕೂರಿನಿಂದ ಸಂತೆಕಟ್ಟೆಯತ್ತ ಸರೀಟ ಅವರು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಯ ಸಮೀಪಕ್ಕೆ ಬಂದಿದೆ. ಮೊದಲು ಸ್ಕೂಟರ್ಗೆ ಡಿಕ್ಕಿ ಹೊಡೆದ ಕಾರು, ಬಳಿಕ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಅಪ್ಪಳಿಸಿದೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಕೂಟರ್ ಕೂಡ ಜಖಂಗೊಂಡಿದೆ. ಕಾರಿನೊಳಗೆ ಸಿಲುಕಿಕೊಂಡಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು.
ತಕ್ಷಣ ಕೋಟದ ಜೀವನ್ ಮಿತ್ರ ಆಂಬುಲೆನ್ಸ್ ಚಾಲಕ ಕಿಶೋರ್ ಶೆಟ್ಟಿ ಹಾಗೂ ಸ್ಥಳೀಯರು ಕಾರ್ಯಪ್ರವೃತ್ತರಾಗಿ ಕಾರಿನೊಳಗೆ ಸಿಲುಕಿದ್ದ ಮಹಿಳೆಯನ್ನು ಹೊರತೆಗೆಯಲು ನೆರವಾದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಘಟನೆಯ ಮಾಹಿತಿ ತಿಳಿದು ಬ್ರಹ್ಮಾವರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.